ಬೆಂಗಳೂರು : ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನದ ಯುವತಿ ಇಕ್ರಾ ಜೀವನಿಯನ್ನು ಬೆಂಗಳೂರು ಪೊಲೀಸರು ಗಡಿಪಾರು ಮಾಡಿ ಪಾಕ್ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಕಳೆದ ತಿಂಗಳ 19ರಂದು ಉತ್ತರ ಪ್ರದೇಶದ ಮುಲಾಯಂ ಸಿಂಗ್ ಜೊತೆ ಬೆಂಗಳೂರಿಗೆ ಬಂದಿದ್ದ ಇಕ್ರಾಳನ್ನು ವಶಕ್ಕೆ ಪಡೆದು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯ ಸುಪರ್ದಿಗೆ ಒಪ್ಪಿಸಲಾಗಿತ್ತು. ಈಕೆ ಪಾಕ್ ಪ್ರಜೆ ಎಂಬುದು ಸಾಬೀತಾದ ಹಿನ್ನೆಲೆ ವಿದೇಶಾಂಗ ಇಲಾಖೆಯ ಸಹಾಯದೊಂದಿಗೆ ಬೆಳ್ಳಂದೂರು ಪೊಲೀಸರು ವಾಘಾ – ಅಠಾರಿ ಗಡಿಯಲ್ಲಿ ಭಾನುವಾರ ಪಾಕಿಸ್ತಾನ ರಾಜತಾಂತ್ರಿಕ ಅಧಿಕಾರಿಗಳಿಗೆ ಒಪ್ಪಿಸುವ ಮೂಲಕ ಗಡಿಪಾರು ಮಾಡಲಾಗಿದೆ. ಇನ್ನೂ ಗಡಿಪಾರು ಮಾಡುವ ಸಂದರ್ಭದಲ್ಲಿ ಇಕ್ರಾ ಹೈಡ್ರಾಮ ನಡೆಸಿ ನನ್ನನ್ನು ಪಾಕಿಸ್ತಾನಕ್ಕೆ ಕಳುಹಿಸಬೇಡಿ ಎಂದು ಪೊಲೀಸರ ಮುಂದೆ ಅಂಗಲಾಚಿದ್ದಾಳೆ. ನಂತರ ಪೊಲೀಸರು ಆಕೆಯ ಮನವೊಲಿಸಿ ಗಡಿಪಾರು ಮಾಡಿ ಬಂದಿದ್ದಾರೆ ಎನ್ನಲಾಗಿದೆ
ಪ್ರಕರಣದ ಹಿನ್ನೆಲೆ
ಮುಲಾಯಂ ಸಿಂಗ್ ಕಳೆದ ಏಳು ವರ್ಷಗಳಿಂದ ಬೆಂಗಳೂರಿನ ಬೇರೆ ಬೇರೆ ಕಂಪನಿಗಳಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿದ್ದ. ಈತನಿಗೆ ಆನ್ಲೈನ್ನಲ್ಲಿ ಲೂಡೋ ಆಡುವ ಅಭ್ಯಾಸವಿತ್ತು. ಹೀಗೆ ಆಟವಾಡುವಾಗ ಗೇಮ್ ಆ್ಯಪಲ್ಲಿ ಪಾಕ್ ಯುವತಿಯ ಪರಿಚಯವಾಗಿತ್ತು. ಇಬ್ಬರ ಪರಿಚಯ ಪ್ರೇಮಕ್ಕೆ ತಿರುಗಿ ಇಬ್ಬರು ಮದುವೆ ನಿರ್ಧಾರಕ್ಕೆ ಬಂದಿದ್ದರು. ಗೆಳತಿ ಪಾಕಿಸ್ತಾನದಲ್ಲಿದ್ದ ಕಾರಣ ನೇರವಾಗಿ ಭಾರತಕ್ಕೆ ಬರಲು ಸಾಧ್ಯವಿಲ್ಲ ಎಂಬುದನ್ನ ಅರಿತಿದ್ದ ಮುಲಾಯಂ ಸಿಂಗ್ ಕರಾಚಿಯಿಂದ ದುಬೈಗೆ, ದುಬೈಯಿಂದ ನೇಪಾಳದ ಕಠ್ಮಂಡುಗೆ ಇಕ್ರಾಳನ್ನು ಕರೆಸಿಕೊಂಡಿದ್ದ. ನೇಪಾಳದಲ್ಲಿ ಇಬ್ಬರು ಮದುವೆಯಾಗಿದ್ದು ಬಳಿಕ ಕಳೆದ ಸೆಪ್ಟೆಂಬರ್ನಲ್ಲಿ ಬಿಹಾರದ ಗಡಿ ಪ್ರವೇಶಿಸಿ ಪಾಟ್ನಾಗೆ ಬಂದಿದ್ದರು. ಬಳಿಕ ರೈಲಿನ ಮುಖಾಂತರ ಬೆಂಗಳೂರಿಗೆ ಬಂದು ಬೆಳ್ಳಂದೂರು ಠಾಣಾ ವ್ಯಾಪ್ತಿಯಲ್ಲಿ ನೆಲೆಸಿದ್ದರು.
