ವಿಪರೀತ ವಿದ್ಯುತ್ ಬೆಲೆ ಏರಿಕೆಯಿಂದ ಕಂಗೆಟ್ಟ ಮಹಿಳೆಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಬೀದಿಗಿಳಿದು ಹೋರಾಟ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪೂರ ಪಟ್ಟಣದಲ್ಲಿ ನಡೆದಿದೆ. ಮಾಜಿ ಪುರಸಭಾ ಅಧ್ಯಕ್ಷ ಶೇಖರ ಅಂಗಡಿ ನೇತೃತ್ವದ ನಾಗರಿಕ ಹಿತರಕ್ಷಣಾ ಸಮಿತಿ ಆಶ್ರಯದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಬೃಹತ್ ಪ್ರತಿಭಟನಾ ಹೋರಾಟ ನಡೆಸಲಾಯಿತು. ಈ ಸಂದರ್ಭದಲ್ಲಿ ವೀರರಾಣಿ ಕಿತ್ತೂರ ಚೆನ್ನಮ್ಮ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ರು. ಈ ಸಂದರ್ಭದಲ್ಲಿ ಮಾತನಾಡಿದ ಮಹಿಳೆಯರು ಅತಿಯಾದ ವಿದ್ಯುತ್ ಬೆಲೆ ಏರಿಕೆಯಿಂದ ತೀವ್ರ ಸಂಕಷ್ಟ ಎದುರಾಗಿದ್ದು, ಮಕ್ಕಳು ಮರಿ ಕಟ್ಟಿಕೊಂಡು ಮನೆ ನಡೆಸೋದೆ ದುಸ್ತರಾಗಿರುವಾಗ ವಿದ್ಯುತ್ ಬೆಲೆ ಏರಿಕೆ ಬರೆಯಾದಂತಾಗಿದೆ. ನಾವು ಯಾವುದೇ ಕಾರಣಕ್ಕೂ ವಿದ್ಯುತ್ ಬಿಲ್ ಕಟ್ಟೋದಿಲ್ಲ, ಯಾರು ಏನು ಮಾಡ್ತಾರೋ ನೋಡೋಣ, ಒಂದೊಮ್ಮೆ ನಮ್ಮ ಮನೆಗೆ ಬಿಲ್ ಕಲೆಕ್ಟರ್ ಬಂದರೆ ಹೋರಾಟ ತೀವ್ರಗೊಳಿಸಿ ಉತ್ತರ ಕೊಡಬೇಕಾಗುತ್ತದೆ ಎಂದು ಮಹಿಳೆಯರು ತಮ್ಮ ಆಕ್ರೋಶವನ್ನ ಹೊರಹಾಕಿದರು