Krishnam Raju: ಖ್ಯಾತ ನಟ ಮತ್ತು ನಿರ್ಮಾಪಕ ಕೃಷ್ಣಂ ರಾಜು ವಿಧಿವಶ

ಕೃಷ್ಣಂ ರಾಜು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸಂಪುಟದಲ್ಲಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ ಮೊದಲ ನಟ ಎಂಬ ಹೆಗ್ಗಳಿಕೆ ಹೊಂದಿದ್ದರು.

Written by - Puttaraj K Alur | Last Updated : Sep 11, 2022, 09:18 AM IST
  • ತೆಲುಗು ಚಿತ್ರರಂಗದ ಲೆಜೆಂಡರಿ ನಟ-ನಿರ್ಮಾಪಕ ಉಪ್ಪಲಪತಿ ವೆಂಕಟ ಕೃಷ್ಣಂ ರಾಜು ನಿಧನ
  • ಕಳೆದ ಹಲವಾರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕೃಷ್ಣಂ ರಾಜು ಹೈದರಾಬಾದ್‌ನಲ್ಲಿ ವಿಧಿವಶ
  • ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಅವರ ಚಿಕ್ಕಪ್ಪ ಕೃಷ್ಣಂ ರಾಜುರಿಗೆ 82 ವರ್ಷ ವಯಸ್ಸಾಗಿತ್ತು
Krishnam Raju: ಖ್ಯಾತ ನಟ ಮತ್ತು ನಿರ್ಮಾಪಕ ಕೃಷ್ಣಂ ರಾಜು ವಿಧಿವಶ title=
ನಟ-ನಿರ್ಮಾಪಕ ಕೃಷ್ಣಂ ರಾಜು ನಿಧನ

ಹೈದರಾಬಾದ್: ತೆಲುಗು ಚಿತ್ರರಂಗದ ಲೆಜೆಂಡರಿ ನಟ ಮತ್ತು ನಿರ್ಮಾಪಕ ಉಪ್ಪಲಪತಿ ವೆಂಕಟ ಕೃಷ್ಣಂ ರಾಜು ಇಂದು ಮುಂಜಾನೆ ಹೈದರಾಬಾದ್‌ನಲ್ಲಿ ನಿಧನರಾಗಿದ್ದಾರೆ. ಹಲವಾರು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಕ್ರಿಯಾಶೀಲರಾಗಿದ್ದ ಕೃಷ್ಣ ರಾಜು ಕಳೆದ ಹಲವಾರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.  

ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಅವರ ಚಿಕ್ಕಪ್ಪ ಕೃಷ್ಣಂ ರಾಜುರಿಗೆ 82 ವರ್ಷ ವಯಸ್ಸಾಗಿತ್ತು. ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ನಟ ಕಮ್ ರಾಜಕಾರಣಿ ಕೆಲವೇ ದಿನಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ನಿರೀಕ್ಷೆ ಇತ್ತು. ಆದರೆ ಮಾಜಿ ಬಿಜೆಪಿ ನಾಯಕನ ಆರೋಗ್ಯ ಸುಧಾರಿಸಲು ಸಾಧ್ಯವಾಗಲಿಲ್ಲ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ ಮೊದಲ ನಟ ಎಂಬ ಹೆಗ್ಗಳಿಕೆ ಹೊಂದಿದ್ದರು. ಕೃಷ್ಣಂ ರಾಜು ನಿಧನದ ಸುದ್ದಿ ಹೊರಬಿದ್ದ ನಂತರ ದಕ್ಷಿಣ ಚಿತ್ರರಂಗದ ಅನೇಕ ನಟರು ಸೋಷಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದು, ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ.

ಇದನ್ನೂ ಓದಿ: Lucky Man: "ಅಪ್ಪು ಕುಳಿತಿದ್ದ ಆ ಚೇರ್‌ ಕೊಡಿ ಸಾಕು" - ಗಳಗಳನೇ ಅತ್ತ ರಾಘಣ್ಣ!

ತೆಲುಗು ಚಿತ್ರರಂಗದ ‘ರೆಬೆಲ್ ಸ್ಟಾರ್’!

