ದೆಹಲಿಯಲ್ಲಿಂದು ವಿಪಕ್ಷಗಳ ಬೃಹತ್ ಸಮಾವೇಶ

ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಪಕ್ಷದ ವತಿಯಿಂದ ಆಯೋಜಿಸಿರುವ ಈ ಸಮಾವೇಶದಲ್ಲಿ ಮಮತಾ ಬ್ಯಾನರ್ಜಿ, ಎನ್. ಚಂದ್ರಬಾಬು ನಾಯ್ಡು, ಹೆಚ್.ಡಿ. ದೇವೇಗೌಡ, ನ್ಯಾಷನಲ್ ಕಾನ್ಫೆರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ, ಶರದ್ ಪವಾರ್ ಸಹಿತ ಹಲವು ನಾಯಕರು ಭಾಗಿಯಾಗಲಿದ್ದಾರೆ.

Last Updated : Feb 13, 2019, 10:27 AM IST
ದೆಹಲಿಯಲ್ಲಿಂದು ವಿಪಕ್ಷಗಳ ಬೃಹತ್ ಸಮಾವೇಶ title=

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಕೆಲವೇ ತಿಂಗಳುಗಳು ಮಾತ್ರ ಇವೆ. ವಿಪಕ್ಷಗಳು ಬಿಜೆಪಿ ವಿರುದ್ಧ ಒಂದಾಗಿದ್ದು, ಕೋಲ್ಕತ್ತದಲ್ಲಿ ಯಶಸ್ವಿಯಾಗಿ ವಿಪಕ್ಷಗಳ ಬೃಹತ್ ಸಮಾವೇಶ ನಡೆಸಿದ ಬಳಿಕ ಇದೀಗ ದೆಹಲಿಯಲ್ಲಿ ಇಂದು ವಿಪಕ್ಷಗಳ ಬೃಹತ್ ಸಮಾವೇಶ ನಡೆಯಲಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯನ್ನು ಶತಾಯಗತಾಯ ಕಟ್ಟಿಹಾಕಬೇಕೆಂದು ದೃಢ ನಿರ್ಧಾರ ಮಾಡಿರುವ ವಿರೋಧ ಪಕ್ಷಗಳು ರಾಷ್ಟ್ರ ರಾಜಧಾನಿಯಲ್ಲಿಂದು ಶಕ್ತಿ ಪ್ರದರ್ಶನ ನಡೆಸಲಿವೆ.

ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಪಕ್ಷದ ವತಿಯಿಂದ ಆಯೋಜಿಸಿರುವ ಈ ಸಮಾವೇಶದಲ್ಲಿ ಮಮತಾ ಬ್ಯಾನರ್ಜಿ, ಎನ್. ಚಂದ್ರಬಾಬು ನಾಯ್ಡು, ಹೆಚ್.ಡಿ. ದೇವೇಗೌಡ, ನ್ಯಾಷನಲ್ ಕಾನ್ಫೆರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ, ಶರದ್ ಪವಾರ್ ಸಹಿತ ಹಲವು ಘಟಾನುಘಟಿ ನಾಯಕರು ಭಾಗಿಯಾಗಲಿದ್ದಾರೆ.

ರ‍್ಯಾಲಿ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, "ನಮ್ಮ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವಕ್ಕಾಗಿ ಲೆಕ್ಕವಿಲ್ಲದಷ್ಟು ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ. ನಾವು ಅವರ ತ್ಯಾಗವನ್ನು ಮರೆಯಲು ಸಾಧ್ಯವಿಲ್ಲ. ಯಾವುದೇ ಸರ್ವಾಧಿಕಾರಿತ್ವದ ದಬ್ಬಾಳಿಕೆಯನ್ನು ಸಹಿಸಿ ಮೌನವಾಗಿ ಉಳಿಯಲು ಸಾಧ್ಯವಿಲ್ಲ. ಇಂದು ಮಧ್ಯಾಹ್ನ ಐತಿಹಾಸಿಕ ಜಂತರ್ ಮಂತರ್ನಲ್ಲಿ ನಡೆಯಲಿರುವ ಪ್ರಜಾಪ್ರಭುತ್ವ ಉಳಿಸಿ ಸತ್ಯಾಗ್ರಹಕ್ಕಾಗಿ ನಮ್ಮನ್ನು ಸೇರಿಕೊಳ್ಳಿ"  ಎಂದು ಕರೆ ನೀಡಿದ್ದಾರೆ.

"ಭಾರತವು ನಿರ್ಣಾಯಕ ಹಂತ ತಲುಪಿದೆ. ನಮ್ಮ ದೇಶದ ಲಕ್ಷಾಂತರ ಸ್ವಾತಂತ್ರ್ಯ ಯೋಧರ ತ್ಯಾಗದಿಂದ ಸ್ವಾತಂತ್ರ್ಯ ಲಭಿಸಿದೆ. ಮೋದಿ-ಷಾ ಇಬ್ಬರು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಹಾಳುಗೆಡವಿದ್ದಾರೆ" ಎಂದು ಎಎಪಿ ನಾಯಕ ಗೋಪಾಲ್ ರೈ ಹೇಳಿದರು.

ಈ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರಿಗೂ ಆಹ್ವಾನ ನೀಡಲಾಗಿದೆ. ಲೋಕಸಭಾ ಚುನಾವಣೆಗೆ ಎಎಪಿ ಮತ್ತು ಕಾಂಗ್ರೆಸ್ ನಡುವೆ  ಸೀಟು ಹೊಂದಾಣಿಕೆಯ ಮಾತುಕತೆ ನಡೆದಿದೆ ಎನ್ನಲಾಗುತ್ತಿದ್ದು, ಈ ಬಗ್ಗೆ ಉಭಯ ಪಕ್ಷಗಳು ಯಾವುದೇ ಹೇಳಿಕೆ ನೀಡಿಲ್ಲ. 
 

Trending News