ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ನಿಯಂತ್ರಣ ರೇಖೆಯ (ಎಲ್ಒಸಿ) ಪಕ್ಕದ ಪ್ರದೇಶವೊಂದರಲ್ಲಿ ಪಾಕಿಸ್ತಾನ ಮತ್ತೆ ಭಾರತದ ಗಡಿಯಲ್ಲಿರುವ ವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದೆ. ಕಳೆದ ರಾತ್ರಿ, ಪಾಕಿಸ್ತಾನದಿಂದ ನಡೆದ ಈ ಗುಂಡಿನ ದಾಳಿಯಲ್ಲಿ 10 ದಿನ ಶಿಶು ಸಾವನ್ನಪ್ಪಿದೆ. ಈ ದಾಳಿಯಲ್ಲಿ ಗಾಯಗೊಂಡ ಇತರ ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪೂಂಚ್ ಜಿಲ್ಲೆಯ ಕೃಷ್ಣ ಕಣಿವೆ, ಮೆಂದರ್ ಮತ್ತು ಮಂಕೋಟ್ ವಲಯದಲ್ಲಿ ಪ್ರಚೋದನೆಯಿಲ್ಲದೆ ಗುಂಡು ಹಾರಿಸುವ ಮೂಲಕ ಪಾಕಿಸ್ತಾನವು ಭಾರತೀಯ ಚೆಕ್ಪೋಸ್ಟ್ಗಳು ಮತ್ತು ವಸತಿ ಪ್ರದೇಶಗಳನ್ನು ಗುರಿಯಾಗಿಸಿದೆ. ಈ ಸಂದರ್ಭದಲ್ಲಿ 10 ದಿನದ ಮಗು ಸೇರಿದಂತೆ ಮೂವರು ಗಾಯಗೊಂಡಿದ್ದರು.
ಗಾಯಗೊಂಡವರನ್ನು ಕೂಡಲೇ ಪೂಂಚ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಮಗುವಿನ ಸ್ಥಿತಿ ಚಿಂತಾಜನಕವಾಗಿದ್ದರಿಂದ, ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ. ದಾಳಿಯಲ್ಲಿ ಗಾಯಗೊಂಡ ಇಬ್ಬರನ್ನು ಜಮ್ಮುವಿಗೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.