Wedding Gift Movie Review : ಪ್ರೇಮಾ-ಸೋನು ಗೌಡ ಕಮಾಲ್ : ಮಿಸ್‌ ಮಾಡದೆ ಫ್ಯಾಮಿಲಿ ಜೊತೆ ನೋಡಿ 'ವೆಡ್ಡಿಂಗ್‌ ಗಿಫ್ಟ್‌'

Written by - Malathesha M | Last Updated : Jul 7, 2022, 05:55 PM IST
  • ಗಾಂಧಿನಗರದ ಗಲ್ಲಿಯಲ್ಲಿ ಬಲವಾದ ನಂಬಿಕೆ ಒಂದಿದೆ
  • 'ವೆಡ್ಡಿಂಗ್‌ ಗಿಫ್ಟ್‌' ಸಿನಿಮಾ ಮೂಲಕ ವಿಕ್ರಂ ಪ್ರಭು ಕಮಾಲ್‌
  • ಪ್ರೇಮಾ-ಸೋನು ಗೌಡ ಇಲ್ಲಿ ಕಮಾಲ್‌ ಮಾಡಿದ್ದಾರೆ.
Wedding Gift Movie Review : ಪ್ರೇಮಾ-ಸೋನು ಗೌಡ ಕಮಾಲ್ : ಮಿಸ್‌ ಮಾಡದೆ ಫ್ಯಾಮಿಲಿ ಜೊತೆ ನೋಡಿ 'ವೆಡ್ಡಿಂಗ್‌ ಗಿಫ್ಟ್‌' title=

ಗಾಂಧಿನಗರದ ಗಲ್ಲಿಯಲ್ಲಿ ಬಲವಾದ ನಂಬಿಕೆ ಒಂದಿದೆ. ಅದೇನು ಅಂತಾ ಹೇಳಿದ್ರೆ, ಫ್ಯಾಮಿಲಿ ಆಡಿಯನ್ಸ್‌ ಕುಟುಂಬ ಸಮೇತವಾಗಿ ಥಿಯೇಟರ್‌ನಲ್ಲಿ ಕ್ಲೈಮ್ಯಾಕ್ಸ್‌ ತನಕ ತಾಳ್ಮೆಯಿಂದ ಕೂತಿದ್ದರೆ ಆ ಸಿನಿಮಾ ಗೆದ್ದಂತೆ ಅಂತಾ. ಹೌದು, ನೂರಾರು ಸಿನಿಮಾಗಳು ಈ ಮಾತನ್ನು ಸತ್ಯ ಮಾಡಿ ತೋರಿಸಿವೆ. ಸದ್ಯ ನಿರ್ದೇಶಕನ ಕ್ಯಾಪ್ ತೊಟ್ಟು ಗಾಂಧಿ ನಗರದಲ್ಲಿ ನೆಲೆ ನಿಲ್ಲಲು ಹೊಸ ಪ್ರಯತ್ನಕ್ಕೆ ಕೈಹಾಕಿದ್ದ ವಿಕ್ರಂ ಪ್ರಭು ಅಂತಹದ್ದೇ ಸಿನಿಮಾ ಕೊಟ್ಟಿದ್ದಾರೆ. 'ವೆಡ್ಡಿಂಗ್‌ ಗಿಫ್ಟ್‌' ಸಿನಿಮಾ ಮೂಲಕ ವಿಕ್ರಂ ಪ್ರಭು ಕಮಾಲ್‌ ಮಾಡಿದ್ದಾರೆ.

