'ರಫೇಲ್' ಲಡಾಯಿ: ಎಚ್‌ಎಎಲ್‌ ಸಿಬ್ಬಂದಿ ಜತೆ ಇಂದು ರಾಹುಲ್ ಸಂವಾದ

ಎಚ್‌ಎಎಲ್‌ ಬಗ್ಗೆ ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್‌ ನೀಡಿರುವ ವಿವಾದಾತ್ಮಕ ಹೇಳಿಕೆಯನ್ನೇ ಅಸ್ತ್ರವಾಗಿ ಬಳಸಿಕೊಳ್ಳಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶನಿವಾರ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಎಚ್‌ಎಎಲ್‌ ನೌಕರರೊಂದಿಗೆ ಕಬನ್‌ ಪಾರ್ಕ್‌ ಮಿನ್ಸ್‌ ಸ್ಕ್ವೇರ್‌ ಬಳಿ ದೇಶದ ರಕ್ಷಣಾ ವ್ಯವಸ್ಥೆಗೆ ಎಚ್‌ ಎಎಲ್‌ ಕೊಡುಗೆ ಏನು ಎಂಬ ವಿಷಯದ ಮೇಲೆ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

Last Updated : Oct 13, 2018, 10:08 AM IST
'ರಫೇಲ್' ಲಡಾಯಿ: ಎಚ್‌ಎಎಲ್‌ ಸಿಬ್ಬಂದಿ ಜತೆ ಇಂದು ರಾಹುಲ್ ಸಂವಾದ title=

ಬೆಂಗಳೂರು: ರಫೇಲ್ ಯುದ್ಧ ವಿಮಾನ ಖರೀದಿ ವಿರುದ್ಧ ರಾಷ್ಟ್ರ ಮಟ್ಟದಲ್ಲಿ ನಡೆಯುತ್ತಿದ್ದ ಹೋರಾಟವನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇದೀಗ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್‌ಎಎಲ್‌) ಸಿಬ್ಬಂದಿ ಜತೆ ಸಂವಾದ ನಡೆಸಲು ಮುಂದಾಗಿದ್ದಾರೆ. ರಫೇಲ್‌ ಯುದ್ಧ ವಿಮಾನ ಖರೀದಿ ಅವ್ಯವಹಾರದ ಬಗ್ಗೆ ಕೇಂದ್ರದ ವಿರುದ್ಧ ವಿರೋಧ ವ್ಯಕ್ತಪಡಿಸುತ್ತಿರುವ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ಎಚ್‌ಎಎಲ್‌ ಬಗ್ಗೆ ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್‌ ನೀಡಿರುವ ವಿವಾದಾತ್ಮಕ ಹೇಳಿಕೆಯನ್ನೇ ಅಸ್ತ್ರವಾಗಿ ಬಳಸಿಕೊಳ್ಳಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶನಿವಾರ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಎಚ್‌ಎಎಲ್‌ ನೌಕರರೊಂದಿಗೆ ಕಬನ್‌ ಪಾರ್ಕ್‌ ಮಿನ್ಸ್‌ ಸ್ಕ್ವೇರ್‌ ಬಳಿ ದೇಶದ ರಕ್ಷಣಾ ವ್ಯವಸ್ಥೆಗೆ ಎಚ್‌ ಎಎಲ್‌ ಕೊಡುಗೆ ಏನು ಎಂಬ ವಿಷಯದ ಮೇಲೆ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. 

