SS rajamouli movies list : ಭಾರತೀಯ ಚಿತ್ರರಂಗಕ್ಕೆ ಅದ್ಭುತ ಸಿನಿಮಾಗಳನ್ನು ನೀಡಿದ ಪ್ರಖ್ಯಾತ ನಿರ್ದೇಶಕರಲ್ಲಿ ಎಸ್‌ಎಸ್ ರಾಜಮೌಳಿ ಕೂಡ ಒಬ್ಬರು. ಇದೀಗ ಆರ್‌ಆರ್‌ಆರ್ ಸಿನಿಮಾ ಮೂಲಕ ಭಾರತೀಯ ಸಿನಿರಂಗವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತೆ ಮಾಡಿದ್ದಾರೆ. ಸದ್ಯ ಆರ್‌ಆರ್‌ಆರ್ ಚಿತ್ರ ಆಸ್ಕರ್ ಅಂಗಳದಲ್ಲಿದ್ದು, ಈ ಸಿನಿಮಾದ ನಾಟು ನಾಟು ಹಾಡಿಗೆ ಆಸ್ಕರ್ ಲಭಿಸುವ ನಿರೀಕ್ಷೆ ಇದೆ. ಇದೇ ಸಮಯದಲ್ಲಿ ರಾಜಮೌಳಿ ನಿರ್ದೇಶನ ಈ 12 ಸಿನಿಮಾಗಳನ್ನು ಒಂದು ಸರಿ ನೋಡಿಕೊಂಡು ಬನ್ನಿ.
ಆರ್‌ಆರ್‌ಆರ್ (2022) : ಎಸ್‌ಎಸ್ ರಾಜಮೌಳಿ ಅವರು ಚಿತ್ರಕಥೆ ಬರೆದು ನಿರ್ದೇಶಿಸಿದ ಈ ಸಿನಿಮಾ 2022 ರ ಹಿಟ್ ಸಿನಿಮಾಗಳಲ್ಲಿ ಒಂದು. ವಿವಿಧ ನಾಮನಿರ್ದೇಶನಗಳಿಂದ ಹಿಡಿದು ಈಗ ಗೋಲ್ಡನ್ ಗ್ಲೋಬ್ಸ್ 2023 ನಲ್ಲಿ ಅತ್ಯುತ್ತಮ ಹಾಡು ಪ್ರಶಸ್ತಿಯನ್ನು ಗೆದ್ದುಕೊಂಡಿದೆ, ನಾಟು ನಾಟು ಹಾಡಿಗಾಗಿ ಆಸ್ಕರ್‌ಗೆ ನಾಮನಿರ್ದೇಶನಗೊಂಡಿದೆ. ಈ ಸಿನಿಮಾದಲ್ಲಿ ಜೂ.ಎನ್‌ಟಿಆರ್, ರಾಮ್ ಚರಣ್, ಅಜಯ್ ದೇವಗನ್, ಆಲಿಯಾ ಭಟ್, ಶ್ರೀಯಾ ಸರಣ್, ಸಮುದ್ರಕನಿ, ರೇ ಸ್ಟೀವನ್ಸನ್, ಅಲಿಸನ್ ಡೂಡಿ ಮತ್ತು ಒಲಿವಿಯಾ ಮೋರಿಸ್ ನಟಿಸಿದ್ದಾರೆ.
ಇದನ್ನೂ ಓದಿ: Devgan Bhola: ತೆರೆಗೆ ಬರಲು ಸಜ್ಜಾಗಿದೆ ಅಜಯ್ ದೇವಗನ್ ʼಭೋಲಾʼ 3D ಟ್ರೈಲರ್
ಬಾಹುಬಲಿ: ದಿ ಬಿಗಿನಿಂಗ್ (2015) : ರಾಜಮೌಳಿ ಈ ಚಿತ್ರವು ಪ್ರಾಚೀನ ಭಾರತದಲ್ಲಿ ಮಾಹಿಷ್ಮತಿ ಸಾಮ್ರಾಜ್ಯದಲ್ಲಿ ನಡೆಯುವ ಘಟನೆಯ ಕಥೆಯಾಗಿದೆ. ತಂದೆ ತಾಯಿಯನ್ನು ಕಳೆದುಕೊಂಡು ಕಾಡಿನ ಜನರ ನಡುವೆ ಬೆಳೆದ ಶಿವ ಮುಂದೆ ಮಹೇಂದ್ರ ಬಾಹುಲಿಯಾಗಿ ಪಟ್ಟಕ್ಕೇರುವ ಕಥೆಯ ಮೊದಲ ಭಾಗವಾಗಿದೆ. ಈ ಚಿತ್ರದಲ್ಲಿ ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ತಮನ್ನಾ, ರಮ್ಯಾ ಕೃಷ್ಣ, ಸತ್ಯರಾಜ್, ಮತ್ತು ನಾಸರ್ ಜೊತೆಗೆ ಎರಡು ಪ್ರಮುಖ ಪಾತ್ರಗಳಲ್ಲಿ ಪ್ರಭಾಸ್ ಜೊತೆ ಸಮೂಹ ಪಾತ್ರವನ್ನು ಒಳಗೊಂಡಿದೆ. ಈ ಚಲನಚಿತ್ರವನ್ನು Disney+ Hotstar ನಲ್ಲಿ ವೀಕ್ಷಿಸಿ.
ಬಾಹುಬಲಿ 2: ದಿ ಕನ್‌ಕ್ಲೂಷನ್ (2017) : ಸುಮಾರು ಎರಡು ವರ್ಷಗಳ ಕಾಲ ಕಾದ ನಂತರ, ಪ್ರೇಕ್ಷಕರು ಪ್ರಶ್ನೆಗೆ ಉತ್ತರವನ್ನು ಪಡೆದರು - ಕಟ್ಟಪ್ಪ ಬಾಹುಬಲಿಯನ್ನು ಏಕೆ ಇರಿದ? ಎಂಬ ಉತ್ತರ ಭಾಗವೇ ಈ ಸಿನಿಮಾ. ಮಹೇಂದ್ರ ಬಾಹುಬಲಿ (ಶಿವುಡು), ತನ್ನ ತಂದೆಯ ಹತ್ಯೆಗೆ ಸೇಡು ತೀರಿಸಿಕೊಳ್ಳುತ್ತಾನೆ ಅಲ್ಲದೆ, ಮಾಹಿಷ್ಮತಿ ಸಾಮ್ರಾಜ್ಯದ ದಬ್ಬಾಳಿಕೆಯ ಆಡಳಿತಗಾರ, ಅವನ ಚಿಕ್ಕಪ್ಪ, ಭಲ್ಲಾಲದೇವನ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾನೆ. ಈ ಚಿತ್ರಗಳ ಬಗ್ಗೆ ಕುತೂಹಲಕಾರಿ ಸಂಗತಿಯೆಂದರೆ, ಕಥೆಯನ್ನು ರಾಜಮೌಳಿ ಅವರ ತಂದೆ ವಿ. ವಿಜಯೇಂದ್ರ ಪ್ರಸಾದ್ ಭಾಗ ಒಂದು ಮತ್ತು ಎರಡಕ್ಕೂ ಕಥೆ ಬರೆದಿದ್ದಾರೆ. Disney+ Hotstar ನಲ್ಲಿ ವೀಕ್ಷಿಸಿ.
