CM Siddaramaiah: 2014ರಲ್ಲಿ ಕೋಟಿಗಳ ಲೆಕ್ಕದಲ್ಲಿ ಉದ್ಯೋಗ ನೀಡುವ ಭರವಸೆ ನೀಡಿ ಹತ್ತು ವರ್ಷಗಳ ನಂತರ ಲಕ್ಷಗಳ ಲೆಕ್ಕದಲ್ಲಿ ಉದ್ಯೋಗ ನೀಡಿದ್ದನ್ನು ಸಾಧನೆ ಎಂದು ಬಿಂಬಿಸುತ್ತಿರುವುದು ತಮಾಷೆಯಾಗಿ ಕಾಣುತ್ತಿಲ್ಲವೇ? ಎಲ್ಲಿಯ 20 ಕೋಟಿ ಉದ್ಯೋಗಗಳು? ಎಲ್ಲಿಯ ರೋಜಗಾರ್ ಮೇಳದ ಲಕ್ಷಗಳ ಲೆಕ್ಕದ ಉದ್ಯೋಗಗಳು? ನಿಜ ಹೇಳಿ ಪ್ರಧಾನಮಂತ್ರಿಗಳೇ ನೀವು ಸೃಷ್ಟಿಸಿರುವ ಉದ್ಯೋಗಗಳ ಸಂಖ್ಯೆ ಎಷ್ಟು? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಮಾಧ್ಯಮ ಪ್ರಕಟಣೆಯ ಮೂಲಕ ಕೇಂದ್ರ ಸರ್ಕಾರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ತರಾಟೆಗೆ ತೆಗೆದುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ನರೇಂದ್ರ ಮೋದಿಯವರೇ, ನಿಮ್ಮದೇ ಸಚಿವ ಸಂಪುಟದ ಜಿತೇಂದರ್ ಸಿಂಗ್ ಅವರು 2022ರ ಜುಲೈ ನಲ್ಲಿ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ , "2014-15 ಮತ್ತು 2021 -22ರ ಅವಧಿಯ ನಡುವೆ ಕೇವಲ 7 ಲಕ್ಷ ಹೊಸ ಉದ್ಯೋಗಗಳು ಮಾತ್ರ ಸೃಷ್ಟಿಯಾಗಿತ್ತು ಎಂದು ಹೇಳಿದ್ದರು. ಅಂತಿಮ ಸತ್ಯ ಇದೇ ಇರಬಹುದಾ?" ಎಂದಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ 400 ಸ್ಥಾನಗಳನ್ನು ಗೆಲ್ಲುವ ಆತ್ಮವಿಶ್ವಾಸ ವ್ಯಕ್ತಪಡಿಸುವ ಪ್ರಧಾನಿ ನರೇಂದ್ರ ಮೋದಿಯವರು ಈಗ ತರಾತುರಿಯಿಂದ ಉದ್ಯೋಗ ಮೇಳಗಳನ್ನು ಆಯೋಜಿಸಲು ಕಾರಣ ಯುವಜನರ ಮೇಲಿನ ಕಾಳಜಿಯೇ? ಇಲ್ಲವೇ ಉದ್ಯೋಗ ಇಲ್ಲದೆ ರೊಚ್ಚಿಗೆದ್ದಿರುವ ನಿರುದ್ಯೋಗಿ ಯುವಜನರ ಆಕ್ರೋಶವೇ? ಎಂದು ಸಿಎಂ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸಿದ್ದಾರೆ.
