ಮಂಡ್ಯ : ಬಡ ಜನರ ಸೇವೆಗಾಗಿ ಅತಿ ಕಡಿಮೆ ಶುಲ್ಕ ತೆಗೆದುಕೊಂಡು ಐದು ರೂಪಾಯಿ ವೈದ್ಯ ಎಂದೇ ಹೆಸರಾಗಿರುವ ಡಾ.ಶಂಕರೇಗೌಡ ಅವರು ಮಂಡ್ಯ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸುವ ವೇಳೆ ಠೇವಣಿ ಐದು ರೂ.ಗಳನ್ನೇ ಬಳಸಿದ್ದು ವಿಶೇಷವಾಗಿತ್ತು.
ಮಂಡ್ಯ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಡಾ.ಶಂಕರೇಗೌಡ ಅವರು, 2010ರಲ್ಲಿ ನಡೆದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ವರಿಷ್ಠರು ಹಾಗೂ ಜನರ ಒತ್ತಾಯದ ಮೇರೆಗೆ ದುದ್ದ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಅಲ್ಲದೆ, ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ತಮಗೆ ಜೆಡಿಎಸ್ ಬಿ ಫಾರಂ ನೀಡುವಂತೆ ಶಂಕರೇಗೌಡರು ಜೆಡಿಎಸ್ ವರಿಷ್ಠರನ್ನು ಮನವಿ ಮಾಡಿದ್ದರು. ಈ ಮಧ್ಯೆ ಬಿಜೆಪಿ ಸೇರುತ್ತಾರೆಂಬ ಸುದ್ದಿಯೂ ಎಲ್ಲೆಡೆ ಹಬ್ಬಿತ್ತು. ಆದರೆ, ಇದೀಗ ಡಾ.ಶಂಕರೇಗೌಡ ಅವರು ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ.
"ನನಗೆ ಜಿಲ್ಲೆಯ ಮೂಲ ಸಮಸ್ಯೆಗಳ ಬಗ್ಗೆ ಸಾಕಷ್ಟು ಅರಿವಿದೆ. ಆ ಸಮಸ್ಯೆಗಳನ್ನು ಪರಿಹರಿಸುವುದರ ಜೊತೆಗೆ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸ ಮಾಡಬೇಕಿದೆ. ಜನರು ನೀಡಿದ ಬೆಂಬಲವೇ ನನಗೆ ಚುನಾವಣೆಗೆ ಸ್ಪರ್ಧಿಸಲು ಸ್ಫೂರ್ತಿ" ಎಂದು ನಾಮಪತ್ರ ಸಲ್ಲಿಸಿದ ಬಳಿಕ ಡಾ.ಶಂಕರೇಗೌಡ ಅವರು ಹೇಳಿದ್ದಾರೆ.