ಡೆಹ್ರಾಡೂನ್: ಸುಮಾರು ಆರು ತಿಂಗಳಿನಿಂದ ಮುಚ್ಚಿದ್ದ ಉತ್ತರಾಖಂಡದ ಕೇದಾರನಾಥ ದೇವಾಲಯ ಮೇ 9 ರಂದು ತೆರೆಯಲಿದೆ ಎಂದು ಅಧಿಕಾರಿಗಳು ಸೋಮವಾರ (ಮಾರ್ಚ್ 04)ದಂದು ಮಾಹಿತಿ ನೀಡಿದರು. ಮಹಾಶಿವರಾತ್ರಿಯ ಸಂದರ್ಭದಲ್ಲಿ ರುದ್ರಪ್ರಯಾಗ ಜಿಲ್ಲೆಯ ಉಖಿಮಾಥ್ನಲ್ಲಿರುವ ಓಂಕಾರೇಶ್ವರ ದೇವಸ್ಥಾನದಲ್ಲಿ ಬಾಗಿಲು ತೆರೆಯುವ ದಿನಾಂಕ ಮತ್ತು ಸಮಯವನ್ನು ಘೋಷಿಸಲಾಯಿತು. ಪುರೋಹಿತರು ಇದನ್ನು ಮಂತ್ರಗಳು ಮತ್ತು ಶಂಖನಾದದ ನಡುವೆ ಘೋಷಿಸಿದರು.
ಕೇದಾರನಾಥ ದೇವಾಲಯವು ಹಿಂದೂಗಳ ಪವಿತ್ರ ದೇವಾಲಯಗಳಲ್ಲಿ ಒಂದಾಗಿದ್ದು, ಇದು ಹಿಮಾಲಯ ಪರ್ವತ ಶ್ರೇಣಿಯಲ್ಲಿ ಉತ್ತರಾಖಂಡ ರಾಜ್ಯದ ಚಮೋಲಿ (ಉತ್ತರಕಾಶಿ) ಜಿಲ್ಲೆಯಲ್ಲಿ ಮಂದಾಕಿನಿ ನದಿಯ ದಂಡೆಯ ಮೇಲಿರುವ ಶಿವನ ದೇವಾಲಯ. ಸುಮಾರು 3564 ಮೀಟರ್ ಎತ್ತರದಲ್ಲಿರುವ ಈ ಸ್ಥಳವು ವಿಪರೀತ ಚಳಿಯ ವಾತಾವರಣದಿಂದ ಕೂಡಿರುವುದರಿಂದ ಈ ದೇವಾಲಯವು ಏಪ್ರಿಲ್ ಕೊನೆಯ ಭಾಗ ಅಥವಾ ಮೇ ಮೊದಲ ವಾರದಿಂದ ನವೆಂಬರ್ ಮೊದಲ ವಾರದವರೆಗೆ ಮಾತ್ರ ಭಕ್ತಾದಿಗಳ ದರ್ಶನಕ್ಕೆ ಮುಕ್ತವಾಗಿರುತ್ತದೆ.
ಆದಿ ಶಂಕರಾಚಾರ್ಯರ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಈ ವರ್ಷ(2019) ರಲ್ಲಿ ಮೇ 9 ರಂದು ಬೆಳಿಗ್ಗೆ 5:35ಕ್ಕೆ ಬಾಬಾ ಕೇದಾರನಾಥ ದೇವಾಲಯದ ಬಾಗಿಲು ತೆರೆಯಲಾಗುವುದು ಎಂದು ಉಖಿಮಾಥ್ನಲ್ಲಿರುವ ಓಂಕಾರೇಶ್ವರ ದೇವಸ್ಥಾನದಲ್ಲಿ ಘೋಷಿಸಲಾಯಿತು. ಶ್ರೀ ಶ್ರೀ ಕೇದಾರನಾಥ ಧಾಮಕ್ಕೆ, ಮೇ 6 ರಂದು ಉಖಿ ಮಠದಿಂದ ಪಂಚಮತಿ ಡೋಲಿ ನಿರ್ಗಮಿಸಲಿದೆ. ಕಾರ್ಯಕ್ರಮದ ಪ್ರಕಾರ, ಮೇ 6 ರಂದು ಡೋಲಿ ಫಾಟಾ, ಮೇ 7ರಂದು ಗೌರಿಕುಂಡ್, ಮೇ 8ರಂದು ಶ್ರೀ ಶ್ರೀ ಕೇದಾರನಾಥಕ್ಕೆ ತಲುಪಲಿದೆ. ಮೇ 9 ರಂದು, ಗುರುವಾರ, ಸಿದ್ಧಿ ಯೋಗ ಮತ್ತು ರವಿ ಯೋಗದ ಉತ್ತಮ ಸಂಯೋಜನೆ ನಡೆಯಲಿದೆ. ಇದು ಬಹಳ ಮಂಗಳಕರವಾಗಿದೆ ಎಂದು ಪುರೋಹಿತರು ತಿಳಿಸಿದರು.
