ಹೊಸ ನಾಟಕ; ಸಾರ್ಕ್ ಸಭೆಯಲ್ಲಿ ಜೈಶಂಕರ್ ಭಾಷಣ ಬಹಿಷ್ಕರಿಸಿದ ಪಾಕ್

ಭಾರತದ ಸಚಿವರ ಭಾಷಣ ಮುಗಿಯುತ್ತಿದ್ದಂತೆ ಮತ್ತೆ ಸಭೆಗೆ ಪಾಕಿಸ್ತಾನ ಸಚಿವರು.

Last Updated : Sep 27, 2019, 08:23 AM IST
ಹೊಸ ನಾಟಕ; ಸಾರ್ಕ್ ಸಭೆಯಲ್ಲಿ ಜೈಶಂಕರ್ ಭಾಷಣ ಬಹಿಷ್ಕರಿಸಿದ ಪಾಕ್ title=

ನ್ಯೂಯಾರ್ಕ್: ಯುಎನ್ ಸಾಮಾನ್ಯ ಸಭೆಯ ಹೊರಗೆ ದಕ್ಷಿಣ ಏಷ್ಯಾದ ಪ್ರಾದೇಶಿಕ ಸಹಕಾರ ಸಂಘದ (SAARC) ವಿದೇಶಾಂಗ ಮಂತ್ರಿಗಳ ಸಭೆಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್.ಕೆ. ಜೈಶಂಕರ್ ಅವರ ಭಾಷಣದ ವೇಳೆ ಪಾಕಿಸ್ತಾನ ಸಭೆಯನ್ನು ಬಹಿಷ್ಕರಿಸಿತು. ಜೈಶಂಕರ್ ಗುರುವಾರ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದಾಗ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಅದರಿಂದ ದೂರ ಉಳಿದರು. ಭಾರತ ಸಚಿವರು ಭಾಷಣ ಮುಗಿಸಿದ ಕೂಡಲೇ ಪಾಕಿಸ್ತಾನ ಸಚಿವರು ಮತ್ತೆ ಸಭೆಗೆ ಹಾಜರಾದರು.

ಸಾರ್ಕ್ ಮತ್ತು ದಕ್ಷಿಣ ಏಷ್ಯಾದ ಏಕತೆಗೆ ಭಾರತ ಅಡ್ಡಿಯಾಗಿದೆ ಎಂದು ನಿರಂತರವಾಗಿ ಆರೋಪಿಸುತ್ತಿರುವ ಸಮಯದಲ್ಲಿ ಪಾಕಿಸ್ತಾನ ಈ ರೀತಿ ನಡೆದುಕೊಂಡಿದೆ.

ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಬೇಕಾಗಿದೆ:
ಭಯೋತ್ಪಾದನೆಯನ್ನು ಎಲ್ಲಾ ರೀತಿಯಲ್ಲೂ ನಿರ್ಮೂಲನೆ ಮಾಡುವುದು ದಕ್ಷಿಣ ಏಷ್ಯಾದ ನೆರೆಹೊರೆಯವರ ನಡುವಿನ ಅರ್ಥಪೂರ್ಣ ಸಹಕಾರಕ್ಕೆ ಮಾತ್ರವಲ್ಲದೆ ಈ ಪ್ರದೇಶದ ಉಳಿವಿಗೂ ಪೂರ್ವಭಾವಿ ಎಂದು ಭಾರತೀಯ ವಿದೇಶಾಂಗ ಸಚಿವರು ಸಭೆಯಲ್ಲಿ ಹೇಳಿದರು. "ಸಾರ್ಕ್ ನಿಜವಾಗಿಯೂ ತಪ್ಪಿದ ಅವಕಾಶವಲ್ಲ, ಆದರೆ ಉದ್ದೇಶಪೂರ್ವಕವಾಗಿ ಅಡೆತಡೆಗಳಲ್ಲಿ ಸಿಲುಕುವ ಕಥೆಯಾಗಿದೆ. ಭಯೋತ್ಪಾದನೆ ಅವುಗಳಲ್ಲಿ ಒಂದು" ಎಂದು ಅವರು ಹೇಳಿದರು.

