ಇಂದು ನಟಿ ರಾಗಿಣಿಯ ಪೊಲೀಸ್ ಕಸ್ಟಡಿ ಅಂತ್ಯ; ಜೈಲಾ ಅಥವಾ ಬೇಲಾ ಇಂದು ನಿರ್ಧಾರ

ನಟಿ ರಾಗಿಣಿ ಅವರನ್ನು ಕಳೆದ 8 ದಿನಗಳಿಂದ ವಿಚಾರಣೆ ನಡೆಸಲಾಗುತ್ತಿದೆ. ಆದರೆ ತನಿಖೆ ವೇಳೆ ಅವರು ಯಾವುದೇ ಮಾಹಿತಿ ಬಾಯಿಬಿಟ್ಟಿಲ್ಲ. 

Written by - Yashaswini V | Last Updated : Sep 11, 2020, 09:11 AM IST
  • ನಟಿ ರಾಗಿಣಿ ಅವರನ್ನು ಕಳೆದ 8 ದಿನಗಳಿಂದ ವಿಚಾರಣೆ ನಡೆಸಲಾಗುತ್ತಿದೆ.
  • ಆದರೆ ತನಿಖೆ ವೇಳೆ ಅವರು ಯಾವುದೇ ಮಾಹಿತಿ ಬಾಯಿಬಿಟ್ಟಿಲ್ಲ.
  • ಇಂದು ಅವರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಿರುವ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಟಿ ಕ್ರೈಂ ಬ್ರಾಂಚ್ (CCB) ಪೊಲೀಸರು
ಇಂದು ನಟಿ ರಾಗಿಣಿಯ ಪೊಲೀಸ್ ಕಸ್ಟಡಿ ಅಂತ್ಯ; ಜೈಲಾ ಅಥವಾ ಬೇಲಾ ಇಂದು ನಿರ್ಧಾರ title=

ಬೆಂಗಳೂರು: ರಾಜ್ಯದಲ್ಲಿ ಪತ್ತೆಯಾಗಿರುವ ಡ್ರಗ್ಸ್ ಮಾಫಿಯಾಕ್ಕೆ (Drugs Mafia) ಸಂಬಂಧಿಸಿದಂತೆ ಪೊಲೀಸರ ವಶದಲ್ಲಿರುವ ಚಿತ್ರನಟಿ ರಾಗಿಣಿ ದ್ವಿವೇದಿ (Ragini Dwivedi) ಅವರ ಕಸ್ಟಡಿ ಅವಧಿ ಇಂದು ಮುಕ್ತಾಯವಾಗಲಿದ್ದು ಮತ್ತೆ ವಶಕ್ಕೆ ನೀಡಿ ಎಂದು ಪೊಲೀಸರು ಕೇಳುವ ಸಾಧ್ಯತೆ ಇದೆ. ಅದಲ್ಲದೆ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು ಅವರಿಗೆ ಜೈಲಾ ಅಥವಾ ಬೇಲಾ ಎಂಬುದು ಕೂಡ ಇಂದೇ ನಿರ್ಧಾರವಾಗಲಿದೆ.

ನಟಿ ರಾಗಿಣಿ ಅವರನ್ನು ಕಳೆದ 8 ದಿನಗಳಿಂದ ವಿಚಾರಣೆ ನಡೆಸಲಾಗುತ್ತಿದೆ. ಆದರೆ ತನಿಖೆ ವೇಳೆ ಅವರು ಯಾವುದೇ ಮಾಹಿತಿ ಬಾಯಿಬಿಟ್ಟಿಲ್ಲ. ಆದುದರಿಂದ ಇಂದು ಅವರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಿರುವ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಟಿ ಕ್ರೈಂ ಬ್ರಾಂಚ್ (CCB) ಪೊಲೀಸರು 'ರಾಗಿಣಿ ಈವರೆಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ, ಆದುದರಿಂದ ಹೆಚ್ಚಿನ ವಿಚಾರಣೆಗಾಗಿ ಮತ್ತಷ್ಟು ಕಾಲ ಪೊಲೀಸ್ ವಶಕ್ಕೆ ಕೊಡಿ' ಎಂದು‌ ಮನವಿ ಮಾಡಿಕೊಳ್ಳುವ ಸಾಧ್ಯತೆ ಇದೆ.