ಈಗಾ/ಮಕ್ಕಿ (2012) : ನಿರ್ದೇಶಕ ರಾಜಮೌಳಿಯವರ ಚಾಣಾಕ್ಷತನಕ್ಕೆ ಈ ಸಿನಿಮಾ ಸಾಕ್ಷಿ. ಪ್ರೀಯತಮೆಯನ್ನು ಕಳೆದುಕೊಂಡ ಪ್ರೇಮಿ ನೋಣದ ರೂಪವಾಗಿ ಬಂದು ಶತ್ರುವಿನಿಂದ ತನ್ನ ಗೆಳತಿಯನ್ನು ರಕ್ಷಿಸುವ ಈ ಪ್ರೇಮ ಕಥಾಹಂದರ ಸಿನಿಮಾ ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿತ್ತು. ಈ ಚಿತ್ರದಲ್ಲಿ, ಸುದೀಪ, ನಾನಿ ಮತ್ತು ಸಮಂತಾ ಪ್ರಭು ನಟಿಸಿದ್ದಾರೆ, ಇದು ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. Netflix ನಲ್ಲಿ ಈ ಚಲನಚಿತ್ರವನ್ನು ವೀಕ್ಷಿಸಿ.
ಇದನ್ನೂ ಓದಿ:ದುಬೈನಲ್ಲಿ ಆಕ್ಟಿಂಗ್ ಸ್ಕೂಲ್ ತೆರೆದ ರಾಖಿ..! ಇನ್ನೂ ಏನೇನ್ ನೋಡ್ಬೇಕೋ ಈ ಕಣ್ಣಿಂದ
ಮರ್ಯಾದಾ ರಾಮಣ್ಣ (2010) : ಸುನೀಲ್, ಸಲೋನಿ, ನಾಗಿನೀಡು, ಬ್ರಹ್ಮಾಜಿ, ರಾವ್ ರಮೇಶ್, ಸುಪ್ರೀತ್, ವೇಣು ಗೋಪಾಲ್, ಪ್ರಭಾಕರ್ ಮತ್ತು ಕಂಚಿ ನಟಿಸಿರುವ ಈ ಚಿತ್ರದಲ್ಲಿ, ರಾಮು ತನ್ನ ಸ್ವಂತ ಜಮೀನನ್ನು ಮಾರಾಟ ಮಾಡಲು ತನ್ನ ಊರಿಗೆ ಹಿಂದಿರುಗುತ್ತಾನೆ ಮತ್ತು ಯುವತಿಯನ್ನು ಪ್ರೀತಿಸುತ್ತಾನೆ. ನಂತರ ಆಕೆಯ ಪೋಷಕರು ಅವನನ್ನು ಸಾಯಬೇಕೆಂದು ಬಯಸುತ್ತಾರೆ. ಅವನು ಮನೆಯಲ್ಲಿ ಇರುವವರೆಗೂ ಮಾತ್ರ ಅವನು ಬದುಕಬಲ್ಲನು. ಈ ಚಿತ್ರವು ಎಷ್ಟು ಯಶಸ್ವಿಯಾಯಿತು ಎಂದರೆ ಅದನ್ನು ವಿವಿಧ ಭಾಷೆಗಳಲ್ಲಿ ಹಲವಾರು ಬಾರಿ ಮರು-ನಿರ್ಮಾಣ ಮಾಡಲಾಗಿದೆ. ಕನ್ನಡದಲ್ಲಿ ಕೋಮಲ್ ಈ ಸಿನಿಮಾ ರಿಮೇಕ್ ಮಾಡಿದ್ದಾರೆ. ಇದನ್ನು ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ವೀಕ್ಷಿಸಬಹುದು.
