ಅಮಿತ್ ಶಾ ಭೇಟಿಗಾಗಿ ದೆಹಲಿ ತಲುಪಿದ ಗೋವಾದ 10 ಮಾಜಿ ಕಾಂಗ್ರೆಸ್ ಶಾಸಕರು

ಚಂದ್ರಕಾಂತ್ ಕಾವ್ಲೇಕರ್ ನೇತೃತ್ವದ ಮಾಜಿ ಗೋವಾ ಕಾಂಗ್ರೆಸ್ ಶಾಸಕರು ಗುರುವಾರ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಕಾರ್ಯಕಾರಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಲಿದ್ದಾರೆ.  

Last Updated : Jul 11, 2019, 08:36 AM IST
ಅಮಿತ್ ಶಾ ಭೇಟಿಗಾಗಿ ದೆಹಲಿ ತಲುಪಿದ ಗೋವಾದ 10 ಮಾಜಿ ಕಾಂಗ್ರೆಸ್ ಶಾಸಕರು  title=
Pic Courtesy: ANI

ನವದೆಹಲಿ: ಭಾರತೀಯ ಜನತಾ ಪಕ್ಷ (ಬಿಜೆಪಿ) ಯೊಂದಿಗೆ ಬುಧವಾರ ವಿಲೀನಗೊಂಡಿದ್ದ ಹತ್ತು ಮಾಜಿ ಗೋವಾ ಕಾಂಗ್ರೆಸ್ ಶಾಸಕರು ಗುರುವಾರ ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿಯ ರಾಷ್ಟ್ರಾಧ್ಯಕ್ಷರನ್ನು ಭೇಟಿಯಾಗಲಿದ್ದಾರೆ. 

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರೊಂದಿಗೆ ದೆಹಲಿ ತಲುಪಿರುವ ಹತ್ತು ಮಾಜಿ ಕಾಂಗ್ರೆಸ್ ಶಾಸಕರು ಇಂದು ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಪಕ್ಷದ ಕಾರ್ಯಕಾರಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ.

ಹತ್ತು ಮಾಜಿ ಗೋವಾ ಕಾಂಗ್ರೆಸ್ ಶಾಸಕರು ಈಗಾಗಲೇ ರಾಷ್ಟ್ರ ರಾಜಧಾನಿಗೆ ಆಗಮಿಸಿದ್ದಾರೆ ಎಂದು ಎಎನ್‌ಐ ತಿಳಿಸಿದೆ.

ಬಿಜೆಪಿಗೆ ಸೇರ್ಪಡೆಯಾದ 10 ಗೋವಾ ಕಾಂಗ್ರೆಸ್ ಶಾಸಕರು ಗುರುವಾರ ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಬುಧವಾರ ಸುದ್ದಿಗಾರರಿಗೆ ತಿಳಿಸಿದ್ದರು. 

ಬುಧವಾರ ಬಿಜೆಪಿಗೆ ಸೇರ್ಪಡೆಯಾದ ಕಾಂಗ್ರೆಸ್ ಶಾಸಕರಲ್ಲಿ - ಚಂದ್ರಕಾಂತ್ ಕಾವ್ಲೇಕರ್, ಐಸಿಡೋರ್ ಫೆರ್ನಾಂಡಿಸ್, ಫ್ರಾನ್ಸಿಸ್ ಸಿಲ್ವೀರಾ, ಫಿಲಿಪೆ ನೆರಿ ರೊಡ್ರಿಗಸ್, ಜೆನ್ನಿಫರ್, ಅಟಾನಾಸಿಯೊ ಮಾನ್ಸರರೇಟ್, ಆಂಟೋನಿಯೊ ಫರ್ನಾಂಡಿಸ್, ನೀಲಕಂಠ ಹಾಲಂಕರ್, ಕ್ಲಾಫಾಸಿಯೊ ಡಯಾಸ್ ಮತ್ತು ವಿಲ್ಫ್ರೆಡ್ ಡಿ'ಸಾ ಸೇರಿದ್ದಾರೆ.

ಕಾವ್ಲೇಕರ್ ನೇತೃತ್ವದ ಕಾಂಗ್ರೆಸ್ ನಾಯಕರ ಗುಂಪು ಸಂಜೆ ಸ್ಪೀಕರ್ ರಾಜೇಶ್ ಪಟ್ನೇಕರ್ ಅವರನ್ನು ಭೇಟಿಯಾಗಿ ತಮ್ಮನ್ನು ಬಿಜೆಪಿ ಜೊತೆಗೆ ವಿಲೀನ ಮಾಡುವಂತೆ ಪತ್ರ ಸಲ್ಲಿಸಿತ್ತು ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿತ್ತು. ಈ ಸಂದರ್ಭದಲ್ಲಿ ಗೋವಾ ವಿಧಾನಸಭೆಯ ಡೆಪ್ಯೂಟಿ ಸ್ಪೀಕರ್ ಮೈಕೆಲ್ ಲೋಬೊ, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಕೂಡ ಹಾಜರಿದ್ದರು. 

ಗೋವಾ ಬಿಜೆಪಿ ಮೂಲಗಳ ಪ್ರಕಾರ, ಗೋವಾ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಚಂದ್ರಕಾಂತ್ ಬಾಬು ಕಾವ್ಲೇಕರ್ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವ ನಿರೀಕ್ಷೆಯಿದೆ.

ಕರ್ನಾಟಕದಲ್ಲಿ ಜೆಡಿಎಸ್ ಜೊತೆಗೆ ತನ್ನ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಹರಸಾಹಸ ಪಡುತ್ತಿದೆ. ಏತನ್ಮಧ್ಯೆ, ಗೋವಾದಲ್ಲೂ ಕೂಡ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಹಿನ್ನಡೆಯಾಗಿದೆ.

ಗೋವಾ ವಿಧಾನಸಭೆಯಲ್ಲಿ ಒಟ್ಟು 40 ಸದಸ್ಯರಿದ್ದಾರೆ - 17 (ಬಿಜೆಪಿ), 15 (ಕಾಂಗ್ರೆಸ್), 1 (ಎನ್‌ಸಿಪಿ), 1 (ಮಹಾರಾಷ್ಟ್ರವಾಡಿ ಗೋಮಂಟಕ್ ಪಕ್ಷ), 3 (ಗೋವಾ ಫಾರ್ವರ್ಡ್ ಪಕ್ಷ) ಮತ್ತು 3 (ಸ್ವತಂತ್ರ). 10 ಕಾಂಗ್ರೆಸ್ ಶಾಸಕರನ್ನು ಸೇರ್ಪಡೆಗೊಳಿಸುವುದರೊಂದಿಗೆ, ಬಿಜೆಪಿಯ ಬಲ ಈಗ 27 ಕ್ಕೆ ಏರಿದೆ.

Trending News