ಒಡಿಸ್ಸಿಯಸ್ ಲ್ಯಾಂಡರ್‌ಗೆ ಚಂದ್ರನ ಸ್ವಾಗತ: ಖಾಸಗಿ ಬಾಹ್ಯಾಕಾಶ ವಲಯದ ಭಾರೀ ಯಶಸ್ಸು

Written by - Girish Linganna | Last Updated : Feb 24, 2024, 08:20 PM IST
  • ಆ ಸಂದರ್ಭದಲ್ಲಿ ಒಡಿಸ್ಸಿಯಸ್ ಬಾಹ್ಯಾಕಾಶ ನೌಕೆಯ ಸ್ಥಿತಿ ಇನ್ನೂ ಅನಿಶ್ಚಿತವಾಗಿತ್ತಾದರೂ, ಯೋಜನೆ ಯಶಸ್ವಿಯಾಗಿದೆ ಎಂದು ಪರಿಗಣಿಸಲಾಯಿತು.
  • ಇಂಟ್ಯುಟಿವ್ ಮೆಷಿನ್ಸ್ ಸಂಸ್ಥೆಯ ಸಿಇಒ ಸ್ಟೀಫನ್ ಆಲ್ಟೆಮಸ್ ಅವರು ಆತಂಕವನ್ನು ಕಡಿಮೆಗೊಳಿಸುವ ರೀತಿಯಲ್ಲಿ, "ಈ ಕಾರ್ಯಾಚರಣೆ ಅತ್ಯಂತ ರೋಚಕ ಮತ್ತು ಆತಂಕ ಮೂಡಿಸುವಂತಿತ್ತು.
  • ಆದರೆ, ನಾವು ಚಂದ್ರನ ಮೇಲ್ಮೈಯಲ್ಲಿ ಇಳಿದಿದ್ದೇವೆ. ಚಂದ್ರನ ಮೇಲ್ಮೈಗೆ ಸ್ವಾಗತ" ಎಂದು ಘೋಷಿಸಿದರು.
 ಒಡಿಸ್ಸಿಯಸ್ ಲ್ಯಾಂಡರ್‌ಗೆ ಚಂದ್ರನ ಸ್ವಾಗತ: ಖಾಸಗಿ ಬಾಹ್ಯಾಕಾಶ ವಲಯದ ಭಾರೀ ಯಶಸ್ಸು title=

ಇಂಟ್ಯುಟಿವ್ ಮೆಷಿನ್ಸ್ ಸಂಸ್ಥೆ ತನ್ನ ಒಡಿಸ್ಸಿಯಸ್ ಲ್ಯಾಂಡರ್ ಅನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ. ಚಂದ್ರನ ಮೇಲ್ಮೈಯಲ್ಲಿ ಖಾಸಗಿ ಸಂಸ್ಥೆಯೊಂದು ಬಾಹ್ಯಾಕಾಶ ನೌಕೆಯನ್ನು ಇಳಿಸಿರುವುದು ಇದೇ ಮೊದಲ ಬಾರಿಯಾಗಿದ್ದು, ಇತರ ಹಲವು ಖಾಸಗಿ ಸಂಸ್ಥೆಗಳ ಪ್ರಯತ್ನಗಳಲ್ಲಿನ ವೈಫಲ್ಯಗಳ ಬಳಿಕ ಮಹತ್ತರ ಯಶಸ್ಸಾಗಿದೆ.

ಒಡಿಸ್ಸಿಯಸ್ ನೌಕೆಯ ಪ್ರಯಾಣ ಫೆಬ್ರವರಿ 14ರಂದು ಫಾಲ್ಕನ್ 9 ರಾಕೆಟ್ ಮೂಲಕ ಆರಂಭಗೊಂಡಿತು. ಈ ನೌಕೆ ಫೆಬ್ರವರಿ 21ರಂದು ಚಂದ್ರನ ಕಕ್ಷೆಗೆ ತಲುಪಿ, ಫೆಬ್ರವರಿ 22ರಂದು ಚಂದ್ರನ ದಕ್ಷಿಣ ಧ್ರುವದ ಬಳಿ ಯಶಸ್ವಿಯಾಗಿ ಇಳಿಯಿತು.