ದೇಶಕ್ಕೆ ಎಚ್ಎಎಲ್ ಕೊಡುಗೆ ಬಗ್ಗೆ ಸಂಸ್ಥೆಯ ಸಿಬ್ಬಂದಿಯೊಂದಿಗೆ ಸಂವಾದ:
ರಫೇಲ್‌ ಯುದ್ಧ ವಿಮಾನ ಖರೀದಿ ವಿರುದ್ಧ ಕಾಂಗ್ರೆಸ್‌ ಹೋರಾಟ ನಡೆಸುತ್ತಿದ್ದು, ಎಚ್‌ಎಎಲ್‌ಗೆ ದೊರೆಯಬೇಕಿದ್ಧ ರಫೇಲ್‌ ಉತ್ಪಾದನಾ ಟೆಂಡರ್‌ ರದ್ದು ಪಡಿಸಿ ಈಗಿನ ಎನ್‌ಡಿಎ ಸರ್ಕಾರ ಯುದ್ಧ ವಿಮಾನ ತಯಾರಿಕೆಯಲ್ಲಿ ಯಾವುದೇ ಅನುಭವ ಇಲ್ಲದ ರಿಲಯನ್ಸ್‌ ಕಂಪನಿಗೆ ನೀಡಿದೆ. ಈ ಒಪ್ಪಂದದಲ್ಲಿ ಸಾವಿರಾರು ಕೋಟಿ ರೂ. ಅವ್ಯವಹಾರವಾಗಿದ್ದು, ಇದರಲ್ಲಿ ಸ್ವತಃ ಪ್ರಧಾನಿ ಮೋದಿ ಭಾಗಿಯಾಗಿದ್ದಾರೆ. ಈ ಬಗ್ಗೆ ಜಂಟಿ ಸದನ ಸಮಿತಿ ರಚನೆಯಾಗಬೇಕೆಂದು ಕಾಂಗ್ರೆಸ್‌ ಆಗ್ರಹಿಸಿದೆ. ಈ ಬಗ್ಗೆ ಇಂದು ಪ್ರತಿಭಟನಾ ಸಮಾವೇಶ ನಡೆಸಲು ಈ ಹಿಂದೆ ಆಯೋಜಿಸಲಾಗಿತ್ತು. ಆದರೆ, ಕೆಲ ಕಾರಣಗಳಿಂದಾಗಿ ಈ ಸಮಾವೇಶವನ್ನು ಮುಂದೂಡಿ, ದೇಶಕ್ಕೆ ಎಚ್ಎಎಲ್ ಕೊಡುಗೆ ಬಗ್ಗೆ ಸಂಸ್ಥೆಯ ನಿವೃತ್ತ ಮತ್ತು ಹಾಲಿ ನೌಕರರು, ಅಧಿಕಾರಿಗಳು ಹಾಗೂ ಗಣ್ಯರೊಂದಿಗೆ ಸಂವಾದ ನಡೆಯಲು ನಿರ್ಧರಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಸಂಸ್ಥೆಯ ಸಿಬ್ಬಂದಿಯೊಂದಿಗೆ ಇಂದು ಸಂವಾದ ನಡೆಸಲು ಸಿದ್ಧತೆ ನಡೆಸಿದೆ. ಸಂಸ್ಥೆಯ ಹಾಲಿ ಮತ್ತು ನಿವೃತ್ತ ಸಿಬ್ಬಂದಿಯೊಂದಿಗೆ ಸಂವಾದ ನಡೆಸಲಿರುವ ರಾಹುಲ್ ಪ್ರಮುಖವಾಗಿ ರಫೇಲ್ ಹಗರಣದ ಬಗ್ಗೆಯೇ ಪ್ರಸ್ತಾಪಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎಚ್ಎಎಲ್ ಸುತ್ತ 500 ಮೀಟರ್ ವ್ಯಾಪ್ತಿಯಲ್ಲಿ ತಡೆಯಾಜ್ಞೆ:
ಎಚ್ಎಎಲ್ ಕೊಡುಗೆಗಳ ಬಗ್ಗೆ ರಾಹುಲ್ ಗಾಂಧಿ ಮಾತನಾಡಲಿದ್ದಾರೆ. ಎಚ್ಎಎಲ್ ಸುತ್ತ 500 ಮೀಟರ್ ವ್ಯಾಪ್ತಿಯಲ್ಲಿ ತಡೆಯಾಜ್ಞೆ ಇರುವುದರಿಂದ ಮಿನ್ಸ್ಕ್ ಸ್ವ್ಕೇರ್ ಪಕ್ಕ ಸಂವಾದ ನಡೆಯಲಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್. ಶಂಕರ್ ಸುದ್ದಿಗೋಷ್ಠಿಯಲ್ಲಿ ಸಮಜಾಯಿಷಿ ನೀಡಿದರಲ್ಲದೆ, ಅಲ್ಲಿನ ನೌಕರರೇ ಹಲವು ಸಮಯದ ಹಿಂದೆ ಮನವಿ ಮಾಡಿದ್ದರು. ಅದರಂತೆ ಈ ಕಾರ್ಯಕ್ರಮ ನಡೆಯುತ್ತಿದೆ ಎಂದು ತಿಳಿಸಿದರು. 

ಈ ಸಂವಾದ ಕಾರ್ಯಕ್ರಮದಲ್ಲಿ ಯಾವುದೇ ರಾಜಕೀಯವಿಲ್ಲ:
1940 ರಲ್ಲಿ ಬೆಂಗಳೂರಿನಲ್ಲಿ ಎಚ್‌ ಎಎಲ್‌ ಸ್ಥಾಪನೆಯಾದಾಗಿನಿಂದಲೇ ಬೆಂಗಳೂರು ಬೆಳವಣಿಗೆಗೆ ಚಾಲನೆ ಸಿಕ್ಕಿದೆ. ಎಲ್ಲ ಯುದ್ಧ ವಿಮಾನಗಳನ್ನು ಎಚ್‌ ಎಎಲ್‌ ನಿರ್ಮಾಣ ಮಾಡುತ್ತದೆ. ಈ ಬಗ್ಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಗೆ ಮನವಿ ಮಾಡಿದ್ದೆವು. ಅವರು ಬರಲು ಒಪ್ಪಿಕೊಂಡಿದ್ದಾರೆ. ಸಮಸ್ಯೆಯಾದಾಗ ಸರ್ಕಾರದ ಬಳಿ ಹೋಗಿದ್ದೆವು ಸರ್ಕಾರ ನಮ್ಮ ಮನವಿಗೆ ಸ್ಪಂದಿಸಲಿಲ್ಲ. ಹೀಗಾಗಿ ಪ್ರತಿಪಕ್ಷದ ಬಳಿ ತೆರಳಿ ನಮ್ಮ ಸಮಸ್ಯೆ ಹೇಳಿಕೊಂಡಿದ್ದೇವೆ ಎಂದು ಎಚ್‌ಎಎಲ್‌ ನಿವೃತ್ತ ಅಧಿಕಾರಿ ಅನಂತ ಪದ್ಮನಾಭ ತಿಳಿಸಿದರು.