ದಕ್ಷಿಣ ಏಷ್ಯಾದ ಉಪಗ್ರಹವನ್ನು ಉಲ್ಲೇಖಿಸಿ, ಭಾರತವು ನೆರೆಹೊರೆಯನ್ನು ಶ್ರೀಮಂತಗೊಳಿಸುವ ಒಂದು ಉಪಕ್ರಮವನ್ನು ಹೇಗೆ ನಿರ್ವಹಿಸುತ್ತಿದೆ ಎಂದು ವಿವರಿಸಿದರು. ಸಾರ್ಕ್ ಪ್ರದೇಶದಲ್ಲಿನ ಬಡತನವನ್ನು ಹೋಗಲಾಡಿಸಲು ವೈಜ್ಞಾನಿಕ ಪರಿಹಾರಗಳನ್ನು ಕಂಡುಕೊಳ್ಳುವ ಉದ್ದೇಶದಿಂದ ದಕ್ಷಿಣ ಏಷ್ಯಾದ ಉಪಗ್ರಹವನ್ನು 2017 ರಲ್ಲಿ ಉಡಾವಣೆ ಮಾಡಲಾಯಿತು ಎಂದು ಜೈಶಂಕರ್ ತಿಳಿಸಿದರು.

ಸಾರ್ಕ್ ಎಂದರೇನು?
ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘ (ಸಾರ್ಕ್) ಏಷ್ಯಾದ ದೇಶಗಳ ಒಂದು ಗುಂಪು. ಇದರಲ್ಲಿ ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ನೇಪಾಳ ಮತ್ತು ಶ್ರೀಲಂಕಾ ಸೇರಿದಂತೆ 8 ದೇಶಗಳಿವೆ.

ಪಾಕಿಸ್ತಾನದ ಕೋಪಕ್ಕೆ ಕಾರಣ?
ಆಗಸ್ಟ್ 5 ರಂದು, ಭಾರತ ಸರ್ಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370 ನೇ ವಿಧಿಯ ಹಲವು ನಿಬಂಧನೆಗಳನ್ನು ರದ್ದುಗೊಳಿಸಿತು, ನಂತರ ಪಾಕಿಸ್ತಾನದೊಂದಿಗಿನ ಉದ್ವಿಗ್ನತೆ ಹೆಚ್ಚಾಗಿದೆ.

ಕಾಶ್ಮೀರ ವಿಷಯದ ಬಗ್ಗೆ ಭಾರತದ ನಿರ್ಧಾರಗಳಿಗೆ ಪ್ರತಿಕ್ರಿಯಿಸಿದ ಪಾಕಿಸ್ತಾನ, ಭಾರತದೊಂದಿಗಿನ ರಾಜತಾಂತ್ರಿಕ ಸಂಬಂಧವನ್ನು ದುರ್ಬಲಗೊಳಿಸಿತು ಮತ್ತು ಭಾರತೀಯ ಹೈಕಮಿಷನರ್ ಅವರನ್ನು ತೆಗೆದುಹಾಕಿತು.

ಕಾಶ್ಮೀರದ ಸಮಸ್ಯೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸಲು ಪಾಕಿಸ್ತಾನ ಸಕ್ರಿಯವಾಗಿ ಪ್ರಯತ್ನಿಸುತ್ತಿದ್ದರೆ, 370 ನೇ ವಿಧಿಯನ್ನು ರದ್ದುಪಡಿಸುವುದು ತನ್ನ ಆಂತರಿಕ ವಿಷಯ ಎಂದು ಭಾರತ ಸ್ಪಷ್ಟಪಡಿಸಿದೆ.

Trending News