ಯೋಜನಾ ನಿಯಂತ್ರಣ ಕೇಂದ್ರದಿಂದ ನಡೆದ ನೇರ ಪ್ರಸಾರದಲ್ಲಿ, ಲ್ಯಾಂಡರ್ ಚಂದ್ರನ ಮೇಲಿಳಿಯುವ ಸಮಯ ಬಂದು, ಪೂರ್ಣಗೊಂಡ ಬಳಿಕವೂ ಅದರಿಂದ ಯಾವುದೇ ಸಂಕೇತ ಬರದಿದ್ದರಿಂದ, ಅಲ್ಲಿನ ಸಿಬ್ಬಂದಿಗಳು ಆತಂಕಿತರಾಗಿದ್ದರು. ಆದರೆ ನಿರೀಕ್ಷಿತ ಸಮಯಕ್ಕಿಂತ ಕೊಂಚ ತಡವಾದರೂ, ಇಂಟ್ಯುಟಿವ್ ಮೆಷಿನ್ಸ್ ಸಂಸ್ಥೆಯ ಯೋಜನಾ ನಿರ್ದೇಶಕರಾದ ಟಿಮ್ ಕ್ರೈನ್ ಅವರು ನಮಗೆ ಈಗ ಒಂದು ಸಂಕೇತ ಲಭಿಸಿದೆ ಎಂದು ಘೋಷಿಸಿದರು. ಆ ಸಂಕೇತ ಅತ್ಯಂತ ದುರ್ಬಲವಾಗಿದ್ದರೂ, ಅದು ಖಂಡಿತವಾಗಿಯೂ ಲ್ಯಾಂಡರ್‌ನಿಂದಲೇ ಬಂದಿದ್ದು, ಲ್ಯಾಂಡರ್ ಚಂದ್ರನ ಮೇಲ್ಮೈಯಲ್ಲಿ ಇಳಿದಿರುವುದು ಖಚಿತವಾಗಿದೆ ಎಂದರು.

ಆ ಸಂದರ್ಭದಲ್ಲಿ ಒಡಿಸ್ಸಿಯಸ್ ಬಾಹ್ಯಾಕಾಶ ನೌಕೆಯ ಸ್ಥಿತಿ ಇನ್ನೂ ಅನಿಶ್ಚಿತವಾಗಿತ್ತಾದರೂ, ಯೋಜನೆ ಯಶಸ್ವಿಯಾಗಿದೆ ಎಂದು ಪರಿಗಣಿಸಲಾಯಿತು. ಇಂಟ್ಯುಟಿವ್ ಮೆಷಿನ್ಸ್ ಸಂಸ್ಥೆಯ ಸಿಇಒ ಸ್ಟೀಫನ್ ಆಲ್ಟೆಮಸ್ ಅವರು ಆತಂಕವನ್ನು ಕಡಿಮೆಗೊಳಿಸುವ ರೀತಿಯಲ್ಲಿ, "ಈ ಕಾರ್ಯಾಚರಣೆ ಅತ್ಯಂತ ರೋಚಕ ಮತ್ತು ಆತಂಕ ಮೂಡಿಸುವಂತಿತ್ತು. ಆದರೆ, ನಾವು ಚಂದ್ರನ ಮೇಲ್ಮೈಯಲ್ಲಿ ಇಳಿದಿದ್ದೇವೆ. ಚಂದ್ರನ ಮೇಲ್ಮೈಗೆ ಸ್ವಾಗತ" ಎಂದು ಘೋಷಿಸಿದರು.