ಪ್ರಾಮುಖ್ಯತೆ:
ಕೇದಾರನಾಥ ಯಾತ್ರೆಯು ‘ಭಾರತ-ಚೀನಾ’ ಗಡಿಗೆ ಅಂಟಿಕೊಂಡಂತಿರುವ ‘ಗೌರಿಕುಂಡ’ವೆಂಬ ಪ್ರದೇಶದಿಂದ ಪ್ರಾರಂಭವಾಗುತ್ತದೆ. ಸಮತಟ್ಟಾದ ಪ್ರದೇಶವಾದ ಇಲ್ಲಿಂದ ಸುಮಾರು 14 ಕಿ.ಮೀ. ಕಾಲ್ನಡಿಗೆ, ಕುದುರೆಸವಾರಿ ಅಥವಾ ಡೋಲಿಯಲ್ಲಿ ಪಯಣಿಸಬೇಕು. ದೇವಾಲಯದ ಮುಖ್ಯದ್ವಾರದಿಂದ ಒಳಗೆ ಬಂದೊಡನೆ ಪ್ರಾಕಾರದಲ್ಲಿ ಪಾಂಡವರ, ಕೃಷ್ಣ, ನಂದಿ ಮತ್ತು ವೀರಭದ್ರನ ಮೂರ್ತಿಗಳಿವೆ. ಈ ದೇವಾಲಯ ವಿಚಿತ್ರವೆಂದರೆ ತ್ರಿಕೋನಾಕಾರದ ಕಲ್ಲಿನ ಮೇಲೆ ಕೆತ್ತಿರುವ ಮಾನವನ ತಲೆ. ಈ ದೇವಸ್ಥಾನದ ಹಿಂದೆಯೇ ಶಂಕರರ ಸಮಾಧಿ ಮಂದಿರವಿದೆ. ಗೌರಿಕುಂಡವು ಸಮುದ್ರಮಟ್ಟದಿಂದ 6500 ಅಡಿ ಎತ್ತರದಲ್ಲಿದೆ. ಇಲ್ಲಿನ ಪ್ರಾಚೀನ ಶೈವ ಪೀಠಗಳಲ್ಲೊಂದಾದ ಏಕೋರಾಮಾರಾಧ್ಯ ಪೀಠವು ಶತಶತಮಾನಗಳಿಂದಲೂ ಅಸ್ತಿತ್ವದಲ್ಲಿದ್ದು ಖ್ಯಾತಿ ಗಳಿಸಿದೆ. ಇದರ ಮುಖ್ಯಸ್ಥರು ಕರ್ನಾಟಕದವರೆಂಬುದು ಹೆಮ್ಮೆಯ ಸಂಗತಿ.
'ಚಾರ್ ಧಾಮ್' ಎಂದು ಕರೆಯಲ್ಪಡುವ ಕೇದಾರನಾಥ, ಬದ್ರಿನಾಥ, ಗಂಗೋತ್ರಿ ಮತ್ತು ಯಮುನೋತ್ರಿಗಳು ಪ್ರತಿವರ್ಷ ಅಕ್ಟೋಬರ್-ನವೆಂಬರ್ ನಲ್ಲಿ ಮುಚ್ಚಲ್ಪಡುತ್ತವೆ. ಚಳಿಗಾಲ ಕಳೆಯುತ್ತಿದ್ದಂತೆ ಸುಮಾರು ಆರು ತಿಂಗಳ ಬಳಿಕ ಎಪ್ರಿಲ್ ಕೊನೆ ವಾರ ಅಥವಾ ಮೇ ಮೊದಲ ವಾರದಲ್ಲಿ ದೇವಾಲಯಗಳ ಬಾಗಿಲು ತೆರೆಯಲಾಗುತ್ತದೆ. 2018 ರಲ್ಲಿ 7,32,241 ಭಕ್ತಾದಿಗಳು ಬಾಬಾ ಕೇದಾರನಾಥಕ್ಕೆ ಭೇಟಿ ನೀಡಿದ್ದರು.