ಬೆಂಗಳೂರು: ಕನ್ನಡಿಗರ ಪಾಲಿನ ಪ್ರೀತಿಯ ಅಪ್ಪು, ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ರೀ ರಿಲೀಸ್ ಆಗಿ ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿದೆ.
ಮಾರ್ಚ್ 17ರಂದು ಬೆಳ್ಳಿ ತೆರೆಗೆ ಅಪ್ಪಳಿಸಿದ್ದ ಜೇಮ್ಸ್, ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿತ್ತು. ಆದರೆ ಅಪ್ಪು ಅವರ ಧ್ವನಿ ಇಲ್ಲದೆ ಫ್ಯಾನ್ಸ್ ಒಂದಷ್ಟು ಬೇಸರಗೊಂಡಿದ್ದರು. ಹೀಗಾಗಿ ಅಪ್ಪು ಅವರ ಧ್ವನಿಯಲ್ಲೇ ಜೇಮ್ಸ್ ರೀ ರಿಲೀಸ್‌ಗೆ ಚಿತ್ರತಂಡ ಸಾಕಷ್ಟು ಪ್ರಯತ್ನಪಟ್ಟು, ಏಪ್ರಿಲ್ 22ರಂದು 150ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಅಪ್ಪು ಅವರ ಧ್ವನಿಯಲ್ಲೇ ರೀ ರಿಲೀಸ್ ಮಾಡಲಾಗಿತ್ತು. ಇದೀಗ ಜೇಮ್ಸ್ ಚಿತ್ರವನ್ನ ಅಪ್ಪು ಅವರ ಧ್ವನಿಯಲ್ಲೇ ಕಣ್ತುಂಬಿಕೊಂಡ ಅಭಿಮಾನಿಗಳು, ಫಿದಾ ಆಗಿದ್ದಾರೆ. ಅಪ್ಪು ಸಿನಿಮಾ ಎಲ್ಲೆಲ್ಲೂ ಅಬ್ಬರಿಸುತ್ತಿದೆ.
ಜೇಮ್ಸ್ ಬರೀ ಸಿನಿಮಾ ಅಲ್ಲ, ಅದು ಭಾವನೆ. ಯಾಕಂದ್ರೆ ಕನ್ನಡಿಗರ ಪಾಲಿನ ಪ್ರೀತಿಯ ಅಪ್ಪು ಅಭಿನಯದ ಕೊನೆಯ ಸಿನಿಮಾ ಜೇಮ್ಸ್. ಆದರೆ ಸಿನಿಮಾ ಬಿಡುಗಡೆಗೆ ಅಪ್ಪು ಇರಲೇ ಇಲ್ಲ, ಕೋಟಿ ಕೋಟಿ ಅಭಿಮಾನಿಗಳನ್ನ ಅಗಲಿದ್ದರು ಪವರ್ ಸ್ಟಾರ್. ಈ ನೋವಿನಲ್ಲೇ ಮಾರ್ಚ್ 17ರಂದು ಜೇಮ್ಸ್ ಹಬ್ಬ ಶುರುವಾಗಿತ್ತು. ಅಪ್ಪು ಅವರನ್ನ ಸಾವಿರಾರು ಸ್ಕ್ರೀನ್‌ಗಳಲ್ಲಿ ಕಣ್ತುಂಬಿಕೊಂಡಿದ್ದರು ಭಾರತೀಯರು. ಆದರೂ ಒಂದು ನೋವು ಅಭಿಮಾನಿಗಳನ್ನ ಕಾಡುತ್ತಿತ್ತು. ಇದೀಗ ಆ ನೋವು ದೂರವಾಗಿದೆ.
ಇದನ್ನೂ ಓದಿ- ಪುನೀತ್ ಧ್ವನಿಯಲ್ಲಿ 'ಜೇಮ್ಸ್' ಮರು ಬಿಡುಗಡೆ: ಒಟಿಟಿಯಲ್ಲೂ ಸಖತ್ ರೆಸ್ಪಾನ್ಸ್
150ಕ್ಕೂ ಹೆಚ್ಚು ಸ್ಕ್ರೀನ್ಸ್:
ಕರ್ನಾಟಕ ರತ್ನ, ಪವರ್ ಸ್ಟಾರ್ ಡಾ. ಪುನೀತ್ ರಾಜ್‌ಕುಮಾರ್ ಅವರ ಧ್ವನಿ ಜೇಮ್ಸ್ ಸಿನಿಮಾದಲ್ಲಿ ಇಲ್ಲ ಎಂಬ ಕೊರಗು ಕೋಟಿ ಕೋಟಿ ಫ್ಯಾನ್ಸ್ ಮನದಲ್ಲಿ ಮನೆ ಮಾಡಿತ್ತು. ಹೀಗಾಗಿಯೇ ಜೇಮ್ಸ್ ನಿರ್ದೇಶಕ ಚೇತನ್ ಸೇರಿದಂತೆ ಇಡೀ ಜೇಮ್ಸ್ ಸಿನಿಮಾ ತಂಡ ಅಪ್ಪು ಅವರ ಧ್ವನಿ ನೀಡಲು ಸತತ ಪ್ರಯತ್ನ ನಡೆಸಿತ್ತು. ಅದು ಫಲ ನೀಡಿ ಏಪ್ರಿಲ್ 22 ಅಂದ್ರೆ ಕಳೆದ ಶುಕ್ರವಾರ ಜೇಮ್ಸ್ ಸಿನಿಮಾ ಅದ್ಧೂರಿಯಾಗಿ ರೀ ರಿಲೀಸ್ ಆಗಿತ್ತು. ಸುಮಾರು 150ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಮತ್ತೆ ತೆರೆ ಕಂಡ ಜೇಮ್ಸ್ ಸಿನಿಮಾ ಸಖತ್ ಸದ್ದು ಮಾಡುತ್ತಿದೆ.
