ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದ್ದ ಶ್ರುತಿ ಹರಿಹರನ್, ಅರ್ಜುನ್ ಸರ್ಜಾ #MeToo ಕದನ ಇದೀಗ ಕೋರ್ಟ್ ಮೆಟ್ಟಿಲೇರಿದ್ದು, ನಟ ಅರ್ಜುನ್ ಸರ್ಜಾ ಶ್ರುತಿ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸಿದ್ದಾರೆ.
ನಟ ಅರ್ಜುನ್ ಸರ್ಜಾ ತಮ್ಮ ಸೋದರಳಿಯ ಧ್ರುವ ಸರ್ಜಾ ಮೂಲಕ ನಗರದ ಸಿಟಿ ಸಿವಿಲ್ ಕೋರ್ಟ್ ನಲ್ಲಿ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
'ವಿಸ್ಮಯ' ಸಿನೆಮಾ ಚಿತ್ರೀಕರಣವಾಗುವಾಗ ನಟ ಅರ್ಜುನ್ ಸರ್ಜಾ ಅವರು ತಮ್ಮ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದರು, ಲೈಂಗಿಕ ಕಿರುಕುಳ ನೀಡಿದ್ದರು ಎಂದು ಚಿತ್ರದ ನಾಯಕಿ ಶ್ರುತಿ ಹರಿಹರನ್ ಅವರು ಆರೋಪಿಸಿದ್ದರು. #MeToo ಅಭಿಯಾನದಡಿ ಬಹುಭಾಷಾ ನಟ ಅರ್ಜುನ್ ಸರ್ಜಾ ಮೇಲೆ ಶ್ರುತಿ ಹರಿಹರನ್ ಮಾಡಿದ್ದ ಲೈಂಗಿಕ ಕಿರುಕುಳ ಆರೋಪ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲೇ ಚರ್ಚೆಯಾಗುತ್ತಿದೆ.
ಚಿತ್ರೋದ್ಯಮದ ಅನೇಕ ನಟ, ನಟಿಯರು, ನಿರ್ಮಾಪಕ ಹಾಗೂ ನಿರ್ದೇಶಕರು ಅರ್ಜುನ್ ಸರ್ಜಾ ಬೆಂಬಲಿಸಿದ್ದರೆ, ಮತ್ತೆ ಕೆಲವರು ನಟಿ ಶೃತಿ ಹರಿಹರನ್ ಪರವಾಗಿ ನಿಂತಿದ್ದರು.
ಏತನ್ಮಧ್ಯೆ, ಎರಡು ದಿನಗಳ ಹಿಂದೆ ಅರ್ಜುನ್ ಸರ್ಜಾ ಅವರ ಮಾವ ಹಾಗೂ ಹಿರಿಯ ನಟ ರಾಜೇಶ್ ನಟಿ ಶೃತಿ ಹರಿಹರನ್ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದ ರಾಜೇಶ್, ಅರ್ಜುನ್ಸರ್ಜಾ ತೇಜೋವಧೆಗೆ ವ್ಯವಸ್ಥಿತ ಹುನ್ನಾರ ನಡೆದಿದೆ ಎಂದು ಆರೋಪಿಸಿದ್ದರು. ಅಲ್ಲದೆ, ಎರಡು ವರ್ಷಗಳ ಹಿಂದೆ ನಡೆದಿರುವ ಘಟನೆಯನ್ನು ಈಗ ಪ್ರಸ್ತಾಪಿಸಿ ಶೃತಿಹರಿಹರನ್ ದೂರು ನೀಡಿದ್ದಾರೆ. ಎರಡು ವರ್ಷ ಸುಮ್ಮನಿದ್ದು ಈಗ ಏಕಾಏಕಿ ದೂರು ನೀಡಲು ಹೇಗೆ ಸಾಧ್ಯ ? ಇಷ್ಟು ದಿನ ಇಲ್ಲದ ಧೈರ್ಯ ಈಗ ದಿಢೀರ್ ಹೇಗೆ ಬರಲು ಸಾಧ್ಯ? ಅದರ ಹಿಂದೆ ಯಾರು ಇದ್ದಾರೆ ಎಂದು ಪ್ರಶ್ನಿಸಿದ್ದರು.
ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡಿದ್ದ ಕರ್ನಾಟಕ ಚಲನಚಿತ್ರ ಮಂಡಳಿ, ಇಂದು ಸಂಜೆ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷ ಅಂಬರೀಶ್ ಅಧ್ಯಕ್ಷತೆಯಲ್ಲಿ ಸಂಧಾನ ಸಭೆ ಏರ್ಪಡಿಸಿತ್ತು. ಸಂಧಾನ ಸಭೆಗಾಗಿ ರೂಪಿಸಿರುವ ಸಭೆಯಲ್ಲಿ ಮೂವರು ಹೆಂಗಸರು ಮತ್ತು ಐವರು ಗಂಡಸರು ಇದ್ದಾರೆ ಎಂದು ತಿಳಿದುಬಂದಿದೆ.