ಬೆಂಗಳೂರು: ಕೊರೋನಾ ವೈರಸ್ ಮುಂದೆ ಉಳಿದಿದ್ದೆಲ್ಲವೂ ಗೌಣವಾಗಿರುವ ಹೊತ್ತಿನಲ್ಲಿ ಕರ್ನಾಟಕಕ್ಕೆ ಒಂದು ಸಿಹಿ ಸುದ್ದಿ ಸಿಕ್ಕಿದೆ. 20121ರ ಪ್ರತಿಷ್ಠಿತ ಏರೋ ಇಂಡಿಯಾ ಶೋ ಬೆಂಗಳೂರಿನಲ್ಲೇ ನಡೆಯಲಿದೆ.
2012ರ ಫೆಬ್ರವರಿ ಫೆ.3ರಿಂದ 7ರವರೆಗೂ ಐದು ದಿನಗಳ ಕಾಲ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ 'ಏರೋ ಇಂಡಿಯಾ ಶೋ' (Aero India Show) ನಡೆಸಲಾಗುವುದು ಎಂದು ಕೇಂದ್ರ ರಕ್ಷಣಾ ಸಚಿವಾಲಯ ದಿನಾಂಕವನ್ನು ಪ್ರಕಟಿಸಿದೆ. ಈ ಮೂಲಕ ಈ ಬಾರಿ ಬೆಂಗಳೂರಿನಲ್ಲಿ ಏರ್ ಶೋ ನಡೆಯುತ್ತದೆಯೋ ಇಲ್ಲವೋ ಎಂದು ಇದ್ದ ಅನುಮಾನ ಕಡೆಗೂ ದೂರವಾಗಿದೆ.
2019ರಲ್ಲಿ ಬೆಂಗಳೂರಿನಲ್ಲಿ ಏರ್ ಇಂಡಿಯೋ ಶೋ ನಡೆಸಿದ್ದೇ ಬಹಳ ವಿರೋಧದ ನಡುವೆ. ಗೋವಾಗೆ ನೀಡಬೇಕೆಂದು ಆಗ ಗೋವಾ ಮುಖ್ಯಮಂತ್ರಿ ಆಗಿದ್ದ ಮನೋಹರ್ ಪರಿಕ್ಕರ್ ಕೇಂದ್ರ ಸರ್ಕಾರದ ಮೇಲೆ ಭಾರೀ ಒತ್ತಡ ತಂದಿದ್ದರು. ರಕ್ಷಣಾ ಇಲಾಖೆ ಆಯೋಜಿಸುವ ಈ ಕಾರ್ಯಕ್ರಮವನ್ನು ತಮ್ಮ ರಾಜ್ಯಕ್ಕೆ ಕೊಂಡೊಯ್ಯಲು ಮಾಜಿ ರಕ್ಷಣಾ ಸಚಿವರಾಗಿದ್ದ ಮನೋಹರ್ ಪರಿಕ್ಕರ್ ತೀವ್ರವಾದ ಲಾಭಿ ಮಾಡಿದ್ದರು. ಆಗ ಕೇಂದ್ರ ಮತ್ತು ಗೋವಾ ಎರಡೂ ಕಡೆ ಬಿಜೆಪಿ ಸರ್ಕಾರಗಳು ಇದ್ದುದರಿಂದ ಕಡೆವರೆಗೂ ಏರ್ ಶೋ ಗೋವಾ ಪಾಲಾಗುತ್ತೆ ಎಂಬ ಅನುಮಾನಗಳೇ ಕೆಳಿಬರುತ್ತಿದ್ದವು. ಆದರೂ ಅಂತಿಮವಾಗಿ ಬೆಂಗಳೂರಿ ಯಲಹಂಕ ವಾಯುನೆಲೆಯಲ್ಲೇ ನಡೆದಿತ್ತು.
2021ರಲ್ಲೂ ಬೆಂಗಳೂರಲ್ಲೇ ಏರೋ ಇಂಡಿಯಾ ಶೋ ಮಾಡಿ ಎಂದು ಅಂದಿನ ಕರ್ನಾಟಕದ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಆಗ ರಕ್ಷಣೆ ಸಚಿವೆಯಾಗಿದ್ದ ನಿರ್ಮಲಾ ಸೀತಾರಾಮನ್ ಬಳಿ ಮನವಿ ಮಾಡಿಕೊಂಡಿದ್ದರು. ಆದರೆ 2019ರ ಫೆ.20ರಿಂದ 24ರವರೆಗೆ ನಡೆದ ಏರೋ ಇಂಡಿಯಾ ಶೋ ಎರಡು ದುರ್ಘಟನೆಗಳಿಗೆ ಸಾಕ್ಷಿಯಾಗಿದ್ದುದರಿಂದ ಮತ್ತು ಬೇರೆ ರಾಜ್ಯಗಳು ತಮ್ಮ ರಾಜ್ಯಗಳಲ್ಲಿ ಏರ್ ಶೋ ನಡೆಸಲು ಅವಕಾಶ ಕೊಡಿ ಎಂದು ಕೇಂದ್ರವನ್ನು ಪದೇ ಪದೇ ಕೇಳುತ್ತಿದ್ದುದರಿಂದ 2021ರ ಏರೋ ಇಂಡಿಯಾ ಶೋ ಬೆಂಗಳೂರಿನಲ್ಲಿ ನಡೆಯುವುದು ಅನುಮಾನ ಇತ್ತು. ಆದರೀಗ ರಕ್ಷಣಾ ಇಲಾಖೆ ಬೆಂಗಳೂರಿನಲ್ಲೇ ಏರೋ ಇಂಡಿಯಾ ಶೋ ನಡೆಸಲು ನಿರ್ಧರಿಸಿದೆ.
ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಭಾರತದ ಮಿಲಿಟರಿ ಮತ್ತು ವೈಮಾನಿಕ ಕ್ಷೇತ್ರದ ತಂತ್ರಜ್ಞಾನ ಉತ್ಪನ್ನಗಳ ಅನಾವರಣಗೊಳಿಸಲಾಗುವುದು. ಇದು ಏಷ್ಯಾ ಖಂಡದಲ್ಲೇ ಅತೀದೊಡ್ಡ ಏರೋ ಶೋ ಎಂಬ ಹೆಗ್ಗಳಿಕೆಯನ್ನೂ ಪಡೆದುಕೊಂಡಿದೆ. ಏರೋ ಇಂಡಿಯಾ ಶೋ ನೋಡಲು ವಿದೇಶಿ ಗಣ್ಯರು ಕೂಡ ಆಗಮಿಸಲಿದ್ದಾರೆ.