ಒಸಾಕ: ಜಪಾನಿನ ಹಿರೋಷಿಮಾ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರವಾಹ ಮತ್ತು ಭೂಕುಸಿತ ಉಂಟಾಗಿದ್ದು ಎದುರಾಗಿದ್ದು 88 ಮಂದಿ ಸಾವನ್ನಪ್ಪಿರುವುದಲ್ಲದೆ, 50ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.
ಇದಲ್ಲದೆ, ನೈಸರ್ಗಿಕ ವಿಪತ್ತಿನಲ್ಲಿ ತಮ್ಮ ಮನೆಗಳನ್ನು ಕಳೆದುಕೊಂಡ ಸಾವಿರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯ ಪ್ರಗತಿಯಲ್ಲಿದೆ. ಈ ಮಧ್ಯೆ ಜಪಾನ್ ಹವಾಮಾನ ಇಲಾಖೆಯು ಭೂಕುಸಿತಗಳು ಮತ್ತು ಪ್ರವಾಹದ ಅಪಾಯಗಳ ಬಗ್ಗೆ ಮುನ್ನೆಚ್ಚರಿಕೆ ನೀಡಿದೆ. ಭಿಕಟ ಪ್ರವಾಹದಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ವ್ಯಾಪಾರ ವಹಿವಾಟಿಗೆ ತೀವ್ರ ಅಡಚಣೆಯಾಗಿದೆ.
ಆಟೋಮೇಕರ್ ಮ್ಯಾಜ್ಡಾ ಮೋಟಾರ್ ಕಾರ್ಪ್ ಮತ್ತು ಡೈಹತ್ಸು ಮೋಟಾರು ಕಂಪನಿಗಳು ತಮ್ಮ ಕಾರ್ಯ ಸ್ಥಗಿತಗೊಳಿಸಿವೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮೃತಪಟ್ಟವರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಂಭವವಿದೆ.
ಈಗಾಗಲೇ 48,000 ಪೋಲಿಸ್ ತುರ್ತು ಪರಿಸ್ಥಿತಿ ಪ್ರತಿಸ್ಪಂದಕರು, ಅಗ್ನಿಶಾಮಕ ಇಲಾಖೆ ಮತ್ತು ರಕ್ಷಣಾ ಪಡೆಗಳು ಕಾಣೆಯಾದವರ ಹುಡುಕಾಟ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿವೆ ಎಂದು ಪ್ರಧಾನ ಮಂತ್ರಿ ಶಿನ್ಜೊ ಅಬೆ ಹೇಳಿದ್ದಾರೆ. ದಕ್ಷಿಣ-ಪಶ್ಚಿಮ ಜಪಾನ್ನಲ್ಲಿ ಒಕಯಮಾ ಪ್ರಿಫೆಕ್ಚರ್ನ ಕುರಾಶಿಕಿ ಪ್ರದೇಶದಿಂದ ನಿವಾಸಿಗಳನ್ನು ಸ್ಥಳಾಂತರಿಸಲಾಗುತ್ತಿದೆ. ಇದುವರೆಗೂ 2 ಮಿಲಿಯನ್ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ವರದಿಗಳು ತಿಳಿಸಿವೆ.