Chandrayaan 3: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಎಲ್ಎಂವಿ3 ಎಂ4 ಉಡಾವಣಾ ವಾಹನದ ಕ್ರಯೋಜೆನಿಕ್ ಅಪ್ಪರ್ ಸ್ಟೇಜ್ ಅನಿಯಂತ್ರಿತವಾಗಿ ಭೂಮಿಯ ವಾತಾವರಣಕ್ಕೆ ಮರಳುವಿಕೆಯನ್ನು ಪೂರ್ಣಗೊಳಿಸಿದೆ ಎಂದು ಮಾಹಿತಿ ನೀಡಿದೆ. ಈ ಹಂತ ಚಂದ್ರಯಾನ-3 ಬಾಹ್ಯಾಕಾಶ ನೌಕೆಯನ್ನು ಜುಲೈ 14, 2023ರಂದು ಉದ್ದೇಶಿತ ಕಕ್ಷೆಗೆ ಯಶಸ್ವಿಯಾಗಿ ತಲುಪಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿತ್ತು.
ಈ ಹಂತ ಭೂಮಿಯ ವಾತಾವರಣವನ್ನು ನವೆಂಬರ್ 15ರ ಬುಧವಾರದಂದು ಮಧ್ಯಾಹ್ನ 2:42ರ ವೇಳೆಗೆ ಅನಿಯಂತ್ರಿತವಾಗಿ ಪ್ರವೇಶಿಸಿತು. ಅದು ಉತ್ತರ ಪೆಸಿಫಿಕ್ ಸಮುದ್ರಕ್ಕೆ ಬೀಳುವ ನಿರೀಕ್ಷೆಗಳಿದ್ದವು ಎಂದು ಇಸ್ರೋ ಹೇಳಿಕೆ ನೀಡಿದೆ. ಸರಳವಾಗಿ ವಿವರಿಸುವುದಾದರೆ, 'ಅನಿಯಂತ್ರಿತ ಮರುಪ್ರವೇಶ' ಎಂದರೆ, ಕ್ರಯೋಜೆನಿಕ್ ಹಂತ ಭೂಮಿಯ ವಾತಾವರಣಕ್ಕೆ ಮರಳುವ ವೇಳೆ ಅದಕ್ಕೆ ಯಾವುದೇ ನಿರ್ದೇಶನ ಅಥವಾ ನಿರ್ವಹಣೆ ಇರುವುದಿಲ್ಲ. ಆದ್ದರಿಂದ ಅದು ಎಲ್ಲಿ ಪತನಗೊಳ್ಳುತ್ತದೆ ಎಂದು ನಿಖರವಾಗಿ ಹೇಳುವುದು ಬಹಳ ಕಷ್ಟಕರವಾಗಿರುತ್ತದೆ.
ಭೂಮಿಗೆ ಮರಳಿ ಪ್ರವೇಶಿಸುತ್ತಿರುವ ವಸ್ತುವಿನ ಪಥ ಭಾರತದ ಮೇಲಿನಿಂದ ಸಾಗುತ್ತಿಲ್ಲ ಎಂದಿರುವ ಇಸ್ರೋ, ಬೀಳುತ್ತಿರುವ ವಸ್ತು ಭಾರತೀಯ ಸರಹದ್ದಿನ ಯಾವ ಪ್ರದೇಶದ ಮೇಲಿನಿಂದಲೂ ಇಳಿಯುತ್ತಿಲ್ಲ ಎಂದಿತ್ತು.
"ಈ ರಾಕೆಟ್ ಬಿಡಿಭಾಗ (NORAD ಐಡಿ 57321) ಚಂದ್ರಯಾನ-3 ಬಾಹ್ಯಾಕಾಶ ನೌಕೆಯನ್ನು ಜುಲೈ 14, 2023ರಂದು ಯಶಸ್ವಿಯಾಗಿ ಉದ್ದೇಶಿತ 133 ಕಿಲೋಮೀಟರ್ × 35,823 ಕಿಲೋಮೀಟರ್ ಕಕ್ಷೆಯಲ್ಲಿ ಅಳವಡಿಸುವಲ್ಲಿ ಮುಖ್ಯ ಪಾತ್ರ ನಿರ್ವಹಿಸಿತ್ತು" ಎಂದು ಇಸ್ರೋ ಮಾಹಿತಿ ನೀಡಿದೆ.
