ಮಾಸ್ಕೋ: ರಷ್ಯಾದ ಮ್ಯಾಗ್ನಿಟೊಗೊರ್ಸ್ಕ್ ಕೈಗಾರಿಕಾ ನಗರದಲ್ಲಿ ಎರಡು ದಿನಗಳ ಹಿಂದೆ ಅಪಾರ್ಟ್ಮೆಂಟ್ವೊಂದರಲ್ಲಿ ನಡೆದ ಗ್ಯಾಸ್ ಸ್ಫೋಟದಿಂದಾಗಿ ಮೃತಪಟ್ಟವರ ಸಂಖ್ಯೆ 37ಕ್ಕೆ ಏರಿಕೆಯಾಗಿದೆ.
ಡಿಸೆಂಬರ್ 31ರಂದು ನಡೆದ ಗ್ಯಾಸ್ ಸ್ಪೋಟದಿಂದಾಗಿ ಅಪಾರ್ಟ್ ಮೆಂಟ್ ಕಟ್ಟಡ ಕುಸಿದುಬಿದ್ದಿತ್ತು. ಆರಂಭದಲ್ಲಿ 27 ಮಂದಿ ಮೃತಪಟ್ಟಿದ್ದರು. ಆದರೆ ಗುರುವಾರವೂ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಕಟ್ಟಡದ ಅವಶೇಷಗಳಡಿ ಸಿಲುಕಿದ್ದ ಮತ್ತಷ್ಟು ಮೃತದೇಹಗಳನ್ನು ರಕ್ಷಣಾ ಸಿಬ್ಬಂದಿ ಹೊರತೆಗೆದಿದ್ದಾರೆ. ಇದೀಗ ಮೃತಪಟ್ಟವರ ಸಂಖ್ಯೆ 37ಕ್ಕೆ ಏರಿದೆ.
ಆದರೆ ಇದುವರೆಗೆ ಹೊರತೆಗೆಯಲಾದ 37 ಮೃತದೇಹಗಳಲ್ಲಿ ಕೇವಲ 22 ದೇಹಗಳನ್ನು ಗುರುತಿಸಲಾಗಿದೆ ಎನ್ನಲಾಗಿದೆ. ಕಟ್ಟಡದ ಅವಶೇಷಗಳನ್ನು ತೆರವುಗೊಳಿಸಿ ಜನರನ್ನು ರಕ್ಷಿಸುವ ಕಾರ್ಯಾಚರಣೆ ನಡೆಯುತ್ತಿದ್ದು, ಇನ್ನೂ 10 ಮಂದಿ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ರಷ್ಯಾದ ಅಪರಾಧ ತನಿಖಾ ಸಮಿತಿಯು ಘಟನೆ ಬಗ್ಗೆ ತನಿಖೆ ಆರಂಭಿಸಿದ್ದು, ಸ್ಫೋಟಕ್ಕೆ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಕಾರ್ಯಾಚರಣೆ ನಡೆಸಿದೆ. ಆದರೆ, ಘಟನಾ ಸ್ಥಳದಲ್ಲಿ ಯಾವುದೇ ಸ್ಫೋಟಕ ಸಾಮಗ್ರಿಗಳು ದೊರೆತಿಲ್ಲ ಎಂದು ಹೇಳಿರುವ ತನಿಖಾ ಸಮಿತಿ, ತನ್ನ ಆರಂಭಿಕ ತನಿಖೆಯಲ್ಲಿ ಅನಿಲ ಸೋರಿಕೆಯಾದ ಪರಿಣಾಮ ಸ್ಫೋಟ ಸಂಭವಿಸಿ ಕಟ್ಟಡ ಕುಸಿದಿದೆ ಎಂದು ಎಂದು ಹೇಳಿದೆ.