ದೆಹಲಿ ನರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ ತಂಡ ೧೦ ಕೋಟಿ ರೂ. ಮೌಲ್ಯದ 1.9 ಕೆ.ಜಿ. ಕೊಕೇನ್ ಸಾಗಿಸುತ್ತಿದ್ದ ಅಮೆರಿಕದ ಮಹಿಳೆಯನ್ನು ದೆಹಲಿಯಲ್ಲಿ ಬಂಧಿಸಿದೆ. ಬ್ರೆಜಿಲ್ನ ಸಾವೊ ಪಾಲೊದಿಂದ ಇಥಿಯೋಪಿಯನ್ ವಿಮಾನಯಾನದ ಮೂಲಕ ಈ ಮಾದಕ ವಸ್ತುವನ್ನು ಭಾರತಕ್ಕೆ ಕಳ್ಳಸಾಗಣೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಮಹಿಳೆ ಸ್ಟೆಫನಿ ಕ್ಯಾಪ್ರಿಯೋ ಪೋಲಿಕಾರ್ಪಿಯೋ ಎಂದು ಗುರುತಿಸಲಾಗಿದ್ದು, ರಾಷ್ಟ್ರೀಯ ರಾಜಧಾನಿಯ ಪಹರ್ಗಂಜ್ ಪ್ರದೇಶದಲ್ಲಿರುವ ಪಿಂಕ್ ಸಿಟಿ ಹೋಟೆಲ್ನಿಂದ ಬಂಧಿಸಲಾಗಿದೆ.
ಬ್ರೆಜಿಲ್ನಲ್ಲಿ ನೈಜೀರಿಯಾದವರಿಂದ ದೊಡ್ಡ ಪ್ರಮಾಣದಲ್ಲಿ ಕೊಕೇನ್ ಪಡೆದಿದ್ದ ಈಕೆ, ಅದನ್ನು ಭಾರತಕ್ಕೆ ತಂದಿದ್ದಳು ಎನ್ನಲಾಗಿದೆ. ಫೆಬ್ರವರಿ 2017 ರಿಂದ ಈಕೆ ಸ್ಪೇನ್, ಸ್ವಿಟ್ಜರ್ಲ್ಯಾಂಡ್ ಮತ್ತು ಉಗಾಂಡಾಗೆ ಪ್ರಯಾಣಿಸಿರುವ ಬಗ್ಗೆ ಈಕೆಯ ಪಾಸ್ಪೋರ್ಟ್ ನಿಂದ ತಿಳಿದುಬಂದಿದೆ.
2017 ರಲ್ಲಿ ದೆಹಲಿ ಎನ್ಸಿಬಿ ಸುಮಾರು 20 ವಿದೇಶಿಯರನ್ನು ಬಂಧಿಸಿ, 26.34 ಕೆ.ಜಿ. ಕೊಕೇನ್ ವಶಪಡಿಸಿಕೊಂಡಿದೆ. ಅವರಲ್ಲಿ ಹೆಚ್ಚಿನವರು ದಕ್ಷಿಣ ಅಮೆರಿಕಾ ಮತ್ತು ಆಫ್ರಿಕಾದ ದೇಶಗಳಿಂದ ಬಂದವರಾಗಿದ್ದಾರೆ.