ಮಗಧೀರ (2009) : ಈ ಸಿನಿಮಾ ರಾಮ್ ಚರಣ್, ಶ್ರೀಹರಿ, ಕಾಜಲ್ ಅಗರ್ವಾಲ್ ಮತ್ತು ದೇವ್ ಗಿಲ್ ಒಳಗೊಂಡಿರುವ ನಿರ್ದೇಶಕರ ರಾಜಮೌಳಿಯವರ ಮತ್ತೊಂದು ಫ್ಯಾಂಟಸಿ ಆಕ್ಷನ್ ಚಿತ್ರ. ಪುನರ್ಜನ್ಮದ ಕಥೆಯನ್ನು ಆಧರಿಸಿದೆ. ಕ್ರಿ.ಶ. 1609 ರಲ್ಲಿ, ರಾಜಕುಮಾರಿ ಮಿತ್ರವಿಂದಾ ಮತ್ತು ಅವಳು ಪ್ರೀತಿಸಿದ ಯೋಧ ಕಾಲ ಭೈರವ ಸಾಯುತ್ತಾರೆ. 400 ವರ್ಷಗಳ ನಂತರ, ಕಾಲಭೈರವ ಹರ್ಷನಾಗಿ ಮರಳಿ ಹುಟ್ಟುತ್ತಾನೆ. ಅದರಂತೆ ಮಿತ್ರವಿಂದಾ ಸಹ ಮರು ಹುಟ್ಟು ಪಡೆಯುತ್ತಾರೆ. ಇಬ್ಬರ ಸಾವಿಗೆ ಕಾರಣವಾಗಿದ್ದ, ಶತ್ರುವುಸಹ ಈ ಜನ್ಮದಲ್ಲಿ ಅವರಿಗೆ ಶತ್ರುವಾಗಿ ಜನಿಸುತ್ತಾನೆ. ಕೊನೆಗೆ ಮಿತ್ರವಿಂದ ಯಾರ ಪಾಲಾದಳು ಎನ್ನುವುದೇ ಈ ಸಿನಿಮಾದ ಕಥೆ. ನೀವು ಈ ಚಲನಚಿತ್ರವನ್ನು MX ಪ್ಲೇಯರ್‌ನಲ್ಲಿ ವೀಕ್ಷಿಸಬಹುದು.
ಯಮದೊಂಗಾ (2007) : ಈ ಚಿತ್ರದಲ್ಲಿ ರಾಜಾ,(ಎನ್‌ಟಿಆರ್) ಅನಾಥ ಕಳ್ಳ, ಒಬ್ಬ ಶ್ರೀಮಂತನ ಮಗಳನ್ನು ಅಪಹರಿಸುವ ವಿಚಾರಕ್ಕಾಗಿ ವಿಲನ್ ಗ್ಯಾಂಗ್‌ಗೆ ಸಹಾಯ ಮಾಡುವಾಗ ಸಾಯುತ್ತಾನೆ. ನಂತರ ಅವನು ಯಮಲೋಕ್ಕೆ ಹೋಗುತ್ತಾನೆ. ಅಲ್ಲಿ ತನ್ನ ಸಾವಿನ ರಹಸ್ಯ ತಿಳಿದು ಯಮನೊಂದಿಗೆ ಹೋರಾಡಿ ಮರಳಿ ಭೂಮಿಗೆ ಬುರತ್ತಾನೆ. ಇದರಲ್ಲಿ ಎನ್‌ಟಿಆರ್, ಮೋಹನ್ ಬಾಬು, ಪ್ರಿಯಾಮಣಿ ಮತ್ತು ಮಮತಾ ಮೋಹನ್ ದಾಸ್ ನಟಿಸಿದ್ದರೆ ಅಲಿ ಮತ್ತು ಬ್ರಹ್ಮಾನಂದಂ ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಯುಟ್ಯೂಬ್ ಹಾಗೂ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಚಿತ್ರ ವೀಕ್ಷಿಸಲು ಲಭ್ಯವಿದೆ.