ನಿರ್ದೇಶನದ ಜೊತೆ ವಿಕ್ರಂ ಪ್ರಭು ನಿರ್ಮಾಣವನ್ನೂ ಮಾಡಿದ್ದಾರೆ. ಈ ಚಿತ್ರ ಹಲವು ವೈಶಿಷ್ಟ್ಯತೆಗಳನ್ನ ಹೊಂದಿದೆ. 'ವೆಡ್ಡಿಂಗ್‌ ಗಿಫ್ಟ್‌' ಮೂಲಕ ಈವರೆಗೂ ಯಾರೂ ಹೇಳಲಾಗದ ಕಥೆಯನ್ನ ಬೆಳ್ಳಿತೆರೆ ಮೇಲೆ ಬಿಡಿಸಿ ಇಟ್ಟಿದ್ದಾರೆ ವಿಕ್ರಂ ಪ್ರಭು. ಐಪಿಎಸ್‌ ಸೆಕ್ಷನ್‌ 498ಎ ದುರ್ಬಳಕೆ ಹಾಗೂ ಅದರಿಂದ ಸಮಸ್ಯೆಯ ಸುಳಿಗೆ ಸಿಲುಕುವವರ ಸುತ್ತ ಈ ಕಥೆ ಹೆಣೆಯಲಾಗಿದೆ. ಸಂಸಾರ ಮುರಿಯಲು ಕೆಲವರು ಹೇಗೆ ಐಪಿಎಸ್‌ ಸೆಕ್ಷನ್‌ 498ಎ ದುರ್ಬಳಕೆ ಮಾಡಿಕೊಳ್ಳುತ್ತಾರೆ & ಅದನ್ನ ಹೇಗೆ ಎದುರಿಸಬೇಕು ಎಂಬ ಸಂದೇಶ ಸಿನಿಮಾದಲ್ಲಿ ಅಚ್ಚುಕಟ್ಟಾಗಿ ಮೂಡಿಬಂದಿದೆ.

ಇದನ್ನೂ ಓದಿ : ಶಿವಣ್ಣ ಬಿಚ್ಚಿಟ್ಟ ರಹಸ್ಯ! ಇದೇ ನೋಡಿ ಶಿವರಾಜ್‌ ಕುಮಾರ್‌ ನಿಜವಾದ ಹೆಸರು

ಕೋರ್ಟ್‌ ಸಿನಿಮಾ

ಸಾಮಾನ್ಯ ಸಿನಿಮಾಗಳಿಗೂ ಹಾಗೂ ಕೋರ್ಟ್‌ ರೂಂ ಸಿನಿಮಾಗಳಿಗೂ ಸಾಕಷ್ಟು ವ್ಯತ್ಯಾಸ ಇರುತ್ತದೆ. ಏಕೆಂದರೆ ಕೋರ್ಟ್‌ ರೂಂ ಸಿನಿಮಾಗಳಿಗೆ ಸಿಕ್ಕಾಪಟ್ಟೆ ಹೋಂ ವರ್ಕ್‌ ಮಾಡಲೇಬೇಕು. ಈ ಕೆಲಸವನ್ನ ನಿರ್ದೇಶಕ ಕಂ ನಿರ್ಮಾಪಕ ವಿಕ್ರಂ ಪ್ರಭು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ತಮ್ಮ ಮೊದಲ ಸಿನಿಮಾದಲ್ಲೇ ಕನ್ನಡಿಗರಿಗೆ ಅತ್ಯುತ್ತಮ ಸಿನಿಮಾ ನೀಡುವಲ್ಲಿ ವಿಕ್ರಂ ಪ್ರಭು ಸಕ್ಸಸ್‌ ಕಂಡಿದ್ದಾರೆ. ಹಲವು ವರ್ಷಗಳ ಪರಿಶ್ರಮ ಹಾಗೂ ಕೊವಿಡ್‌ ಕಾದಾಟ ಕೊನೆಗೂ ಫಲ ನೀಡಿದೆ.

ಅಷ್ಟಕ್ಕೂ ವಿಕ್ರಂ ಪ್ರಭು ಸ್ಯಾಂಡಲ್‌ವುಡ್‌ಗೆ ಹೊಸಬರಲ್ಲ. ರಾಜೇಂದ್ರ ಸಿಂಗ್ ಬಾಬು ಅವರ ಗರಡಿ ಸೇರಿ ಹಲವು ವರ್ಷ ಪಳಗಿದ್ದವರು. ಆದರೆ ವೈಯುಕ್ತಿಕ ಕಾರಣದಿಂದ ಚಿತ್ರರಂಗದಿಂದ ದೂರ ಉಳಿದಿದ್ದರು. ಇದೀಗ 'ವೆಡ್ಡಿಂಗ್‌ ಗಿಫ್ಟ್‌' ಮೂಲಕ ದೊಡ್ಡ ಮಟ್ಟದಲ್ಲಿ ಕಂಬ್ಯಾಕ್‌ ಮಾಡಿದ್ದಾರೆ ವಿಕ್ರಂ ಪ್ರಭು. ಹೊಸ ತಂಡದ ಜೊತೆಗೆ ಅತ್ಯುತ್ತಮ ತಾರಾಗಣ ಬೆರೆಸಿ ಹೊಸ ಪ್ರಯೋದಲ್ಲಿ ದೊಡ್ಡ ಯಶಸ್ಸು ಕಂಡಿದ್ದಾರೆ.