ಒಂದೊಮ್ಮೆ ಸಿಟಿ ಕ್ರೈಂ ಬ್ರಾಂಚ್ ಪೊಲೀಸರು ತಮ್ಮ ವಶಕ್ಕೆ ಕೇಳದಿದ್ದರೆ ರಾಗಿಣಿ  ನ್ಯಾಯಾಂಗ ಬಂಧನಕ್ಕೆ ಅಂದರೆ ಜೈಲಿಗೆ ಹೋಗಬೇಕಾಗುತ್ತದೆ. ಇನ್ನೊಂದೆಡೆ ನಟಿ ರಾಗಿಣಿ ಪರ ವಕೀಲರು ಜಾಮೀನು ಪಡೆಯಲು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಮದ್ಯಾಹ್ನದ ಬಳಿಕ ಜಾಮೀನು ಅರ್ಜಿ ವಿಚಾರಣೆ ನಡೆಯುವ ಸಾಧ್ಯತೆ ಕೂಡ ಇದೆ. ಆದರೆ ಗಂಭೀರ ಆರೋಪ ಎದುರಿಸುತ್ತಿರುವ ರಾಗಿಣಿ ಅವರಿಗೆ ಜಾಮೀನು ಸಿಗುವುದು ಬಹುತೇಕ ಅನುಮಾನಸ್ಪದವಾಗಿದೆ‌.

ಈವರೆಗೆ ರಾಗಿಣಿ ಡ್ರಗ್ಸ್ ಸೇವನೆ ಮತ್ತು ಸರಬರಾಜು ಬಗ್ಗೆ ಏನೊಂದು ಮಾಹಿತಿಯನ್ನು ತಿಳಿಸಿಲ್ಲ.‌ ರಾಗಿಣಿಯನ್ನು ವಿಚಾರಣೆ ಮಾಡುವುದು ಸಿಸಿಬಿ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಏನೇ ಪ್ರಶ್ನೆ ಮಾಡಿದರೂ ರಾಗಿಣಿ 'ನನಗೇನು ಗೊತ್ತಿಲ್ಲ' ಎಂದು ಹೇಳುತ್ತಿದ್ದಾರೆ. ಕೆಲವೊಮ್ಮೆ 'ಮರೆತಿದ್ದೇನೆ' ಎಂಬ ಉತ್ತರ ನೀಡುತ್ತಿದ್ದಾರೆ ಎನ್ನಲಾಗಿದೆ.

ರಾಗಿಣಿ ತಮ್ಮ ಮೊಬೈಲ್ ನಲ್ಲಿ‌ ಇದ್ದ ಮೆಸೇಜ್ ಗಳನ್ನು ಡಿಲೀಟ್ ಮಾಡಿದ್ದಾರೆ. ಆ ಸಂದೇಶಗಳನ್ನು ಮತ್ತೆ ಸಂಗ್ರಹಿಸಿರುವ ಪೊಲೀಸರು ಅದೇ ಎಸ್ ಎಂಎಸ್ ಗಳನ್ನು ಇಟ್ಟುಕೊಂಡು ವಿಚಾರಣೆ ಮಾಡಲು ಮುಂದಾಗಿದ್ದಾರೆ. ಆದರೂ ಏನೂ ಪ್ರಯೋಜನ ಆಗುತ್ತಿಲ್ಲ.‌ ಇನ್ನೊಂದೆಡೆ ಇವತ್ತು ನಟಿ ಸಂಜನಾ ಅವರನ್ನು ಸಿಟಿ ಕ್ರೈಂ ಬ್ರಾಂಚ್ ಮುಖ್ಯಸ್ಥರಾದ ಸಂದೀಪ್ ಪಾಟೀಲ್ ಅವರೇ ವಿಚಾರಣೆ ನಡೆಸುತ್ತಾರೆ ಎಂದು ಹೇಳಲಾಗಿದೆ.

Trending News