ಇಂಟ್ಯುಟಿವ್ ಮೆಷಿನ್ಸ್ ಸಂಸ್ಥೆಯ ಯಶಸ್ಸಿಗೆ ಮುನ್ನ, ಮೂರು ಇತರ ಖಾಸಗಿ ಕಂಪನಿಗಳ ಯೋಜನೆಗಳು ಚಂದ್ರನ ಮೇಲಿಳಿಯುವಲ್ಲಿ ವೈಫಲ್ಯ ಅನುಭವಿಸಿದ್ದವು. 2019ರಲ್ಲಿ, ಸ್ಪೇಸ್ಐಎಲ್‌ನ ಬೆರ್‌ಶೀಟ್ ಬಾಹ್ಯಾಕಾಶ ನೌಕೆ, ಮತ್ತು 2022ರಲ್ಲಿ ಐಸ್ಪೇಸ್ ಸಂಸ್ಥೆಯ ಹಕುಟೊ ಆರ್ ಯೋಜನೆಗಳೆರಡೂ ಚಂದ್ರನ ಮೇಲಿಳಿಯುವ ಸಂದರ್ಭದಲ್ಲಿ ಪತನ ಹೊಂದಿ, ನಾಶಗೊಂಡಿದ್ದವು.

ಆ್ಯಸ್ಟ್ರೋಬಾಟಿಕ್ ಸಂಸ್ಥೆಯ ಪೆರಿಜೀನ್ ಲ್ಯಾಂಡರ್ ಈ ವರ್ಷದ ಜನವರಿಯಲ್ಲಿ ವೈಫಲ್ಯ ಅನುಭವಿಸಿದ್ದು, ಚಂದ್ರನ ಮೇಲ್ಮೈಯಲ್ಲಿ ಇಳಿಯಲು ಪ್ರಯತ್ನಿಸುವ ಹಂತವನ್ನೂ ತಲುಪಿರಲಿಲ್ಲ. ಅದರಲ್ಲಿ ಇಂಧನ ಸೋರಿಕೆಯ ಕಾರಣದಿಂದ ಅದನ್ನು ಭೂಮಿಗೆ ಮರಳಿ ಕಳಿಸಬೇಕಾಯಿತು. ಅದು ಭೂಮಿಯ ವಾತಾವರಣಕ್ಕೆ ಪ್ರವೇಶಿಸಿದಾಗ, ನಾಶಗೊಂಡಿತು. ಐಎಂ-1ರ ಯಶಸ್ಸಿನೊಂದಿಗೆ, ಇಂಟ್ಯುಟಿವ್ ಮೆಷಿನ್ಸ್ ಸಂಸ್ಥೆ ಒಂದು ವಿಶಿಷ್ಟ ಗುಂಪಿಗೆ ಪ್ರವೇಶ ಪಡೆದಿದೆ. ಇದಕ್ಕೆ ಮೊದಲು, ಕೇವಲ ಸೋವಿಯತ್ ಒಕ್ಕೂಟ, ಅಮೆರಿಕಾ, ಚೀನಾ, ಭಾರತ ಮತ್ತು ಜಪಾನ್‌ಗಳ ಸರ್ಕಾರಿ ಬಾಹ್ಯಾಕಾಶ ಸಂಸ್ಥೆಗಳು ಮಾತ್ರವೇ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದ ಸಾಧನೆ ನಿರ್ಮಿಸಿದ್ದವು.