ಇದನ್ನೂ ಓದಿ: ವಿರೋಧಿಸಿದ್ರೂ ತಗ್ಗಿಲ್ಲ ದೀಪಿಕಾ ವರ್ಚಸ್ಸು..! ಆಸ್ಕರ್ ಕಾರ್ಯಕ್ರಮಕ್ಕೆ ʼಕನ್ನಡತಿʼ ಆ್ಯಂಕರ್
ವಿಕ್ರಮಾರ್ಕುಡು (2006) : ಚಿತ್ರದಲ್ಲಿ ರವಿತೇಜ ಮತ್ತು ಅನುಷ್ಕಾ ಶೆಟ್ಟಿ ನಟಿಸಿದ್ದು, ಇದೊಂದು ಅದ್ಭುತ ಚಿತ್ರವಾಗಿದೆ. ಕಳ್ಳನೊಬ್ಬ ನಿಷ್ಠಾವಂತ ಪೊಲೀಸ್ ಅಧಿಕಾರಿಯಂತಯೇ ತದ್ರೂಪಿಯಾಗಿರುತ್ತಾನೆ. ನಿಜ ಪೊಲೀಸ್ ಸತ್ತಾಗ ಶತ್ರುಗಳ ಹುಟ್ಟಡಗಿಸಲು ಮತ್ತು ಜನರಿಗೆ ಧೈರ್ಯ ತುಂಬುವ ನಿಟ್ಟಿನಲ್ಲಿ ಪೊಲೀಸರು ಕಳ್ಳನನ್ನು ನಿಷ್ಠಾವಂತ ಪೊಲೀಸ್ ಅಧಿಕಾರಿಯ ಸ್ಥಾನವನ್ನು ತುಂಬುವಂತೆ ಕೇಳಿಕೊಳ್ಳುತ್ತಾರೆ. ಅವರ ಹಿಂದಿನ ನೋವನ್ನು ಅರಿತು ಒಪ್ಪಿಕೊಂಡು ವಿಲನ್ ಜೊತೆ ಹೋರಾಡುವ ಹಾಸ್ಯ ಮತ್ತು ರೋಚಕ ಕಥೆಯೇ ವಿಕ್ರಮಾರ್ಕುಟು. ಈ ಚಲನಚಿತ್ರವನ್ನು ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ವೀಕ್ಷಿಸಬಹುದು.
ಛತ್ರಪತಿ (2005) : ಚಿತ್ರದಲ್ಲಿ ಪ್ರಭಾಸ್ ಮತ್ತು ಶ್ರಿಯಾ ಸರನ್ ನಟಿಸಿದ್ದರೆ, ಶಫಿ, ಭಾನುಪ್ರಿಯಾ ಮತ್ತು ಪ್ರದೀಪ್ ರಾವತ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಹೆಚ್ಚಾಗಿ ಪ್ರೀತಿಸುತ್ತಿದ್ದ ಅಮ್ಮ. ದ್ವೇಷಿಸುವ ತಮ್ಮ, ಇದರ ನಡುವೆ ಅಮಾಯಕ ಜನರನ್ನು ಹಿಂಸಿಸುತ್ತಿದ್ದ ರೌಡಿಗಳಿಂದ ಅವರಿಗೆ ಸ್ವತಂತ್ರ್ಯ ನೀಡಿ ಶಿವಾಜಿಯಾಗಿ ಮೆರೆಯುವ ರೋಚಕ ಕಥೆಯೇ ಛತ್ರಪತಿ.
ಸೈ (2004) : ಮಾಫಿಯಾ ನಾಯಕನನ್ನು ಸೋಲಿಸಲು ಕೈಜೋಡಿಸಲು ನಿರ್ಧರಿಸುವ ಎರಡು ಪ್ರತಿಸ್ಪರ್ಧಿ ವಿದ್ಯಾರ್ಥಿ ಗುಂಪುಗಳ ನಾಯಕರಾದ ಪೃಧ್ವಿ ಮತ್ತು ಶಶಾಂಕ್ ಅವರನ್ನು ಕಥೆಯು ಅನುಸರಿಸುತ್ತದೆ. ತಮ್ಮ ಕಾಲೇಜು ಮೈದಾನವನ್ನು ಮರಳಿ ಗೆಲ್ಲಲು ಅವರು ರಗ್ಬಿ ಪಂದ್ಯದಲ್ಲಿ ಅವರ ತಂಡವನ್ನು ಸೋಲಿಸಬೇಕು. ನಿತಿನ್ ಮತ್ತು ಜೆನಿಲಿಯಾ ಡಿಸೋಜಾ ನಟಿಸಿದ್ದರೆ, ಶಶಾಂಕ್ ಮತ್ತು ಪ್ರದೀಪ್ ರಾವತ್ ಇತರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. Zee5 ನಲ್ಲಿ ಈ ಚಲನಚಿತ್ರವನ್ನು ವೀಕ್ಷಿಸಿ.