ರಾಹುಲ್ ಗಾಂಧಿ ಸಂವಾದ ಕಾರ್ಯಕ್ರಮ ತಡೆಯಲು ಯತ್ನ:
ಎಚ್ಎಎಲ್ ಆಡಳಿತ ಮಂಡಳಿ ರಾಹುಲ್ ಗಾಂಧಿ ಸಂವಾದ ಕಾರ್ಯಕ್ರಮ ತಡೆಯಲು ಯತ್ನಿಸುತ್ತಿದೆ ಮತ್ತು ಸಂವಾದದಲ್ಲಿ ಭಾಗವಹಿಸದಂತೆ ನೌಕರರಿಗೆ ಸೂಚಿಸಿರುವುದಾಗಿ ಕಾಂಗ್ರೆಸ್ ನಾಯಕ ರಿಜ್ವಾನ್ ಹರ್ಷದ್ ಅವರು ಆರೋಪಿಸಿದ್ದಾರೆ. ಈ ಸಂವಾದವನ್ನು ಕಾಂಗ್ರೆಸ್ ಪಕ್ಷ ಆಯೋಜಿಸಿಲ್ಲ. ಅಲ್ಲಿನ ನೌಕರರೇ ತಮ್ಮನ್ನು ಭೇಟಿ ಮಾಡುವಂತೆ ಬಹಳ ದಿನಗಳ ಹಿಂದೆಯೇ ರಾಹುಲ್ ಗಾಂಧಿಗೆ ಮನವಿ ಮಾಡಿದ್ದರು ಎಂದು ಹರ್ಷದ್ ಹೇಳಿದ್ದಾರೆ.

ಇತ್ತೀಚಿಗೆ ರಫೇಲ್ ಒಪ್ಪಂದದ ವಿಚಾರವನ್ನೇ ಅಸ್ತ್ರವನ್ನಾಗಿಸಿಕೊಂಡಿರುವ  ಕಾಂಗ್ರೆಸ್, ಬಿಜೆಪಿ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದೆ. ಈ ವಿಚಾರವಾಗಿ ಸರ್ಕಾರವನ್ನು ತರಾಟೆಗೆ ತಗೆದುಕೊಂಡಿರುವ ರಾಹುಲ್ ಗಾಂಧಿ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಅನಿಲ್ ಅಂಬಾನಿಯವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಸರ್ಕಾರಿ ಸ್ವಾಮ್ಯದ ಎಚ್ಎಎಲ್ ನ್ನು ತಿರಸ್ಕರಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಇದಕ್ಕೆ ಪೂರಕವೆನ್ನುವಂತೆ ಫ್ರಾನ್ಸ್ ನ ಮಾಜಿ ಅಧ್ಯಕ್ಷ ಹೊಲಾಂಡ್ ಇತ್ತೀಚಿಗೆ ಸರ್ಕಾರವೇ ಫ್ರೆಂಚ್ ನ ಪಾಲುದಾರ ಕಂಪನಿಯಾಗಿ ರಿಲಯನ್ಸ್ ನ್ನು ಸೂಚಿಸಿತು ಆದ್ದರಿಂದ ತಮ್ಮ ಮುಂದೆ ಯಾವುದೇ ರೀತಿಯ ಆಯ್ಕೆಗಳಿರಲಿಲ್ಲ ಎಂದು ತಿಳಿಸಿದ್ದರು.

ಇದೀಗ ರಾಹುಲ್ ಗಾಂಧಿ ಇಂದು ಎಚ್ಎಎಲ್ ಸಿಬ್ಬಂದಿಯೊಂದಿಗೆ ಸಂವಾದ ನಡೆಸಲು ಮುಂದಾಗಿರುವುದು ತೀವ್ರ ಕುತೂಹಲ ಕೆರಳಿಸಿದ್ದು, ವರ್ಕ್ ಔಟ್ ಆಗುತ್ತಾ ಹೊಸ ರಫೇಲ್ ಅಸ್ತ್ರ ಎಂಬುದನ್ನು ಕಾದು ನೋಡಬೇಕಿದೆ.

Trending News