ತೆಲುಗು ಚಿತ್ರರಂಗದಲ್ಲಿ ಬಂಡಾಯದ ನಟನಾ ಶೈಲಿಯಿಂದ ಕೃಷ್ಣಂ ರಾಜು ಅವರು ‘ರೆಬೆಲ್ ಸ್ಟಾರ್’ ಎಂದೇ ಖ್ಯಾತಿಯಾಗಿದ್ದರು. ಅತ್ಯುತ್ತಮ ನಟನೆಗಾಗಿ ಕೊಡಮಾಡುವ ನಂದಿ ಪ್ರಶಸ್ತಿಯ ಪ್ರಥಮ ವಿಜೇತರೂ ಇವರೇ ಆಗಿದ್ದರು. ಕೃಷ್ಣಂ ರಾಜು ತಮ್ಮ ವೃತ್ತಿಜೀವನದಲ್ಲಿ 183ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. 1966ರಲ್ಲಿ ಕೆ.ಪ್ರತ್ಯಗಾತ್ಮ ನಿರ್ಮಿಸಿ-ನಿರ್ದೇಶಿಸಿದ್ದ ‘ಚಿಲಕ ಗೋರಿಂಕ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.

5 ಫಿಲ್ಮ್‌ ಫೇರ್ ಪ್ರಶಸ್ತಿ & 3 ನಂದಿ ಪ್ರಶಸ್ತಿ

ಕೃಷ್ಣಂ ರಾಜು 5 ಫಿಲ್ಮ್‌ ಫೇರ್ ಪ್ರಶಸ್ತಿಗಳನ್ನು ದಕ್ಷಿಣ ಮತ್ತು 3 ರಾಜ್ಯ ನಂದಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಕೃಷ್ಣಂ ರಾಜು ಅವರು ‘ಜೀವನ ತರಂಗಲು (1973), ಕೃಷ್ಣವೇಣಿ (1974), ಭಕ್ತ ಕಣ್ಣಪ್ಪ (1976), ಅಮರ ದೀಪಂ (1977), ಸತಿ ಸಾವಿತ್ರಿ (1978), ಕಟಕಟಾಲ ರುದ್ರಯ್ಯ (1978), ಮನವೂರಿ ಪಾಂಡವುಲು (1978) ಮುಂತಾದ ಹಲವಾರು ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ. ರಂಗೂನ್ ರೌಡಿ (1979), ಶ್ರೀ ವಿನಾಯಕ ವಿಜಯಮು (1979), ಸೀತಾ ರಾಮುಲು (1980), ಟ್ಯಾಕ್ಸಿ ಡ್ರೈವರ್ (1981), ತ್ರಿಶೂಲಂ (1982), ಧರ್ಮಾತ್ಮುಡು (1983), ಬೊಬ್ಬಿಲಿ ಬ್ರಹ್ಮಣ್ಣ (1984), ತಂದ್ ಪಪ್ರಾಯುಡು (1986), ಮರಣ ಶಾಸನ (1987), ವಿಶ್ವನಾಥ ನಾಯಕುಡು (1987), ಅಂತಿಮ ತೀರ್ಪು (1988), ಬಾವ ಬಾವಮರಿದಿ (1993), ಪಲ್ನಾಟಿ ಪೌರುಷಮ್ (1994) ಹೀಗೆ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ: Bigg Boss Kannada OTT : ಬಿಗ್ ಬಾಸ್ ಕನ್ನಡ ಒಟಿಟಿ : 5ನೇ ವಾರ ಮನೆಯಿಂದ ನಂದಿನಿ ಔಟ್

ರಾಜಕೀಯದಲ್ಲಿ ಸಕ್ರಿಯರಾಗಿದ್ದ ನಟ

1990ರ ದಶಕದ ಉತ್ತರಾರ್ಧದಲ್ಲಿ ಕೃಷ್ಣಂ ರಾಜು ರಾಜಕೀಯದಲ್ಲಿ ಸಕ್ರಿಯರಾದರು. ಬಿಜೆಪಿಗೆ ಸೇರಿದ್ದ ಈ ಹಿರಿಯ ನಟ ಕಾಕಿನಾಡ ಮತ್ತು ನರಸಾಪುರಂ ಕ್ಷೇತ್ರಗಳಿಂದ 12 ಮತ್ತು 13ನೇ ಲೋಕಸಭೆಗೆ ಆಯ್ಕೆಯಾಗಿದ್ದರು.1999ರಿಂದ 2004ರವರೆಗೆ 3ನೇ ವಾಜಪೇಯಿ ಸಚಿವಾಲಯದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. 2009ರ ಮಾರ್ಚ್‍ನಲ್ಲಿ ಅವರು ನಟ ಚಿರಂಜೀವಿ ಸ್ಥಾಪಿಸಿದ ಪ್ರಜಾರಾಜ್ಯಂ ಪಕ್ಷಕ್ಕೆ ಸೇರಿದ್ದರು. 2009ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಜಮಂಡ್ರಿ ಕ್ಷೇತ್ರದಿಂದ ಸಂಸದ ಸ್ಥಾನಕ್ಕೆ ಸ್ಪರ್ಧಿಸಿದ್ದ ಅವರು ಸೋಲು ಕಂಡಿದ್ದರು.    

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News