ಮೈಸೂರು: ನಾಡ ಅಧಿದೇವತೆ ಶ್ರೀ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ ಇಂದು ಚಾಮುಂಡೇಶ್ವರಿ ಬೆಟ್ಟದಲ್ಲಿ ಬಹಳ ವಿಜೃಂಭಣೆಯಿಂದ ಆರಂಭವಾಗಿದೆ.
ಮೂರನೇ ಆಷಾಢ ಶುಕ್ರವಾರ ಹಾಗೂ ವರ್ಧಂತಿ ಉತ್ಸವದ ಅಂಗವಾಗಿ ಚಾಮುಂಡಿ ಬೆಟ್ಟದಲ್ಲಿ ದೇವಸ್ಥಾನವನ್ನು ವಿವಿಧ ಹೂಗಳಿಂದ ಅಲಂಕರಿಸಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಚಿನ್ನದ ಪಲ್ಲಕ್ಕಿಯಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ಮೂರ್ತಿಯೊಂದಿಗೆ ಉತ್ಸವ ಆರಂಭವಾಗಿದ್ದು, ಸಾವಿರಾರು ಭಕ್ತಾದಿಗಳು ದೇವಿಯ ಚಿನ್ನದ ಪಲ್ಲಕ್ಕಿ ಉತ್ಸವಕ್ಕೆ ಸಾಕ್ಷಿಯಾಗಲು ಅಣಿಯಾಗಿದ್ದಾರೆ. ರಾತ್ರಿ 8.30ಕ್ಕೆ ಚಾಮುಂಡೇಶ್ವರಿಗೆ ಉತ್ಸವ ಫಲಪೂಜೆ, ದರ್ಬಾರ್ ಉತ್ಸವ, ಮಂಟಪೋತ್ಸವ ಹಾಗೂ ರಾಷ್ಟ್ರಾಶೀರ್ವಾದ ಜರುಗಲಿದೆ.
ವರ್ಧಂತಿ ಉತ್ಸವದ ಅಂಗವಾಗಿ ಚಾಮುಂಡಿ ಬೆಟ್ಟಕ್ಕೆ ಜನಸಾಗರವೇ ಹರಿದುಬರುತ್ತಿದ್ದು, ಭಕ್ತಾದಿಗಳಿಗೆ ವಿವಿಧ ಸಂಘ ಸಂಸ್ಥೆಗಳಿಂದ ಹಾಗೂ ದೇವಸ್ಥಾನದ ವತಿಯಿಂದ ಪ್ರಸಾದ ವಿನಿಯೋಗ ವ್ಯವಸ್ಥೆ ಮಾಡಲಾಗಿದೆ. ವಾಹನ ಸಂಚಾರವನ್ನು ನಿಯಂತ್ರಿಸಲು, ಖಾಸಗಿ ವಾಹನಗಳಿಗೆ ಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ಅಲ್ಲದೆ, ಬೆಟ್ಟಕ್ಕೆ ತೆರಳುವ ಭಕ್ತಾಧಿಗಳಿಗೆ ಲಲಿತಮಹಲ್ ಹೆಲಿಪ್ಯಾಡ್ ನಿಂದ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಟ್ಟದಲ್ಲಿ ಜನದಟ್ಟನೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.