ಪ್ರಧಾನಿಯವರೇ, ಈಗ ನಿಮ್ಮದೇ ಸರ್ಕಾರದ ಅಧಿಕೃತ ಅಂಕಿಅಂಶಗಳನ್ನು ಮುಂದಿಟ್ಟುಕೊಂಡು ಮಾತಾಡೋಣ. 2017-18ರ ಎನ್.ಎಸ್.ಎಸ್.ಒ ವರದಿಯ ಪ್ರಕಾರ ಕಳೆದ 45 ವರ್ಷಗಳಲ್ಲೇ ದೇಶದ ನಿರುದ್ಯೋಗ ಪ್ರಮಾಣ ಅತಿ ಗರಿಷ್ಠ ಮಟ್ಟಕ್ಕೆ, ಅಂದರೆ 6.1 ಗೆ ತಲುಪಿದೆ. 2011-12ರಲ್ಲಿ ಈ ಪ್ರಮಾಣ ಶೇ 2.2 ಆಗಿತ್ತು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ- ದೆಹಲಿಯಲ್ಲಿ ಪ್ರತಿಭಟನೆಗಾಗಿ ತೆರಳುತ್ತಿದ್ದ ರೈತರನ್ನು ಬಂಧಿಸಿರುವ ಮಧ್ಯಪ್ರದೇಶ ಸರ್ಕಾರದ ಕ್ರಮ ಖಂಡನೀಯ: ಸಿಎಂ ಸಿದ್ದರಾಮಯ್ಯ
ನೆನಪಿರಲಿ, ಕೋವಿಡ್ ಕಾಲದಲ್ಲಿ ನಿರುದ್ಯೋಗದ ಪ್ರಮಾಣ ಜಗತ್ತಿನಾದ್ಯಂತ ಹೆಚ್ಚಾಗಿದ್ದು ನಿಜ. ಆದರೆ ನಮ್ಮಲ್ಲಿ ಇದು 2014-15ರಿಂದಲೇ ಇದು ಪ್ರಾರಂಭವಾಗಿತ್ತು. 2016ರಲ್ಲಿ ನಡೆದ ನೋಟು ಅಮಾನ್ಯೀಕರಣದಿಂದ ಕೈಗಾರಿಕೆಗಳೆಲ್ಲ ಮುಚ್ಚಿಹೋಗಿ ನಿರುದ್ಯೋಗ ಪ್ರಮಾಣ ಮಿತಿ ಮೀರತೊಡಗಿದ್ದನ್ನು ಹಲವಾರು ಆರ್ಥಿಕ ತಜ್ಞರೇ ವಿವರಿಸಿ ಹೇಳಿದ್ದಾರೆ. ಈ ಕಾರಣಕ್ಕಾಗಿಯೇ, 2017-18ರ ಎನ್.ಎಸ್.ಎಸ್.ಒ ಸರ್ವೇಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಲು ವಿಳಂಬ ಮಾಡಿತ್ತೇ? ಎಂದು ಆರೋಪಿಸಿದ್ದಾರೆ.
ವಿಶ್ವಬ್ಯಾಂಕ್ 2022ರಲ್ಲಿ ನೀಡಿದ್ದ ವರದಿ ಪ್ರಕಾರ ನಿರುದ್ಯೋಗದ ಪ್ರಮಾಣ ಪಾಕಿಸ್ತಾನದಲ್ಲಿ ರ ಶೇ.11.3ರಷ್ಟಿದ್ದರೆ, ಬಾಂಗ್ಲಾದೇಶದಲ್ಲಿ 12.9 ರಷ್ಟಿತ್ತು. ಭೂತಾನ್ ನಲ್ಲಿ ಶೇ. 14.4 ರಷ್ಟಿದ್ದರೆ, ಚೀನಾದಲ್ಲಿ 13.2 ರಷ್ಟಿತ್ತು. ಆದರೆ, ಅದೇ ಅವಧಿಯಲ್ಲಿ ನಮ್ಮ ಭಾರತದಲ್ಲಿ ನಿರುದ್ಯೋಗ ದರ ಶೇ 23.22 ರಷ್ಟಿತ್ತು. ಇತ್ತೀಚೆಗೆ ಅಂತಾರಾಷ್ಟ್ರೀಯ ಲೇಬರ್ ಆರ್ಗನೈಸೆಷನ್ ಬಿಡುಗಡೆ ಮಾಡಿರುವ ಪಟ್ಟಿ ಪ್ರಕಾರ ನಿರುದ್ಯೋಗದ ಪ್ರಮಾಣದಲ್ಲಿ ನಮ್ಮ ದೇಶ, ನೆರೆಯ ದೇಶಗಳಾದ ಮ್ಯಾನ್ಮರ್, ಬಾಂಗ್ಲಾ, ಮಾರಿಷಸ್ ಗಿಂತಲೂ ಕೆಳಗಿನ ಸ್ಥಾನದಲ್ಲಿರುವುದು ನಿಜವಲ್ಲವೇ? ಎಂದು ಸಿಎಂ ಪ್ರಶ್ನಿಸಿದ್ದಾರೆ.
ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕನಾಮಿ ವರದಿ ಪ್ರಕಾರ ದೇಶದ ನಿರುದ್ಯೋಗ ಪ್ರಮಾಣ 2014ರಲ್ಲಿ 5.44% ಇದ್ದದ್ದು 2023ರ ಅಕ್ಟೋಬರ್ನಲ್ಲಿ 10.05% ತಲುಪಿದೆ. ಇನ್ನು ವಯಸ್ಸಿನ ಆಧಾರದಲ್ಲಿ ನೋಡೋದಾದ್ರೆ 20 ರಿಂದ 24ರ ವಯೋಮಾನ - 43.65% ನಿರುದ್ಯೋಗಿಗಳಿದ್ದರೆ; 25 ರಿಂದ 29 ವಯೋಮಾನದವರಲ್ಲಿ -14.33%; 30 ರಿಂದ 34 ವಯೋಮಾನದವರಲ್ಲಿ -2.49% ನಿರುದ್ಯೋಗಿಗಳಿದ್ದಾರೆ. ಕೇಂದ್ರ ಸಕರ್ಕಾರವೇ ಪ್ರತಿ ಮೂರು ತಿಂಗಳಿಗೊಮ್ಮೆ ಪೀರಿಯಾಡಿಕ್ ಲೇಬರ್ ಫೋರ್ಸ್ ಸರ್ವೇ (ಪಿಎಲ್ಎಫ್ ಎಸ್) ಪ್ರಕಾರ 2019 ರಿಂದ 2022ರವರೆಗಿನ ಅವಧಿಯಲ್ಲಿ ದೇಶದ ನಿರುದ್ಯೋಗ ಪ್ರಮಾಣ 22.9% ಏರಿಕೆಯಾಗಿದೆ. ಏರಿಕೆಯಾಗಿರುವುದು ಉದ್ಯೋಗಗಳ ಸಂಖ್ಯೆ ಅಲ್ಲ, ಸುಳ್ಳುಗಳ ಸಂಖ್ಯೆ ಅಷ್ಟೆ ಅಲ್ಲವೇ?
2004-2012ರ ಅವಧಿಯಲ್ಲಿ, ಅಂದರೆ ಯುಪಿಎ ಅವಧಿಯಲ್ಲಿ ಪ್ರತಿವರ್ಷ 75 ಲಕ್ಷ ಉದ್ಯೋಗಗಳು ಸೃಷ್ಟಿಯಾಗುತ್ತಿದ್ದವು. ಆದರೆ ಈ ಪ್ರಮಾಣ 2013ರ ನಂತರದಲ್ಲಿ 29 ಲಕ್ಷಕ್ಕೆ ಇಳಿದಿದೆ. ನಿರುದ್ಯೋಗದ ತೀವ್ರತೆ ನಮ್ಮ ದೇಶದಲ್ಲಿ ಎಷ್ಟರಮಟ್ಟಿಗೆ ಇದೆಯೆಂದರೆ, ಎನ್.ಸಿ.ಆರ್.ಬಿ ಪ್ರಕಾರ ಪ್ರತಿ ಗಂಟೆಗೆ ಇಬ್ಬರು ನಿರುದ್ಯೋಗಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ! ಕರ್ನಾಟಕವೊಂದರಲ್ಲೇ 2021ರಲ್ಲಿ 1,129 ನಿರುದ್ಯೋಗಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಇವರಿಗೆಲ್ಲಿಯ ರೋಜಗಾರ್ ಮೇಳ? ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ- ಬರಪೀಡಿತ ರೈತರಿಗೆ ಕೊಡಲು ಹಣವಿಲ್ಲ, ಸಂಪುಟ ದರ್ಜೆ ಭಾಗ್ಯಕ್ಕೆ ಹಣವಿದೆ: ಸಿಎಂಗೆ ಕುಟುಕಿದ ಕುಮಾರಸ್ವಾಮಿ
ಉದ್ಯೋಗ ಅರಸಿ, ದೇಶದಿಂದ ವಿದೇಶಕ್ಕೆ ವಲಸೆ ಹೋಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಫ್ರಾನ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದ ಈ ವಿಮಾನದಲ್ಲಿ 66 ಮಂದಿ ಗುಜರಾತಿಗಳಿದ್ದರು. ತಮ್ಮನ್ನು ಗುಜರಾತಿನಿಂದ ಅಮೆರಿಕಾಗೆ ಅಕ್ರಮವಾಗಿ ಕರೆದೊಯ್ಯಲು ಏಜೆಂಟ್ ಗಳಿಗೆ ತಲಾ 60 - 80 ಲಕ್ಷ ರೂಪಾಯಿಗಳನ್ನು ನೀಡಿದ್ದರು ಎಂಬ ಅಂಶ ವಿಚಾರಣೆಯಲ್ಲಿ ಬಹಿರಂಗವಾಗಿತ್ತು. 2018 ರಿಂದ 2019ರ ವರೆಗೆ 8,027 ಮಂದಿ, 2019 ರಿಂದ 2020ರ ವರೆಗೆ 19,883 ಮಂದಿ, 2020 ರಿಂದ 2021ರ ವರೆಗೆ 30,662 ಮಂದಿ, 2021 ರಿಂದ 2022ರ ವರೆಗೆ 63,927 ಮಂದಿ ಭಾರತೀಯರು ಅಕ್ರಮವಾಗಿ ಅಮೆರಿಕ ಪ್ರವೇಶಿಸಲು ಯತ್ನಿಸಿ ಬಂಧನಕ್ಕೊಳಗಾಗಿದ್ದಾರೆ. ಈ ಅಕ್ರಮ ವಲಸಿಗರ ಪೈಕಿ ಬಹುಪಾಲು ಜನರು ಗುಜರಾತ್ ಮತ್ತು ಪಂಜಾಬ್ ರಾಜ್ಯಗಳಿಗೆ ಸೇರಿದವರು ಎಂಬುದು ಗಮನಿಸಬೇಕಾದ ಅಂಶ ಅಲ್ಲವೇ?
