ಜಾರ್ಜಿಯಾ: ಅಮೆರಿಕಾದ ಜಾರ್ಜಿಯಾ ಪಟ್ಟಣದಲ್ಲಿ ವಿಚಿತ್ರ ಘಟನೆಯೊಂದು ಸಂಭವಿಸಿದೆ. ಹೌದು, ಇಲ್ಲಿನ ಕೇಟಿ ಮ್ಯಾಕ್ ಬ್ರೈಡ್ ನ್ಯೂಮ್ಯಾನ್ ಅವರ ಕುಟುಂಬ ಕ್ರಿಸ್ಮಸ್ ಆಚರಣೆಗಾಗಿ ತಮ್ಮ ಮನೆಗೆ ಸುಮಾರು 13 ಅಡಿ ಉದ್ದದ ಕ್ರಿಸ್ಮಸ್ಟ್ ಟ್ರೀಯನ್ನು ತಂದಿದ್ದಾರೆ. ಹೋಂ ಡಿಪೋನಿಂದ ತಂದ ಈ ಕ್ರಿಸ್ಮನ್ ಮರವನ್ನು ಅವರು ತಮ್ಮ ಮಗಳ ಜೊತೆ ಸೇರಿ ಕೀಬಂಚ್, ಗಂಟೆ, ಗೊಂಬೆಗಳ ಸಹಾಯದಿಂದ ಶೃಂಗಾರ ಕೂಡ ಮಾಡಿದ್ದಾರೆ. ಈ ಚಿಕ್ಕ ಬೊಂಬೆಗಳಲ್ಲಿ ಅವರು ಗೂಬೆಯ ಬೊಂಬೆಯನ್ನೂ ಸಹ ಇರಿಸಿದ್ದಾರೆ.
ಆದರೆ ಡಿಸೆಂಬರ್ 12ರಂದು ಮನೆಯಲ್ಲಿ ತಂದಿಟ್ಟ ಈ ಮರದಿಂದ ವಿಚಿತ್ರ ಶಬ್ದವೊಂದು ಬರಲಾರಂಭಿಸಿದ್ದು, ಈ ಶಬ್ದ ಕೇಳಿ ತಾಯಿ ಮತ್ತು ಮಗಳು ಬೆಚ್ಚಿಬಿದ್ದಿದ್ದಾರೆ. ಬಳಿಕ ಮರವನ್ನು ಅವರು ಕೂಲಂಕುಷವಾಗಿ ಪರೀಕ್ಷಿಸಿದ್ದು, ಅದರಲ್ಲಿ ಗೂಬೆಯೊಂದು ಗೂಡುಕಟ್ಟಿ ಕುಳಿತಿರುವುದು ಅವರ ಗಮನಕ್ಕೆ ಬಂದಿದೆ.
ಹೋಂ ಡಿಪೋನಿಂದ ತಮ್ಮ ಅಟ್ಲಾಂಟನಲ್ಲಿರುವ ಮನೆಗೆ ಈ ಟ್ರೀಯನ್ನು ತಂದಿಟ್ಟ ತಾಯಿ ಮಗಳು, ಬಳಿಕ ಆ ಮರವನ್ನು ಗೂಬೆಗೆ ಹಾರಿಹೊಗಲು ಸಹಾಯ ಮಾಡುವ ಉದ್ದೇಶದಿಂದ ಕಿಟಕಿ ಹಾಗೂ ಮನೆ ದ್ವಾರಗಳ ಬಳಿ ಸ್ಥಳಾಂತರಿಸಿದ್ದಾರೆ. ಅಷ್ಟಾಗ್ಯೂ ಕೂಡ ಗೂಬೆ ಮರದಲ್ಲಿಯೇ ಕುಳಿತುಕೊಂಡಿದೆ.
ಗೂಬೆ ನೋಡಲು ತುಂಬಾ ಸುಂದರವಾಗಿದ್ದ ಕಾರಣ ಹಾಗೂ ಕುಟುಂಬದ ಎಲ್ಲ ಸದಸ್ಯರೂ ಪ್ರಾಣಿ ಮತ್ತು ಪಕ್ಷಿ ಪ್ರೀಯರಾದ ಕಾರಣ ಅವರು ಅದನ್ನು ಹಾಗೆಯೇ ಬಿಟ್ಟಿದ್ದಾರೆ. ಗೂಬೆ ಕೂಡ ಮರದಲ್ಲಿ ಹಾಯಾಗಿ ಕಾಲ ಕಳೆಯಲು ಪ್ರಾರಂಭಿಸಿದೆ. ಇದನ್ನು ಗಮನಿಸಿದ ಕೇಟಿ ಪತಿ ಬಿಲ್ಲಿ ನ್ಯೂಮ್ಯಾನ್, ಗೂಬೆಗೆ ಬೇಕಾಗುವ ಆಹಾರ ನಮ್ಮ ಮನೆಯಲ್ಲಿ ಇಲ್ಲ ಎಂದು ಸಮಜಾಯಿಸಿ ನೀಡಿದ್ದಾರೆ. ಬಿಲ್ಲಿ ಮಾತನ್ನು ಗಂಭೀರವಾಗಿ ಪರಿಗಣಿಸಿದ ಕುಟುಂಬ ಸದಸ್ಯರು ನಾನ್-ಪ್ರಾಫಿಟ್ ನೇಚರ್ ಸೆಂಟರ್ ಸಹಾಯ ಪಡೆದುಕೊಂದಿದ್ದಾರೆ. ಮಾಹಿತಿ ಪಡೆದ ದಿ ಚತ್ತಾಹೂಚೀ ನೇಚರ್ ಸೆಂಟರ್ ಸದಸ್ಯರು ಅವರ ನಿವಾಸಕ್ಕೆ ಭೇಟಿ ನೀಡಿ ಗೂಬೆಯನ್ನು ಬಿಡುಗಡೆಗೊಳಿಸುವಲ್ಲಿ ಸಹಾಯ ಮಾಡಿದ್ದಾರೆ.