ಇದನ್ನೂ ಓದಿ: "ತತ್ಸಮ ತದ್ಭವ" ಚಿತ್ರದಲ್ಲಿ ಬಾಲಾಜಿ ಮನೋಹರ್ ಪಾತ್ರ ಏನು...?
ಸಿಂಹಾದ್ರಿ (2003) : ಸಿಂಹಾದ್ರಿ ಆಕ್ಷನ್ ಆಧಾರಿತ ಸಿನಿಮಾ. ಇದರಲ್ಲಿ ಸಿಂಹಾದ್ರಿ (ಎನ್‌ಟಿಆರ್)ಯನ್ನು ರಾಮ್ ಭೂಪಾಲ್ ವರ್ಮಾ (ನಾಜರ್) ದತ್ತು ಪಡೆದು ಸಾಕುತ್ತಿರುತ್ತಾರೆ. ರಾಮ್ ಭೂಪಾಲ್ ವರ್ಮಾ ಮತ್ತು ಸಿಂಹಾದ್ರಿ ನಡುವಿನ ಬಾಂಧವ್ಯ ತಂದೆ-ಮಗನಂತಿರುತ್ತದೆ. ಇದರ ನಡುವೆ ಕಸ್ತೂರಿ (ಅಂಕಿತಾ) ಬರುತ್ತಾಳೆ. ಅಸಲಿಗೆ ಅವರು ರಾಮ್ ಭೂಪಾಲ್ ವರ್ಮಾ ಅವರ ಮೊಮ್ಮಗಳಾಗಿರುತ್ತಾಳೆ. ಹೀಗೆ ಕಥೆ ಹಿನ್ನೆಲೆಗೆ ತೆರಳಿ ರೊಚಕತೆ ಪಡೆದುಕೊಳ್ಳುತ್ತದೆ. ಚಿತ್ರದಲ್ಲಿ N. T. ರಾಮರಾವ್ ಜೂನಿಯರ್, ಭೂಮಿಕಾ ಚಾವ್ಲಾ ಮತ್ತು ಅಂಕಿತಾ ನಟಿಸಿದ್ದಾರೆ, ಮುಖೇಶ್ ರಿಷಿ, ನಾಸರ್ ಮತ್ತು ರಾಹುಲ್ ದೇವ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ನೀವು ಇದನ್ನು Amazon Prime ವೀಡಿಯೊದಲ್ಲಿ ವೀಕ್ಷಿಸಬಹುದು.
ಸ್ಟುಡೆಂಟ್ ನಂ : 1 (2001) : ಇದು ರಾಜಮೌಳಿಯವರ ಮೊದಲ ಸಿನಿಮಾ. ನಟ ಜೂನಿಯರ್ ಎನ್‌ಟಿಆರ್‌ನೊಂದಿಗೆ ರಾಜಮೌಳಿಯವರು ತಮ್ಮ ಸಿನಿ ಜರ್ನಿ ಪ್ರಾರಂಭಿಸಿದರು. ಚಿತ್ರದಲ್ಲಿ ಎನ್.ಟಿ.ರಾಮರಾವ್ ಜೂನಿಯರ್, ಗಜಲ ಮತ್ತು ರಾಜೀವ್ ಕಣಕಾಲ ನಟಿಸಿದ್ದಾರೆ. ನೀವು ಈ ಚಲನಚಿತ್ರವನ್ನು Voot ನಲ್ಲಿ ವೀಕ್ಷಿಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.