ನವದೆಹಲಿ: ಸುಮಾರು 2 ಲಕ್ಷ ಭಾರತೀಯರು ಈ ವರ್ಷ ಹಜ್ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಇವೆರಲ್ಲಿ ಶೇ.48ರಷ್ಟು ಮಹಿಳೆಯರಿದ್ದಾರೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಮಂಗಳವಾರ ಹೇಳಿದ್ದಾರೆ.
2,340ಕ್ಕೂ ಹೆಚ್ಚು ಮಹಿಳೆಯರು 'ಮೆಹ್ರಾಮ್' ಇಲ್ಲದೆಯೇ ಹಜ್ ಯಾತ್ರೆಯಲ್ಲಿ ಭಾಗವಹಿಸಲಿದ್ದು, ಕಳೆದ ವರ್ಷ 1,180 ಮಂದಿ ಪಾಲ್ಗೊಂಡಿದ್ದರು ಎಂದಿರುವ ಕೇಂದ್ರ ಸಚಿವರು, ಲಾಟರಿ ವ್ಯವಸ್ಥೆ ಇಲ್ಲದೆ ಈ ಮಹಿಳೆಯರನ್ನು ಯಾತ್ರೆಗೆ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಮೊದಲನೆಯದಾಗಿ ಹಜ್ ಕೋಟಾದ ಸಂಖ್ಯೆಯ ಹೆಚ್ಚಳದಿಂದಾಗಿ ವೇಟಿಂಗ್ ಲಿಸ್ಟ್ ನಲ್ಲಿದ್ದ ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳ ಎಲ್ಲಾ ಅರ್ಜಿದಾರರು ಹಜ್ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಚಿವರು ಹೇಳಿದ್ದಾರೆ.
"ಸ್ವಾತಂತ್ರ್ಯಾ ನಂತರ ಇದೇ ಮೊದಲ ಬಾರಿಗೆ 2 ಲಕ್ಷ ಸಂಖ್ಯೆಯಲ್ಲಿ ಭಾರತೀಯ ಮುಸ್ಲಿಮರು ಈ ವರ್ಷ ಯಾವುದೇ ಸಬ್ಸಿಡಿ ಇಲ್ಲದೆ, 500 ಕ್ಕೂ ಹೆಚ್ಚು ವಿಮಾನಗಳಲ್ಲಿ, ದೇಶಾದ್ಯಂತ 21 ಎಂಬಾರ್ಕೇಶನ್ ಪಾಯಿಂಟ್‌ಗಳಿಂದ ಹಜ್‌ಗೆ ಹೋಗಲಿದ್ದಾರೆ. ಇವರಲ್ಲಿ 1.40 ಲಕ್ಷ ಯಾತ್ರಾರ್ಥಿಗಳು ಭಾರತದ ಹಜ್ ಸಮಿತಿಯ ಮೂಲಕ ಹೋಗಲಿದ್ದು, ಉಳಿದ 60,000 ಜನರು ಹಜ್ ಗ್ರೂಪ್ ಸಂಘಟಕರ ಮೂಲಕ ತೆರಳಲಿದ್ದಾರೆ" ಎಂದು ನಖ್ವಿ ಹೇಳಿದ್ದಾರೆ.
ಹಜ್ ಯಾತ್ರಿಕರಿಗಾಗಿ ಒಟ್ಟು 19 ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಇವುಗಳಲ್ಲಿ ಮೆಕ್ಕಾದಲ್ಲಿ 16 ಮತ್ತು ಮದೀನಾದಲ್ಲಿ 3 ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇದಲ್ಲದೆ, ಹಜ್ ಯಾತ್ರಿಕರಿಗೆ ಸೂಕ್ತ ಆರೋಗ್ಯ ಸೌಲಭ್ಯವನ್ನು ಒದಗಿಸಲು ಮೆಕ್ಕಾದಲ್ಲಿ 3 ಮತ್ತು ಮದೀನಾದಲ್ಲಿ ಒಂದು ಆಸ್ಪತ್ರೆಯನ್ನು ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.
ಹಜ್ ಯಾತ್ರೆಗೆ ಜುಲೈ 4 ರಂದು ದೆಹಲಿ, ಗಯಾ, ಗುವಾಹಟಿ ಮತ್ತು ಶ್ರೀನಗರದಿಂದ, ಜುಲೈ 7 ರಂದು ಬೆಂಗಳೂರು ಮತ್ತು ಕ್ಯಾಲಿಕಟ್, ಜುಲೈ 13 ರಂದು ಗೋವಾ, ಜುಲೈ 14 ರಂದು ಕೊಚ್ಚಿನ್, ಜುಲೈ 17 ರಂದು ಮಂಗಳೂರು, ಜುಲೈ 14 ಮತ್ತು 21 ರಂದು ಮುಂಬೈ ಮತ್ತು ಜುಲೈ 21ರಂದು ಶ್ರೀನಗರದಿಂದ ವಿಮಾನಗಳು ಹೊರಡಲಿವೆ.
ಎರಡನೇ ಹಂತದಲ್ಲಿ ಜುಲೈ 20 ರಂದು ಅಹಮದಾಬಾದ್, ಜೈಪುರ ಮತ್ತು ಲಕ್ನೋ, ಜುಲೈ 21 ರಂದು ಭೋಪಾಲ್ ಮತ್ತು ರಾಂಚಿ, ಜುಲೈ 22 ರಂದುಔರಂಗಾಬಾದ್, ಜುಲೈ 25 ರಂದು ಕೋಲ್ಕತಾ ಮತ್ತು ನಾಗ್ಪುರ, ಜುಲೈ 26 ರಂದು ಹೈದರಾಬಾದ್, ಜುಲೈ 29 ರಂದು ವಾರಣಾಸಿ ಮತ್ತು ಜುಲೈ 31 ರಂದು ಚೆನ್ನೈನಿಂದ ವಿಮಾನಗಳು ಪ್ರಯಾಣ ಬೆಳಸಲಿವೆ ಎಂದು ಹೇಳಿದರು.