ಅಭಿಮಾನಿಗಳ ಸಾಗರ:
ಈಗಾಗಲೇ ಜೇಮ್ಸ್ ಸಿನಿಮಾವನ್ನ 2-3 ಬಾರಿ ಕಣ್ತುಂಬಿಕೊಂಡಿದ್ದ ಅಪ್ಪು ಫ್ಯಾನ್ಸ್, ಇದೀಗ ಪವರ್ ಸ್ಟಾರ್ ಪುನೀತ್ ಅವರನ್ನ ಮತ್ತೊಮ್ಮೆ ಬೆಳ್ಳಿ ತೆರೆಯ ಮೇಲೆ ಅವರದ್ದೇ ಧ್ವನಿಯಲ್ಲಿ ಕಣ್ತುಂಬಿಕೊಳ್ಳಲು ಬರುತ್ತಿದ್ದಾರೆ. ಹೀಗಾಗಿ ವಾರಂತ್ಯದಲ್ಲಿ ಜೇಮ್ಸ್ ಸಿನಿಮಾ ಭರ್ಜರಿ ಸದ್ದು ಮಾಡಿದೆ. ಬಹುತೇಕ ಚಿತ್ರಮಂದಿರಗಳಲ್ಲಿ ಟಿಕೆಟ್ ಸೋಲ್ಡ್ ಔಟ್ ಆಗಿ, ಹೌಸ್‌ಫುಲ್ ಪ್ರದರ್ಶನವಾಗಿದೆ. ಹೀಗೆ ಜೇಮ್ಸ್ ಅಬ್ಬರ ಈಗಲೂ ಮುಂದುವರಿದಿದ್ದು, ಒಟಿಟಿ ರಿಲೀಸ್ ಬಳಿಕವೂ ಅಪ್ಪು ಸಿನಿಮಾ ಬೆಳ್ಳಿ ತೆರೆಯ ಮೇಲೆ ಮಿಂಚುತ್ತಿದೆ.
ಇದನ್ನೂ ಓದಿ- 'ಅಪ್ಪು' ಧ್ವನಿಯಲ್ಲೇ ಮತ್ತೊಮ್ಮೆ ತೆರೆಗೆ ಬರುತ್ತಿದೆ 'ಜೇಮ್ಸ್' ಸಿನಿಮಾ..!
ಒಟ್ಟಾರೆ ಹೇಳುವುದಾದರೆ ಜೇಮ್ಸ್ ಸಿನಿಮಾ ಹಲವು ದಾಖಲೆಗಳನ್ನ ಪುಡಿ ಪುಡಿ ಮಾಡುತ್ತಿದೆ. ರಿಲೀಸ್ ಆದ 4 ದಿನದಲ್ಲಿ 100 ಕೋಟಿ ಕ್ಲಬ್ ಸೇರುವ ಮೂಲಕ ಅತಿ ವೇಗವಾಗಿ 100 ಕೋಟಿ ಸಂಪಾದಿಸಿದ ಕನ್ನಡದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು ಜೇಮ್ಸ್. ನಂತರ 150 ಕೋಟಿ ಕ್ಲಬ್ ಸೇರುವ ಮೂಲಕ ಮತ್ತಷ್ಟು ಸದ್ದು ಮಾಡಿತ್ತು ಅಪ್ಪು ಅವರ ಸಿನಿಮಾ. ರೀ ರಿಲೀಸ್ ಆದ ಬಳಿಕವೂ ಬಾಕ್ಸ್ ಆಫಿಸ್‌ನಲ್ಲಿ ಸದ್ದು ಮಾಡುತ್ತಿದೆ ಜೇಮ್ಸ್.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.