ನವದೆಹಲಿ: ಹಲವು ಪ್ರಥಮಗಳಿಗೆ ಕನ್ನಡಿ ಹಿಡಿದ ಮುತ್ತುಲಕ್ಷ್ಮಿ ರೆಡ್ಡಿಯವರ 133 ನೇ ಜನ್ಮದಿನದ ವಾರ್ಷಿಕೋತ್ಸವಕ್ಕೆ ಈಗ ಗೂಗಲ್ ಡೂಡಲ್ ಮೂಲಕ ಗೌರವ ಸಲ್ಲಿಸಿದೆ.
ವೈದಕೀಯ, ಶಿಕ್ಷಣ, ಕಾನೂನು ಮತ್ತು ಸಾಮಾಜಿಕ ಸುಧಾರಣೆಯಲ್ಲಿ ಅಚ್ಚಳಿಯದ ಗುರುತನ್ನು ಮೂಡಿಸಿರುವ ಮುತ್ತು ಲಕ್ಷ್ಮಿಯವರು ಜುಲೈ 30, 1883 ರಂದು ತಮಿಳುನಾಡಿನಲ್ಲಿ ಜನಿಸಿದರು. ಪ್ರತಿಷ್ಠಿತ ಭಾರತೀಯ ಸಂಸ್ಥೆಗಳಿಗೆ ಪ್ರವೇಶ ಪಡೆದ ಮೊದಲ ಮಹಿಳಾ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಕರಾಗಿ ಕೆಲಸ ಮಾಡಿದ ಮೊದಲ ಮಹಿಳೆ ಮತ್ತು ಬ್ರಿಟಿಷ್ ಭಾರತದ ಇತಿಹಾಸದಲ್ಲಿ ಮೊದಲ ಮಹಿಳಾ ಶಾಸಕಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು.
ಗೂಗಲ್ ಡೂಡಲ್ ಮೂಲಕ ಗೌರವ ಸಲ್ಲಿಸಿದ ಹೇಳಿಕೆಯಲ್ಲಿ ' ಮುತ್ತುಲಕ್ಷ್ಮಿ ರೆಡ್ಡಿ ತಮ್ಮ ಬಾಲ್ಯವಿವಾಹವನ್ನು ವಿರೋಧಿಸಿದರು. ಅಲ್ಲದೆ ತಾನು ಶಿಕ್ಷಣಕ್ಕೆ ಅರ್ಹಳು ಎಂದು ಮನವರಿಕೆ ಮಾಡಿಕೊಟ್ಟರು. ಪರೀಕ್ಷೆಗಳಲ್ಲಿ ಉತ್ತೀರ್ಣಳಾದ ನಂತರ, ಅವರು ಬಾಲಕರ ಶಾಲೆಯಾದ ಮಹಾರಾಜ ಕಾಲೇಜಿನಲ್ಲಿ ಅಭ್ಯಾಸ ಮಾಡಿದರು. ವಿದ್ಯಾರ್ಥಿಗಳು ಆಕೆಯನ್ನು ಬಲವಂತವಾಗಿ ಹೊರಕ್ಕೆ ತಳ್ಳಲು ಪ್ರಯತ್ನಪಟ್ಟರು ಸಹಿತ ವಿದ್ಯಾರ್ಥಿ ವೇತನವನ್ನು ಗೆಲ್ಲುವಲ್ಲಿ ಯಶಸ್ವಿಯಾದರು. ಹಲವು ಗೌರವಗಳೊಂದಿಗೆ ಪದವಿ ಪಡೆದರು. ನಂತರ ಮದ್ರಾಸ್ ವೈದ್ಯಕೀಯ ಕಾಲೇಜಿನಲ್ಲಿ ಮೊದಲ ಮಹಿಳಾ ವಿದ್ಯಾರ್ಥಿನಿಯಾದರು ”ಎಂದು ಗೂಗಲ್ ಹೇಳಿದೆ.
ಇಂದಿನ ಡೂಡಲ್, ಭಾರತೀಯ ಶಿಕ್ಷಣತಜ್ಞೆ, ಶಾಸಕಿ, ಶಸ್ತ್ರಚಿಕಿತ್ಸಕಿ ಮತ್ತು ಸುಧಾರಕಿ ಮುತ್ತು ಲಕ್ಷ್ಮಿ ರೆಡ್ಡಿ ಅವರ ಜಯಂತಿಯನ್ನು ಆಚರಿಸುತ್ತದೆ. ತನ್ನ ಜೀವನದುದ್ದಕ್ಕೂ ನಿರಂತರವಾಗಿ ಅಡೆತಡೆಗಳನ್ನು ತಳ್ಳಿ ರೆಡ್ಡಿ ಸಾರ್ವಜನಿಕ ಆರೋಗ್ಯ ಮತ್ತು ಲಿಂಗ ಅಸಮಾನತೆಯ ವಿರುದ್ಧದ ಹೋರಾಟಕ್ಕಾಗಿ ತನ್ನನ್ನು ತಾನು ಅರ್ಪಿಸಿಕೊಂಡಿದ್ದರು, ಅಸಂಖ್ಯಾತ ಜನರ-ವಿಶೇಷವಾಗಿ ಮಹಿಳೆಯರ ಜೀವನವನ್ನು ಪರಿವರ್ತಿಸಿದರು ”ಎಂದು ಗೂಗಲ್ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಮುತ್ತುಲಕ್ಷ್ಮಿ ರೆಡ್ಡಿ ಕುರಿತು ಡೂಡಲ್ ರಚಿಸಿದ ಬೆಂಗಳೂರು ಮೂಲದ ಕಲಾವಿದೆ ಅರ್ಚನಾ ಶ್ರೀನಿವಾಸನ್ “ಗೂಗಲ್ ಡೂಡಲ್ ರಚಿಸಲು ಅವಕಾಶ ಸಿಕ್ಕಿದ್ದಕ್ಕೆ ನಾನು ಉತ್ಸುಕಳಾಗಿದ್ದೆ ! ನಾನು ಡಾ. ಮುತ್ತುಲಕ್ಷ್ಮಿಗೆ ಸಂಕ್ಷಿಪ್ತ ಮಾಹಿತಿ ಪಡೆದಾಗ ಮತ್ತು ಅವರ ಸಾಧನೆಗಳ ಸುದೀರ್ಘ ಪಟ್ಟಿಯನ್ನು ಓದಿದಾಗ, ನಾನು ಅವಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಉತ್ಸುಕಳಾಗಿದ್ದೆ. ಈ ಡೂಡಲ್ಗೆ ಮುಖ್ಯ ಸ್ಫೂರ್ತಿ ಎಂದರೆ ಡಾ.ಮುತ್ತು ಲಕ್ಷ್ಮಿ ಅವರ ಶಕ್ತಿ, ಧೃಡ ನಿಶ್ಚಯ ಮತ್ತು ಸ್ಪಷ್ಟತೆಯ ಅರಿವು ಈ ಡೂಡಲ್ ಅನ್ನು ರೂಪಿಸಲು ಸ್ಪೂರ್ತಿಯಾಯಿತು”ಎಂದು ಅವರು ಹೇಳಿದರು.