ಇದನ್ನೂ ಓದಿ- ಭಾರತದ ಹೆಮ್ಮೆಯ ಚಂದ್ರಯಾನ-3 ಯೋಜನೆಯ ಯಶಸ್ಸಿನ ಹಾದಿ, ಕೈಗೊಂಡ ಸಾಧನೆಗಳು
ಈ ಬಿಡಿಭಾಗ ಉಡಾವಣೆಗೊಂಡ 124 ದಿನಗಳ ಬಳಿಕ ಭೂಮಿಗೆ ಮರಳುತ್ತಿದ್ದು, ಇಂಟರ್ ಏಜೆನ್ಸಿ ಸ್ಪೇಸ್ ಡೆಬ್ರಿಸ್ ಕೋಆರ್ಡಿನೇಷನ್ ಕಮಿಟಿ (ಐಎಡಿಸಿ) ಜಾರಿಗೆ ತಂದಿರುವ '25 ವರ್ಷದ ನಿಯಮ'ಕ್ಕೆ ಅನುಗುಣವಾಗಿದೆ. ಈ ನಿಯಮದ ಪ್ರಕಾರ, ಭೂಮಿಯ ಕೆಳ ಕಕ್ಷೆಯಲ್ಲಿರುವ (ಎಲ್ಇಒ) ವಸ್ತುಗಳನ್ನು 25 ವರ್ಷಗಳ ಒಳಗಾಗಿ ಅಲ್ಲಿಂದ ತೆಗೆದು, ಬಾಹ್ಯಾಕಾಶ ಅವಶೇಷಗಳ ಪ್ರಮಾಣವನ್ನು ಕಡಿಮೆಗೊಳಿಸಬೇಕು ಎಂದು ಶಿಫಾರಸು ಮಾಡುತ್ತದೆ. 124 ದಿನಗಳಲ್ಲಿ ಅದು ಭೂಮಿಗೆ ಮರುಪ್ರವೇಶಿಸಿರುವುದು ಈ ನಿಯಮಕ್ಕೆ ಅನುಗುಣವಾಗಿಯೇ ಇದೆ.
ಉಡಾವಣೆ ಮತ್ತು ಭೂಮಿಗೆ ಮರುಪ್ರವೇಶದ ನಡುವೆ 124 ದಿನಗಳ ಅಂತರ ಇರುವುದಕ್ಕೆ ನಿರ್ದಿಷ್ಟ ಕಕ್ಷೀಯ ಗುಣಗಳು ಹಾಗೂ ವಸ್ತುವಿನ ನಶಿಸುವ ಆಯಾಮವೂ ಕಾರಣವಾಗಿದೆ. ನೈಸರ್ಗಿಕವಾಗಿ ಕಕ್ಷೀಯ ಇಳಿಕೆಗೆ ಒಳಪಟ್ಟು, ವಸ್ತು ಭೂಮಿಯ ವಾತಾವರಣಕ್ಕೆ ಮರಳಲು ಅದಿದ್ದ ಎತ್ತರ, ಅದು ಹೊಂದಿದ್ದ ಭಾರ, ಮತ್ತು ನೈಸರ್ಗಿಕವಾಗಿ ಕಕ್ಷೀಯ ಕುಸಿತವಾಗಲು (ನ್ಯಾಚುರಲ್ ಆರ್ಬಿಟಲ್ ಡೀಕೇ) ಬೇಕಾಗುವ ಸಮಯಗಳು ಪ್ರಭಾವ ಬೀರುತ್ತವೆ.
ನ್ಯಾಚುರಲ್ ಆರ್ಬಿಟಲ್ ಡೀಕೇ ಎನ್ನುವುದು ಕಾಲಕ್ರಮೇಣ ವಸ್ತುವೊಂದರ ಕಕ್ಷೆಯ ಎತ್ತರ ಮತ್ತು ಗಾತ್ರದಲ್ಲಿ ಕಡಿಮೆಯಾಗುವ ಪ್ರಕ್ರಿಯೆಯಾಗಿದ್ದು, ಇದಕ್ಕೆ ವಾತಾವರಣದ ಎಳೆತ ಪ್ರಮುಖ ಕಾರಣವಾಗಿದೆ. ಒಂದು ವಸ್ತು ಭೂಮಿಯ ಪ್ರದಕ್ಷಿಣೆ ನಡೆಸುವಾಗ, ಅದು ಹೊರ ವಾತಾವರಣದಲ್ಲಿರುವ ಕಣಗಳನ್ನು ಎದುರಿಸುತ್ತದೆ. ಇದರಿಂದ ಒಂದು ಎಳೆತದ ಬಲ ನಿರ್ಮಾಣವಾಗಿ, ಅದು ವಸ್ತುವಿನ ಕಕ್ಷೀಯ ಚಲನೆಯ ವಿರುದ್ಧವಾಗಿ ಕಾರ್ಯಾಚರಿಸುತ್ತದೆ. ಇದರ ಪರಿಣಾಮವಾಗಿ ವಸ್ತು ತನ್ನ ಶಕ್ತಿ ಮತ್ತು ಎತ್ತರವನ್ನು ಕಳೆದುಕೊಳ್ಳುತ್ತದೆ. ಕ್ರಮೇಣ ಈ ಪ್ರಕ್ರಿಯೆ ವಸ್ತುವಿನ ಕಕ್ಷೀಯ ಎತ್ತರವನ್ನು ಸಾಕಷ್ಟು ಕಡಿಮೆಗೊಳಿಸಿ, ಅದು ಭೂಮಿಯ ವಾತಾವರಣಕ್ಕೆ ಮರಳಿ ಪ್ರವೇಶಿಸುವಂತೆ ಮಾಡುತ್ತದೆ.
ಚಂದ್ರಯಾನ-3ರ ಉಡಾವಣೆಯ ಬಳಿಕ, ರಾಕೆಟ್‌ನ ಮೇಲಿನ ಹಂತದಿಂದ 'ಪ್ಯಾಸಿವೇಷನ್' ಎಂಬ ಪ್ರಕ್ರಿಯೆಯ ಮೂಲಕ ಬಾಕಿ ಉಳಿದ ಇಂಧನ ಮತ್ತು ಶಕ್ತಿ ಮೂಲಗಳನ್ನು ತೆಗೆದು ಹಾಕಿ, ಅದನ್ನು ಸುರಕ್ಷಿತಗೊಳಿಸಲಾಯಿತು. ಈ ವಿಧಾನ ಜಾಗತಿಕ ನಿರ್ದೇಶನಗಳ ಅನುಗುಣವಾಗಿದ್ದು, ಬಾಹ್ಯಾಕಾಶವನ್ನು ಸುಸ್ಥಿರವಾಗಿಸುವಲ್ಲಿ ಭಾರತದ ಬದ್ಧತೆಯನ್ನು ಪ್ರದರ್ಶಿಸಿದೆ. ಪ್ಯಾಸಿವೇಶನ್ ಎಂದರೆ, ರಾಕೆಟ್ ಹಂತವನ್ನು ನಿಷ್ಕ್ರಿಯಗೊಳಿಸಿ, ಯಾವುದೇ ಅಪಘಾತಗಳು ಸಂಭವಿಸದಂತೆ ತಡೆಯುವ ಕ್ರಮವಾಗಿದೆ. ಇದು ಜವಾಬ್ದಾರಿಯುತ ಬಾಹ್ಯಾಕಾಶ ಯೋಜನೆಗೆ ಸೂಕ್ತ ಉದಾಹರಣೆಯೂ ಹೌದು.
ಇದನ್ನೂ ಓದಿ- ಸ್ಪಾಂಜ್ ಬಾಂಬ್: ಹಮಾಸ್ ಉಗ್ರರ ಸುರಂಗಗಳ ವಿರುದ್ಧ ಇಸ್ರೇಲ್ ರಹಸ್ಯ ಅಸ್ತ್ರ
ಕ್ರಯೋಜೆನಿಕ್ ರಾಕೆಟ್‌ನ ಪ್ಯಾಸಿವೇಶನ್ ಪ್ರಕ್ರಿಯೆಯನ್ನು ಹಲವು ವಿಧಾನಗಳಲ್ಲಿ ನಡೆಸಲಾಗುತ್ತದೆ. ಮೊದಲನೆಯದಾಗಿ, ಉಳಿದಿರುವ ಎಲ್ಲ ಇಂಧನವನ್ನು ರಾಕೆಟ್‌ನ ಇಂಜಿನ್‌ಗಳು ಮತ್ತು ಇಂಧನ ಟ್ಯಾಂಕ್‌ಗಳಿಂದ ಖಾಲಿ ಮಾಡಲಾಗುತ್ತದೆ. ಆ ಮೂಲಕ ಅದರಲ್ಲಿ ಯಾವುದೇ ಇಂಧನ ಉಳಿದಿಲ್ಲ ಎಂದು ಖಾತ್ರಿಪಡಿಸಲಾಗುತ್ತದೆ. ಎರಡನೆಯದಾಗಿ, ರಾಕೆಟ್ ಬ್ಯಾಟರಿಗಳು ಮತ್ತು ವಿದ್ಯುತ್ ವ್ಯವಸ್ಥೆಗಳನ್ನು ಖಾಲಿಯಾಗಿಸಿ, ಸಂಪರ್ಕ ಕಡಿತಗೊಳಿಸಲಾಗುತ್ತದೆ. ಅದರೊಡನೆ, ಎಲ್ಲ ವಾಲ್ವ್‌ಗಳು, ಲೈನ್‌ಗಳು, ಹಾಗೂ ಕನೆಕ್ಟರ್‌ಗಳನ್ನು ನಿಷ್ಕ್ರಿಯಗೊಳಿಸಿ, ಯಾವುದೇ ಇಂಧನ ಮರುಪೂರಣ ಹಾಗೂ ಚಾಲನೆ ನಡೆಯದಂತೆ ಮಾಡಲಾಗುತ್ತದೆ. ಇದಾದ ಬಳಿಕ, ರಾಕೆಟ್ ಹಂತ ನಿಷ್ಕ್ರಿಯ ಮತ್ತು ಸುರಕ್ಷಿತವಾಗಿದೆಯೇ ಎಂದು ಪರಿಶೀಲಿಸಲಾಗುತ್ತದೆ. ಈ ಸೂಕ್ಷ್ಮ ಪ್ರಕ್ರಿಯೆ ರಾಕೆಟ್ ಭೂಮಿಗೆ, ಇತರ ಉಪಗ್ರಹಗಳಿಗೆ, ಅಥವಾ ಭವಿಷ್ಯದ ಬಾಹ್ಯಾಕಾಶ ಯೋಜನೆಗಳಿಗೆ ಯಾವುದೇ ಅಪಾಯ ಉಂಟುಮಾಡುವುದಿಲ್ಲ ಎಂದು ಖಚಿತಪಡಿಸಲು ಅವಶ್ಯಕವಾಗಿದ್ದು, ಅಂತಾರಾಷ್ಟ್ರೀಯ ನಿಯಮಾವಳಿಗಳಿಗೆ ಅನುಗುಣವಾಗಿದೆ.
ಈ ಚಟುವಟಿಕೆಗಳನ್ನು ಸಾಮಾನ್ಯವಾಗಿ 'ಕಮಾಂಡ್ ಕಂಟ್ರೋಲ್' ವ್ಯವಸ್ಥೆಗಳ ಮೂಲಕ ನಡೆಸಲಾಗುತ್ತದೆ. 'ಕಮಾಂಡ್ ಕಂಟ್ರೋಲ್' ವ್ಯವಸ್ಥೆ ಕ್ರಯೋಜೆನಿಕ್ ರಾಕೆಟ್ ಹಂತದ ಪ್ಯಾಸಿವೇಟಿಂಗ್ ಪ್ರಕ್ರಿಯೆಯ ವಿವಿಧ ಹಂತಗಳನ್ನು ದೂರದಿಂದಲೇ ನಿಯಂತ್ರಿಸಲು ಅನುಕೂಲಕರವಾಗಿದೆ. ಇಂಜಿನಿಯರ್‌ಗಳು ಮತ್ತು ತಂತ್ರಜ್ಞರು ಭೂ ಆಧಾರಿತ ನಿಯಂತ್ರಣ ವ್ಯವಸ್ಥೆಗಳನ್ನು ಬಳಸಿ, ರಾಕೆಟ್ ಮತ್ತು ಅದರಲ್ಲಿರುವ ವ್ಯವಸ್ಥೆಗಳಿಗೆ ನಿರ್ದೇಶನ ನೀಡಿ, ಇಂಧನ ಖಾಲಿಯಾಗಿಸುವುದು, ವಿದ್ಯುತ್ ಸಂಗ್ರಹವನ್ನು ಖಾಲಿಗೊಳಿಸುವುದು, ವಾಲ್ವ್‌ಗಳು ಮತ್ತು ಕನೆಕ್ಟರ್‌ಗಳನ್ನು ಮುಚ್ಚುವುದು ಸೇರಿದಂತೆ ಇತರ ಅವಶ್ಯಕ ಪ್ರಕ್ರಿಯೆಗಳನ್ನು ನಡೆಸುತ್ತಾರೆ. ಈ ಕಮಾಂಡ್ ಕಂಟ್ರೋಲ್ ವ್ಯವಸ್ಥೆಗಳು ಇಂತಹ ಚಟುವಟಿಕೆಗಳನ್ನು ನಿಖರವಾಗಿ ನಿಯಂತ್ರಿಸಲು, ನಿರ್ವಹಿಸಲು, ಸುರಕ್ಷತೆಯನ್ನು ಖಾತ್ರಿಪಡಿಸಲು ಅವಶ್ಯಕವಾಗಿವೆ.
ಲಾಂಚ್ ವೆಹಿಕಲ್ ಮಾರ್ಕ್-3 (ಎಲ್ಎಂವಿ-3) ರಾಕೆಟ್ ಜುಲೈ 14ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೆಯ ಉಡಾವಣಾ ವೇದಿಕೆಯಿಂದ ಉಡಾವಣೆಗೊಂಡು, ಚಂದ್ರನೆಡೆಗೆ ಭಾರತದ ಮೂರನೆಯ ಅನ್ವೇಷಣಾ ಯಾನವಾದ ಚಂದ್ರಯಾನ-3 ಯೋಜನೆಯನ್ನು ಯಶಸ್ವಿಗೊಳಿಸಿತು.
ಆಗಸ್ಟ್ 23ರಂದು ಚಂದ್ರನ ಮೇಲಿಳಿದ ಚಂದ್ರಯಾನ-3 ಯೋಜನೆ, ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಲ್ಯಾಂಡರ್ ಇಳಿಸಿದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಯನ್ನು ಭಾರತಕ್ಕೆ ತಂದಿತು. ಚಂದ್ರಯಾನ-3ರ ಯಶಸ್ಸಿನೊಡನೆ, ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ನಡೆಸಿದ ಕೇವಲ ನಾಲ್ಕನೆಯ ರಾಷ್ಟ್ರವಾಗಿ ಭಾರತ ಹೊರಹೊಮ್ಮಿತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.