ಪ್ರೀತಿಯ ಸೆಳೆತದಿಂದ ಶುರುವಾಗುವ ಸಿನಿಮಾ ಟ್ರ್ಯಾಜಿಡಿ ಎಂಡಿಂಗ್‌ ಜೊತೆಗೆ ಯಾರೂ ಊಹಿಸಲು ಆಗದ ತಿರುವು ಪಡೆಯುತ್ತದೆ. ಪ್ರೇಮಾ-ಸೋನು ಗೌಡ ಇಲ್ಲಿ ಕಮಾಲ್‌ ಮಾಡಿದ್ದಾರೆ. ಇನ್ನು ಅಚ್ಯುತ್ ಕುಮಾರ್‌ ನಟನೆ ಮತ್ತೊಮ್ಮೆ ಅತ್ಯದ್ಭುತ. ಪ್ರೇಮಾ ಹಾಗೂ ಅಚ್ಯುತ್ ಕುಮಾರ್‌ ನಡುವಿನ ಕಾನೂನು ಸಮರ ಗಮನ ಸೆಳೆಯುತ್ತದೆ. ಕ್ಷಣಕ್ಷಣಕ್ಕೂ ಸಿನಿಮಾ ರೋಚಕ ತಿರುವುಗಳನ್ನ ಹೊಂದಿದ್ದು, ಕ್ಲೈಮ್ಯಾಕ್ಸ್‌ ದೊಡ್ಡ ಸರ್ಪ್ರೈಸ್‌ ನೀಡುತ್ತದೆ. ಎಲ್ಲಿಯೂ ಪ್ರೇಕ್ಷಕ ಪ್ರಭುವಿನ ನಿರೀಕ್ಷೆಗೆ ಧಕ್ಕೆ ಬಾರದಂತೆ ಅಚ್ಚುಕಟ್ಟಾಗಿ ಸಿನಿಮಾ ನಿರ್ಮಿಸಿ, ನಿರ್ದೇಶಿಸಿದ್ದಾರೆ ವಿಕ್ರಂ ಪ್ರಭು.

ಇದನ್ನೂ ಓದಿ : ಕಾಳಿ ಪೋಸ್ಟರ್‌ ಬಳಿಕ ಬೀಡಿ ಸೇದುತ್ತಿರುವ ಶಿವ-ಪಾರ್ವತಿ ಫೋಟೋ ಶೇರ್‌ ಮಾಡಿದ ಲೀನಾ

'ವೆಡ್ಡಿಂಗ್‌ ಗಿಫ್ಟ್‌' ಚಿತ್ರಕ್ಕೆ ಉದಯ್‌ ಲೀಲಾ ಛಾಯಾಗ್ರಹಣ & ಬಾಲಚಂದ್ರ ಪ್ರಭು ಸಂಗೀತ ಹಾಗೂ ವಿಜೇತ್ ಚಂದ್ರ ಸಂಕಲನವಿದೆ. ಈ ಸಿನಿಮಾದಲ್ಲಿ ಹೀರೋ ಇಲ್ಲದಿದ್ದರೂ, ಮುಖ್ಯ ಭೂಮಿಕೆಯಲ್ಲಿ ನಿಶಾನ್‌ ನಾಣಯ್ಯ ಮತ್ತೆ ಮಿಂಚಿದ್ದಾರೆ. ಈ ಹಿಂದೆ ಮಲಯಾಳಂ ಸಿನಿಮಾಗಳಲ್ಲಿ ನಿಶಾನ್‌ ತಮ್ಮ ನಟನೆ ಸಾಮರ್ಥ್ಯ ತೋರಿಸಿದ್ದವರು. ಹಾಗೇ ನಟಿ ಪವಿತ್ರಾ ಲೋಕೇಶ್‌ ಕೂಡ  'ವೆಡ್ಡಿಂಗ್‌ ಗಿಫ್ಟ್‌' ಸಿನಿಮಾಗೆ ಸಾಥ್‌ ನೀಡಿದ್ದು, ಜುಲೈ 8ರಂದು 80ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ರಿಲೀಸ್‌ಗೆ ರೆಡಿಯಾಗಿದೆ 'ವೆಡ್ಡಿಂಗ್‌ ಗಿಫ್ಟ್‌'.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News