ಮೈಸೂರು: ಇತ್ತೀಚೆಗೆ ಕಾರು ಅಪಘಾತದಿಂದಾಗಿ ಗಾಯಗೊಂಡು ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಾಗಿದ್ದ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಶನಿವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೀಗ ಆರೋಗ್ಯವಾಗಿದ್ದೇನೆ. ಒಂದು ತಿಂಗಳು ವಿಶ್ರಾಂತಿ ತೆಗೆದುಕೊಳ್ಳಲು ಡಾಕ್ಟರ್ ತಿಳಿಸಿದ್ದಾರೆ. ಒಂದು ವರ್ಷ ವಿಶ್ರಾಂತಿಯಲ್ಲಿರುವ ಅಗತ್ಯವಿಲ್ಲ, ಕೆಲ ದಿನಗಳ ನಂತರ ಎಂದಿನಂತೆ ನಿತ್ಯ ಚಟುವಟಿಕೆಗಳಲ್ಲಿ ತೊಡಗಬಹುದು. ಉಳಿದಂತೆ ಇನ್ಯಾವುದೇ ಸಮಸ್ಯೆಯಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಕಾರಿನಲ್ಲಿ ಎಷ್ಟು ಮಂದಿ ಇದ್ದರು ಮತ್ತು ಕಾರು ಅಪಘಾತದ ಬಗ್ಗೆ ಇದ್ದ ಗೊಂದಲಗಳ ಬಗ್ಗೆ ಸ್ಪಷ್ಟನೆ ನೀಡಿದ ದರ್ಶನ್, ಕಾರಿನಲ್ಲಿ 5 ಜನ ಮಾತ್ರ ಇದ್ದೆವು, 6 ಮಂದಿಯಲ್ಲ. ಅಪಘಾತದ ಜಾಗ ನೋಡಿದರೆ ಅಪಘಾತದ ಬಗ್ಗೆ ತಿಳಿಯುತ್ತದೆ. ರಸ್ತೆ ತಿರುವಿನಲ್ಲಿ ಅಪಘಾತ ಸಂಭವಿಸಿದೆ. ಆದರೆ ನನ್ನ ಕಾರು ಕಂಬಕ್ಕೆ ಡಿಕ್ಕಿಯಾಗಿಲ್ಲ. ಬೇರೊಂದು ಅಪಘಾತದಲ್ಲಿ ಆ ಕಂಬ ಉರುಳಿ ಬಿದ್ದಿತ್ತು. ಅಪಘಾತದ ವೇಳೆ ಗೆಳೆಯ ಲಕ್ಷ್ಮಣ್ ಕಾರು ಚಲಾಯಿಸುತ್ತಿದ್ದರು. ಹಾಗೇ ರಾಯ್ ಆಂಟೋನಿ ಯಾವುದೇ ತಪ್ಪು ಮಾಡಿಲ್ಲ. ಮಾಧ್ಯಮಗಳು ಸುದ್ದಿಯನ್ನು ತಿರುಚಿದವು ಎಂದು ದರ್ಶನ್ ಬೇಸರ ವ್ಯಕ್ತಪಡಿಸಿದರು.
ಕಳೆದ ಭಾನುವಾರ ರಾತ್ರಿ ಮೈಸೂರಿನ ರಿಂಗ್ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ದರ್ಶನ್ ಬಲಗೈ ಮುರಿದಿತ್ತು. ದರ್ಶನ್ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಇಂದು ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಈ ಅಪಘಾತದಲ್ಲಿ ಗಾಯಗೊಂಡಿದ್ದ ನಟರಾದ ದೇವರಾಜ್, ಪ್ರಜ್ವಲ್ ಹಾಗೂ ಕಾರು ಚಾಲಕ ರಾಯ್ ಆಂಟೋನಿ ಅವರನ್ನು ಮಂಗಳವಾರವೇ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು.