ಶಿವಮೊಗ್ಗ: ಶಿವಮೊಗ್ಗದಲ್ಲಿ ಗಾಂಜಾ ಬೆಳೆದು ಮಾರಾಟ ಮಾಡುತ್ತಿದ್ದ ಯುವತಿ ಸೇರಿ ಐವರು ವೈದ್ಯಕೀಯ ವಿದ್ಯಾರ್ಥಿಗಳನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆಂದು ಸುದ್ದಿಸಂಸ್ಥೆ ANI ವರದಿ ಮಾಡಿದೆ. ಆರೋಪಿಗಳು ಕೊಠಡಿಯೊಂದರಲ್ಲಿ ಗಾಂಜಾ ಬೆಳೆಗೆ ಪೂರಕವಾಗಿ ಕೃತಕ ವಾತಾವರಣ ಸೃಷ್ಟಿಸಿ ಕುಂಡಗಳಲ್ಲಿ ಗಾಂಜಾ ಬೆಳೆದು ಮಾರಾಟ ಮಾಡುತ್ತಿದ್ದರಂತೆ.
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಜಕ್ಕಪ್ಪ ನಗರದ ವಿಘ್ನರಾಜ್(28), ಧರ್ಮಪುರಿ ಜಿಲ್ಲೆಯ ಕಡಗತ್ತೂರಿನ ಪಾಂಡಿದೊರೈ, ಕೇರಳದ ಇಡುಕ್ಕಿ ಜಿಲ್ಲೆಯ ಅಡಿಮಾಲಿ ಪಟ್ಟಣದ ವಿನೋದ್ ಕುಮಾರ್(27), ವಿಜಯಪುರದ ಕೀರ್ತಿನಗರದ ಅದ್ಬುಲ್ ಖಯ್ಯೂಂ(25) ಹಾಗೂ ವಿಜಯನಗರ ಜಿಲ್ಲೆಯ ಕೊಟ್ಟೂರಿನ ಅರ್ಪಿತಾ(24) ಬಂಧಿತರು. ಇವರೆಲ್ಲಾ ಶಿವಮೊಗ್ಗದ ಖಾಸಗಿ ವೈದ್ಯಕೀಯ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳಾಗಿದ್ದರೆಂದು ತಿಳುದುಬಂದಿದೆ.
ಇದನ್ನೂ ಓದಿ: ರಾಜ್ಯ ಸರ್ಕಾರ ಎಲ್ಲಾ ಸಮಸ್ಯೆಗಳನ್ನು ಎದುರಿಸುವಷ್ಟು ಶಕ್ತವಾಗಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಗಾಂಜಾ ಮಾರಾಟದ ಕುರಿತು ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಅಭಯ್ ಪ್ರಕಾಶ್ ಸೋಮನಾಳ ನೇತೃತ್ವದ ಪೊಲೀಸರ ತಂಡವು ಹಳೆಗುರುಪುರದ ಮನೆಯೊಂದರಲ್ಲಿ ವಾಸವಿದ್ದ ಅಬ್ದುಲ್ ಖಯ್ಯೂಂ ಹಾಗೂ ಅರ್ಪಿತಾರನ್ನು ಶುಕ್ರವಾರ ಬಂಧಿಸಿತ್ತು. ಇವರಿಂದ 20 ಸಾವಿರ ರೂ. ಮೌಲ್ಯದ 466 ಗ್ರಾಂ ಒಣ ಗಾಂಜಾ ವಶಪಡಿಸಿಕೊಂಡಿತ್ತು. ಇವರ ವಿಚಾರಣೆ ವೇಳೆ ದೊರೆತ ಸುಳಿವಿನ ಮೇರೆಗೆ ಉಳಿದ ಮೂವರನ್ನು ಶಿವಗಂಗಾ ಲೇಔಟ್ನ ಮನೆಯೊಂದರಲ್ಲಿ ಶನಿವಾರ ಬಂಧಿಸಲಾಗಿದೆ.
ಕೊಠಡಿಯಲ್ಲಿ ಹೈಟೆಕ್ ಆಗಿ ಗಾಂಜಾ ಬೆಳೆ
ಶಿವಗಂಗಾ ಲೇಔಟ್ನ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಆರೋಪಿ ವಿಘ್ನರಾಜ್ ಹೈಟೆಕ್ ಆಗಿ ಗಾಂಜಾ ಬೆಳೆಯುತ್ತಿದ್ದಂತೆ. ಇದಕ್ಕಾಗಿ ಆತ ಮನೆಯ 1 ಕೊಠಡಿಯನ್ನು ಗಾಂಜಾ ಬೆಳೆಸಲೆಂದೇ ಬಳಕೆ ಮಾಡಿಕೊಳ್ಳುತ್ತಿದ್ದ. ಆ ಕೊಠಡಿಯೊಳಗೆ ಟೆಂಟ್ ಹಾಕಿ ವಿಶೇಷ ಬಲ್ಬ್ಗಳನ್ನು ಬಳಸಿ ಕೃತಕ ಬೆಳಕು ಸೃಷ್ಟಿಸಿದ್ದ. ಅದರೊಳಗೆ ಹೂಕುಂಡಗಳನ್ನು ಇರಿಸಿ ಗಾಂಜಾ ಗಿಡಗಳನ್ನು ಬೆಳೆಯುತ್ತಿದ್ದನಂತೆ. ಆರೋಪಿಯು ಕಳೆದ ಮೂರೂವರೆ ತಿಂಗಳಿನಿಂದ ಈ ದಂಧೆಯಲ್ಲಿ ತೊಡಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿದೆ ಎಂದು ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ.
ಆರೋಪಿ ವಿಘ್ನರಾಜ್ ಗಾಂಜಾ ಬೆಳೆಯುವ ಬಗ್ಗೆ ಇಂಟರ್ನೆಟ್ನಲ್ಲಿ ಮಾಹಿತಿ ಪಡೆದಿದ್ದ. ಗಾಂಜಾ ಬೆಳೆಯಲು ಬೇಕಾದ ಬೀಜಗಳನ್ನು ಆನ್ಲೈನ್ ಮೂಲಕ ತರಿಸಿಕೊಂಡಿದ್ದ. ವಿನೋದ್ ಹಾಗೂ ಪಾಂಡಿದೊರೈ ಈತನಿಂದ ಗಾಂಜಾವನ್ನು ಖರೀದಿಸುತ್ತಿದ್ದರಂತೆ.
ಇದನ್ನೂ ಓದಿ: ಚಿರತೆ ಸೆರೆಗಾಗಿ ಬೋನಲ್ಲಿಟ್ಟಿದ್ದ ಮೇಕೆ ಕಳ್ಳರ ಪಾಲು..!
ಬಂಧಿತ ಆರೋಪಿಗಳಿಂದ 5,800 ರೂ. ಮೌಲ್ಯದ 227 ಗ್ರಾಂ ಒಣ ಗಾಂಜಾ, 30 ಸಾವಿರ ರೂ. ಮೌಲ್ಯದ 1.53 ಕೆಜಿ ಹಸಿ ಗಾಂಜಾ, 10 ಗ್ರಾಂ ಚರಸ್, ಗಾಂಜಾ ಬೀಜ, ಕೆನಾಬಿಸ್ ಎಣ್ಣೆ, ಗಾಂಜಾ ಪುಡಿ ಮಾಡಲು ಬಳಸುವ 2 ಡಬ್ಬಿಗಳು, ಎಲೆಕ್ಟ್ರಾನಿಕ್ ತೂಕದ ಯಂತ್ರ, ಫ್ಯಾನ್, 6 ಟೇಬಲ್, ಫ್ಯಾನ್, ರೋಲಿಂಗ್ ಪೇಪರ್, 2 ಸ್ಟೆಬಿಲೈಸರ್, ಎಲ್ಇಡಿ ದೀಪ, ಹುಕ್ಕಾ ಕೊಳವೆ ಹಾಗೂ 19 ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ NDPS ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದು, ಆರೋಪಿಗಳು ಓದುತ್ತಿದ್ದ ವೈದ್ಯಕೀಯ ಕಾಲೇಜು ಯಾವುದು ಅನ್ನೋ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.