ಈ ಬಾರಿ ಒಡಿಸ್ಸಿಯಸ್ ಲ್ಯಾಂಡರ್ ಸಹ ಸುರಕ್ಷಿತವಾಗಿ ಚಂದ್ರನ ಮೇಲೆ ಇಳಿದಿರುವುದರಿಂದ, ಐಎಂ-1 ಯೋಜನೆಯ ಎರಡನೇ ಹಂತ ಆರಂಭಗೊಳ್ಳುವ ಸಮಯ ಬಂದಿದೆ. ಈ ಲ್ಯಾಂಡರ್ ತನ್ನೊಡನೆ 12 ವೈಜ್ಞಾನಿಕ ಉಪಕರಣಗಳನ್ನು ಕೊಂಡೊಯ್ದಿದ್ದು, ಅವುಗಳಲ್ಲಿ ಅರ್ಧದಷ್ಟು ನಾಸಾದ ಉದ್ದೇಶಗಳಿಗೆ ಸೇರಿದ್ದಾದರೆ, ಇನ್ನರ್ಧ ವಾಣಿಜ್ಯಿಕ ಬಳಕೆಗೆ ಸೇರಿವೆ. ಇವುಗಳಲ್ಲಿ ಕೆಲವು ಪೇಲೋಡ್‌ಗಳು, ಲ್ಯಾಂಡಿಂಗ್ ನೆರವು ನೀಡುವವು, ಮತ್ತು ಲ್ಯಾಂಡಿಂಗ್ ಪ್ರದೇಶದ ಛಾಯಾಚಿತ್ರಗಳನ್ನು ತೆಗೆಯುವ ಕ್ಯಾಮರಾಗಳಾಗಿದ್ದು, ಅವು ತಮ್ಮ ಕಾರ್ಯಗಳನ್ನು ಈಗಾಗಲೇ ಪೂರ್ಣಗೊಳಿಸಿವೆ. ಜೆಫ್ ಕೂನ್ಸ್ ಎಂಬ ಶಿಲ್ಪಿ ಸೃಷ್ಟಿಸಿರುವ 125 ಸಣ್ಣ ಪುಟ್ಟ ಶಿಲ್ಪಗಳಂತಹ ಒಂದಷ್ಟು ವಸ್ತುಗಳು ಚಂದ್ರನ ಮೇಲೆ ತಲುಪಿರುವುದೇ ಅವುಗಳ ಯಶಸ್ಸಾಗಿದೆ. ಇನ್ನು ಒಂದಷ್ಟು ಉಪಕರಣಗಳು ಚಂದ್ರನ ಸುತ್ತಮುತ್ತಲಿನ ವಸ್ತುಗಳು ಚಂದ್ರನ ಮೇಲ್ಮೈ ಪ್ರದೇಶದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎನ್ನುವುದನ್ನು ಅಧ್ಯಯನ ನಡೆಸಲಿದ್ದು, ಅವುಗಳು ಇನ್ನೂ ಕಾರ್ಯಾಚರಣೆ ಆರಂಭಿಸಬೇಕಿದೆ.

ಈ ಯೋಜನೆ ನಾಸಾದ ಕಮರ್ಷಿಯಲ್ ಲೂನಾರ್ ಪೇಲೋಡ್ ಸರ್ವಿಸಸ್ (ಸಿಎಲ್‌ಪಿಎಸ್) ಕಾರ್ಯಕ್ರಮದ ಭಾಗವಾಗಿದ್ದು, ವಿವಿಧ ಖಾಸಗಿ ಮತ್ತು ಸರ್ಕಾರಿ ವಲಯದ ಸಂಸ್ಥೆಗಳ ಜೊತೆಗಿನ ಸಹಯೋಗದಿಂದ ಖಾಸಗಿ ಕಂಪನಿಗಳಿಗೆ ಬಾಹ್ಯಾಕಾಶ ವಾಹನ ಅಭಿವೃದ್ಧಿಪಡಿಸುವ ಸಾಮರ್ಥ್ಯ ಹೆಚ್ಚಿಸಲು ನೆರವಾಗುತ್ತದೆ. ಈ ಕಾರ್ಯಕ್ರಮದಡಿ, 2024ರಲ್ಲಿ ಇನ್ನೂ ಮೂರು ಚಂದ್ರನ ಮೇಲಿಳಿಯುವ ಯೋಜನೆಗಳು ನೆರವೇರಲಿವೆ. ಅವುಗಳ ಪೈಕಿ, ಚಂದ್ರನ ದಕ್ಷಿಣ ಧ್ರುವದಿಂದ ಮಂಜುಗಡ್ಡೆಯ ರೂಪದಲ್ಲಿರುವ ನೀರನ್ನು ಸಂಗ್ರಹಿಸುವ ಇಂಟ್ಯುಟಿವ್ ಮೆಷಿನ್ಸ್ ಸಂಸ್ಥೆಯ ಮಹತ್ವಾಕಾಂಕ್ಷಿ ಯೋಜನೆಯೂ ಸೇರಿದೆ.

-ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News