ಇದು ಹೊಸ ಉದ್ಯೋಗಗಳ ಸೃಷ್ಟಿಯ ಕಥೆಯಾದರೆ, ಇರುವ ಸರ್ಕಾರಿ ಉದ್ಯೋಗಗಳ ಭರ್ತಿಯಲ್ಲೂ ತೀರಾ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ವಿವಿಧ ಇಲಾಖೆಯ 9.79 ಲಕ್ಷ ಹುದ್ದೆಗಳು ಖಾಲಿ ಇವೆ. ಸಣ್ಣಪುಟ್ಟ ಹುದ್ದೆಗಳಿಗೂ ಸ್ನಾತಕೋತ್ತರ ಪದವೀಧರ, ಬಿಇ, ಎಂಬಿಬಿಎಸ್ ಪದವಿ ಪಡೆದವರು ಅರ್ಜಿ ಸಲ್ಲಿಸುವ ವಿದ್ಯಮಾನ ಇತ್ತೀಚೆಗೆ ಸಾಮಾನ್ಯವಾಗುತ್ತಿದೆ. ದೇಶದ ಯುವಜನರು ನಿರುದ್ಯೋಗದ ದಳ್ಳುರಿಯಲ್ಲಿ ಬೇಯ್ತಾ ಇದ್ದಾರೆ. ಕಳೆದ ವರ್ಷಾಂತ್ಯದಲ್ಲಿ ಸಂಸತ್ತಿನ ಭದ್ರತೆಯನ್ನು ಬೇಧಿಸಿ, ಒಳನುಸುಳಿ ಹೊಗೆಬಾಂಬ್ ಸಿಡಿಸುವ ಮಟ್ಟಿಗೆ ಹತಾಶರಾಗಿದ್ದ ಯುವಕರು ಕೂಡಾ ನಿರುದ್ಯೋಗಕ್ಕೆ ಬಲಿಯಾದವರಲ್ಲವೇ? ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಮಾಧ್ಯಮ ಪ್ರಕಟಣೆಯ ಮೂಲಕ ವಸ್ತು ಸ್ಥಿತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಉದ್ಯೋಗ ಭರ್ತಿಗಾಗಿ ಸರ್ಕಾರಗಳು ನಿರ್ದಿಷ್ಟ ನೇಮಕಾತಿ ಪ್ರಕ್ರಿಯೆ ನಡೆಸುತ್ತವೆ. ಇದಕ್ಕಾಗಿಯೇ ಯುಪಿಎಸ್ಸಿ, ಎಸ್ಎಸ್ಸಿ, ಲೋಕಸೇವಾ ಆಯೋಗಗಳಗಳಿವೆ. ಹೀಗಿರುವಾಗ ಸಾಕ್ಷಾತ್ ಪ್ರಧಾನಿಯವರೇ ವೀಡಿಯೋ ಕಾನ್ಫರೆನ್ಸ್ ಮೂಲಕ ನೇಮಕಾತಿ ಪತ್ರಗಳ ವಿತರಿಸುತ್ತಿರುವುದು ಯಾವ ಉದ್ಯೋಗಗಳಿಗೆ? ರೋಜ್ ಗಾರ್ ಮೇಳದಲ್ಲಿ ನೀಡಲಾಗುತ್ತಿರುವ ಉದ್ಯೋಗಗಳು ಯಾವುದು? ಇವುಗಳು ಖಾಯಂ ಉದ್ಯೋಗವೇ?ತಾತ್ಕಾಲಿಕವೇ? ಅರೆಕಾಲಿಕವೇ? ಪೂರ್ಣಕಾಲಿಕವೇ? ಈ ಉದ್ಯೋಗಗಳನ್ನು ನೀಡುವಾಗ ಮೀಸಲಾತಿಯನ್ನು ಅನುಸರಿಸಲಾಗಿದೆಯೇ? ಅರ್ಹತೆಗಷ್ಟೇ ಪ್ರಾಮುಖ್ಯ ನೀಡಲಾಗಿದೆಯೇ? ರಾಜಕೀಯ ಒಲವು -ನಿಲುವುಗಳನ್ನು ಪರಿಗಣಿಸಲಾಗಿತ್ತೇ? ಪ್ರಧಾನ ಮಂತ್ರಿಗಳೇ ಈ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ ಎಂದವರು ಆಗ್ರಹಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.