ಸರ್ವಪಕ್ಷ ಸಭೆಯಲ್ಲಿ ಪೌರತ್ವ ಕಾಯ್ದೆ ಜಾರಿಗೊಳಿಸುವಂತಿಲ್ಲ ಎಂದ ಶಿರೋಮಣಿ ಅಕಾಲಿ ದಳ

ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅಂಗೀಕರಿಸದಂತೆ ಎನ್ಡಿಎ ಮೈತ್ರಿಕೂಟದ ಸದಸ್ಯ ಪಕ್ಷವಾಗಿರುವ ಶಿರೋಮಣಿ ಅಕಾಲಿ ದಳ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.

Last Updated : Jan 30, 2020, 06:47 PM IST
ಸರ್ವಪಕ್ಷ ಸಭೆಯಲ್ಲಿ ಪೌರತ್ವ ಕಾಯ್ದೆ ಜಾರಿಗೊಳಿಸುವಂತಿಲ್ಲ ಎಂದ ಶಿರೋಮಣಿ ಅಕಾಲಿ ದಳ  title=

ನವದೆಹಲಿ: ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅಂಗೀಕರಿಸದಂತೆ ಎನ್ಡಿಎ ಮೈತ್ರಿಕೂಟದ ಸದಸ್ಯ ಪಕ್ಷವಾಗಿರುವ ಶಿರೋಮಣಿ ಅಕಾಲಿ ದಳ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.

ಗುರುವಾರದಂದು ನಡೆದ ಸರ್ವಪಕ್ಷಗಳ ಸಭೆಯಲ್ಲಿ ಅಕಾಲಿ ದಳದ ನಾಯಕ ಸರ್ದಾರ್ ಬಲ್ವಿಂದರ್ ಸಿಂಗ್ ಬುಂದರ್ ಈ ಕಾಯ್ದೆಯು ಜನರನ್ನು ವಿಭಜಿಸುತ್ತದೆ ಆದ್ದರಿಂದ ಇದನ್ನು ಅಂಗೀಕರಿಸಕೂಡದು ಎಂದು ಆಗ್ರಹಿಸಿದ್ದಾರೆ. ಆ ಮೂಲಕ ಈಗ ಮತ್ತೆ ಅಕಾಲಿ ದಳ ಪೌರತ್ವ ಕಾಯ್ದೆ ವಿಚಾರದಲ್ಲಿ ಸರ್ಕಾರಕ್ಕೆ ಯುಟರ್ನ್ ಹೊಡೆದಿದೆ. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಅಂಗೀಕರಿಸಿದ ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧ ದೇಶದ ಕೆಲವು ಭಾಗಗಳಲ್ಲಿ ಪ್ರತಿಭಟನೆಗಳು ನಡೆದ ಹಿನ್ನೆಲೆಯಲ್ಲಿ ರಾಜ್ಯಸಭಾ ಸದಸ್ಯರ ಹೇಳಿಕೆ ಬಂದಿದೆ.

ಅಕಾಲಿದಳ ಪೌರತ್ವ ತಿದ್ದುಪಡಿ ವಿಚಾರದಲ್ಲಿ ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿದ್ದರೂ ಸಹ ಇತ್ತೀಚಿಗಿನ ಕೆಲವು ವಾರಗಳಲ್ಲಿ ಈ ಕಾಯ್ದೆ ವಿಚಾರವಾಗಿ ತನ್ನ ನಿಲುವನ್ನು ಬದಲಾಯಿಸಿದೆ. ಈ ತಿಂಗಳ ಆರಂಭದಲ್ಲಿ, ದೆಹಲಿ ಚುನಾವಣೆಗೆ ಬಿಜೆಪಿಯೊಂದಿಗಿನ ಮೈತ್ರಿಯನ್ನು ಪಕ್ಷವು ರದ್ದುಗೊಳಿಸಿತ್ತು ಮತ್ತು ಪೌರತ್ವ ಕಾನೂನಿನ ಬಗ್ಗೆ ಅವರ ಭಿನ್ನಾಭಿಪ್ರಾಯವನ್ನು ಪ್ರಮುಖ ಅಂಶವೆಂದು ಉಲ್ಲೇಖಿಸಿತ್ತು.

ಆದರೆ ಏಕಾಏಕಿ ತನ್ನ ನಿಲುವನ್ನು ಬದಲಾಯಿಸಿ ದೆಹಲಿ ಚುನಾವಣೆಯಲ್ಲಿ ಬಿಜೆಪಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿತು. ಈ ಸಂದರ್ಭದಲ್ಲಿ ಅಕಾಲಿದಳದ ಸುಖ್ಬೀರ್ ಸಿಂಗ್ ಬಾದಲ್ ಕೆಲವು ತಪ್ಪು ತಿಳುವಳಿಕೆಯನ್ನು ಬಗೆ ಹರಿಸಿಕೊಳ್ಳಲಾಗಿದೆ ಎಂದು ಹೇಳಿದ್ದರು.'ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ತಾಲಿಬಾನ್ ಕೈಯಲ್ಲಿ ಬಳಲುತ್ತಿದ್ದ ಸಿಖ್ಖರ ಮೇಲೆ ನೇರವಾಗಿ ಪರಿಣಾಮ ಬೀರುವ ಕಾರಣ ನಾವು ಯಾವಾಗಲೂ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿದ್ದೇವೆ' ಎಂದು ಸುಖಬೀರ್ ಸಿಂಗ್ ಬಾದಲ್ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದರು.

ಆದರೆ ಈಗ ಗುರುವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಅಕಾಲಿ ದಳದ ಪ್ರತಿನಿಧಿ ಅಲ್ಪಸಂಖ್ಯಾತರಿಗೆ ಒತ್ತು ನೀಡಿದ್ದು ಅನೇಕ ವಿರೋಧ ಪಕ್ಷದ ಮುಖಂಡರಿಗೆ ಆಶ್ಚರ್ಯವನ್ನುಂಟು ಮಾಡಿತು. ಗುರುವಾರ ನಡೆದ ಸಭೆಯಲ್ಲಿ, ಎಐಎಡಿಎಂಕೆ ಹೊರತುಪಡಿಸಿ ಉಳಿದವರೆಲ್ಲರೂ ಪೌರತ್ವ ಕಾನೂನು ಮತ್ತು ನಾಗರಿಕರ ಉದ್ದೇಶಿತ ರಾಷ್ಟ್ರೀಯ ನೋಂದಣಿಯನ್ನು ತೀವ್ರವಾಗಿ ಟೀಕಿಸಿದರು.

ಗುಲಾಮ್ ನಬಿ ಆಜಾದ್ ಮತ್ತು ರಾಮ್ ಗೋಪಾಲ್ ಯಾದವ್ ಸೇರಿದಂತೆ ಪ್ರತಿಪಕ್ಷ ನಾಯಕರು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಮತ್ತು ಅವರ ಪುತ್ರ ಒಮರ್ ಅವರನ್ನು ಬಿಡುಗಡೆ ಮಾಡಬೇಕೆಂದು ಕರೆ ನೀಡಿದರು.

Trending News