ಇದನ್ನೂ ಓದಿ : Harohalli : ಹಾರೋಹಳ್ಳಿ ನೂತನ ತಾಲೂಕು ಕೇಂದ್ರವಾಗಿ ಇಂದು ಲೋಕಾರ್ಪಣೆ
ಇತ್ತ ಇಕ್ರಾ ಜೀವನಿ ಪಾಕಿಸ್ತಾನದಲ್ಲಿರುವ ತಾಯಿ ಜೊತೆ ಮಾತನಾಡಲು ಕರೆ ಮಾಡುತ್ತಿದ್ದಳು. ಈ ವಿಷಯ ತಿಳಿದ ಕೇಂದ್ರ ಗುಪ್ತಚರ ಇಲಾಖೆ ರಾಜ್ಯ ಪೊಲೀಸರಿಗೆ ಮಾಹಿತಿ ನೀಡಿತ್ತು. ಕರೆ ಆಧಾರದಲ್ಲಿ ಪೊಲೀಸರು ಮುಲಾಯಂನನ್ನು ಬಂಧಿಸಿ ಇಕ್ರಾಳನ್ನು ಎಫ್ಆರ್ಆರ್ಒ ಸುಪರ್ದಿಗೆ ಒಪ್ಪಿಸಿದ್ದರು. ಇಕ್ರಾ ಜೀವನಿ ಮೇಲೆ ಯಾವುದೇ ದೂರು ದಾಖಲಿಸಿರಲಿಲ್ಲ. ಇಕ್ರಾಳನ್ನು ಅಕ್ರಮವಾಗಿ ಗಡಿದಾಟಿಸಿ ತಂದ ತಪ್ಪಿಗೆ ಮುಲಾಯಂ ಸಿಂಗ್ ಮೇಲೆ ವಿದೇಶಿ ಕಾಯ್ದೆಯ ಅಡಿಯಲ್ಲಿ ದೇಶದ ಭದ್ರತೆಗೆ ಅಪಾಯ ತಂದ ಆರೋಪದಡಿ ಜೈಲಿಗೆ ಕಳುಹಿಸಲಾಗಿದೆ.
ತನಿಖೆಯ ವೇಳೆ ಈಕೆ ರವಾ ಯಾದವ್ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ ಪಡೆದ ವಿಚಾರ ಸಹ ಬೆಳಕಿಗೆ ಬಂದಿತ್ತು. ಅಷ್ಟೇ ಅಲ್ಲದೇ ಆ ಹೆಸರಿನಲ್ಲೇ ಪಾಸ್ಪೋರ್ಟ್ ಪಡೆಯಲು ಅರ್ಜಿ ಸಲ್ಲಿಸಿದ್ದ ವಿಷಯ ಸಹ ಬಯಲಾಗಿತ್ತು.
ಇದನ್ನೂ ಓದಿ : ಶಿಸ್ತು ಕಾಪಾಡಿಕೊಳ್ಳುತ್ತೇವೆ ಎಂದ ರೋಹಿಣಿ, ರೂಪಾ..! ನಿಲ್ಲುತ್ತಾ ಐಎಎಸ್ ಐಪಿಎಸ್ ವಾರ್..?
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.