ಗದುಗಿನ ಗಲ್ಲಿ ಕ್ರಿಕೆಟ್ ನಿಂದ ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಹುದ್ದೆವರೆಗೆ ಆ ಹುಡುಗನ ಪಯಣ...!

ಗದಗಿನ ಸುನಿಲ್ ಜೋಶಿ ಬಿಸಿಸಿಐನ ಆಯ್ಕೆ ಸಮಿತಿ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ.ಈ ಸಂದರ್ಭದಲ್ಲಿ ಗಲ್ಲಿ ಕ್ರಿಕೆಟ್ ನಿಂದ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ತಮ್ಮದೇ ಛಾಪು ಮೂಡಿಸಿದ ಅವರ ಪಯಣ ನಿಜಕ್ಕೂ ಎಲ್ಲರಿಗೂ ಸ್ಫೂರ್ತಿದಾಯಕ ಎನ್ನಬಹುದು.

Last Updated : Mar 5, 2020, 04:50 PM IST
ಗದುಗಿನ ಗಲ್ಲಿ ಕ್ರಿಕೆಟ್ ನಿಂದ ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಹುದ್ದೆವರೆಗೆ ಆ ಹುಡುಗನ ಪಯಣ...!  title=
Photo courtesy: Twitter

ಬೆಂಗಳೂರು: ಗದಗಿನ ಸುನಿಲ್ ಜೋಶಿ ಬಿಸಿಸಿಐನ ಆಯ್ಕೆ ಸಮಿತಿ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ.ಈ ಸಂದರ್ಭದಲ್ಲಿ ಗಲ್ಲಿ ಕ್ರಿಕೆಟ್ ನಿಂದ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ತಮ್ಮದೇ ಛಾಪು ಮೂಡಿಸಿದ ಅವರ ಪಯಣ ನಿಜಕ್ಕೂ ಎಲ್ಲರಿಗೂ ಸ್ಫೂರ್ತಿದಾಯಕ ಎನ್ನಬಹುದು.

ಅದು 1996 ರ ಸಮಯ, ಗದಗ ಆಗಿನ್ನೂ ಒಂದು ತಾಲೂಕು ಕೇಂದ್ರವಾಗಿ ಅವಿಭಜಿತ ಧಾರವಾಡ ಜಿಲ್ಲೆ ಭಾಗವಾಗಿತ್ತು. ಮುಂದೆ ಈ ಸಣ್ಣ ತಾಲೂಕಿನ ಕೇಂದ್ರದಿಂದಲೇ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಸದ್ದು ಮಾಡಿದ ಅಪ್ಪಟ ಪ್ರತಿಭೆ ಎಂದರೆ ಅದು ಸುನಿಲ್ ಜೋಶಿ ಎನ್ನಬಹುದು. ಹಿಂದೂಸ್ತಾನಿ ಸಂಗೀತ ದಿಗ್ಗಜ ಹಾಗೂ ಭಾರತ ರತ್ನ ಪುರಸ್ಕೃತ ಭೀಮಸೇನ ಜೋಷಿಯವರ ಸಂಬಂಧಿಯೂ ಆಗಿರುವ ಸುನಿಲ್ ಜೋಷಿ ಮುಂದೆ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದೇ ರೋಚಕ ಸಂಗತಿ.

ಸಾಮಾನ್ಯವಾಗಿ ಕರ್ನಾಟಕದ ರಣಜಿ ತಂಡದಿಂದ ಹಿಡಿದು ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ದಕ್ಷಿಣ ಕರ್ನಾಟಕದ ಆಟಗಾರರೇ ಪ್ರಾಬಲ್ಯ ಮೆರೆಯುತ್ತಿದ್ದ ಸಂದರ್ಭದಲ್ಲಿ ಗದುಗಿನ ಆ ಹುಡುಗ ಛಲ ಬಿಡದೆ ನಿರಂತರ ಪರಿಶ್ರಮದಿಂದ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದ. ಆಗ ಉತ್ತರ ಕರ್ನಾಟಕದ ಭಾಗದಲ್ಲಿ ಹುಬ್ಬಳ್ಳಿ ನೆಹರು ಸ್ಟೇಡಿಯಂ ಹಲವಾರು ರಣಜಿ ಪಂದ್ಯಗಳಿಗೆ ಆತಿಥ್ಯ ವಹಿಸುತ್ತಿತ್ತು, ಇಂತಹ ಸಂದರ್ಭದಲ್ಲಿ  ಗದುಗಿನಿಂದ ಪ್ರತಿದಿನ ರೈಲಿನ ಮೂಲಕ 64 ಕಿಲೋಮೀಟರ್ ದೂರದಲ್ಲಿರುವ ಹುಬ್ಬಳ್ಳಿಗೆ ಕ್ರಿಕೆಟ್ ಅಭ್ಯಾಸ ಮಾಡಲು ಸುನಿಲ್ ಜೋಷಿ ತೆರಳುತ್ತಿದ್ದರು. ಪುಟ್ಬಾಲ್ ಪ್ರೇಮಿಯಾಗಿ ತಂದೆ ಭಂಡಾಚಾರ್ಯ ಜೋಷಿ, ಜೊತೆಗೆ ಕ್ರಿಕೆಟರ್ ಆಗಿದ್ದ ಸುನಿಲ್ ಸಹೋದರ ಅಶೋಕ್ ಅವರ ಸಲಹೆ ಮೆರೆಗೆ ಬಲಗೈ ವೇಗದ ಬೌಲರ್ ಆಗಿದ್ದ ಜೋಷಿ ಎಡಗೈ ಸ್ಪಿನ್ ಬೌಲರ್ ಆಗಿ ಪರಿವರ್ತನೆಯಾದರು. ಈ ಬದಲಾವಣೆ ಒಂದರ್ಥದಲ್ಲಿ ಸುನಿಲ್ ಜೋಶಿಗೆ ಫಲ ನೀಡಿತು ಎಂದೇ ಹೇಳಬಹುದು.

ಮುಂದೆ ಮುನ್ನಾ ಗುಳೇದಗುಡ್ಡ ಅವರ ನೆರವಿನಿಂದ ಜೋಷಿ ಕಾಲಾಂತರದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದರು.1992 ರ ಸಂದರ್ಭದಲ್ಲಿ ಅಂಡರ್-15 ಟೂರ್ನಾಮೆಂಟ್ ಗಾಗಿ ಅಭ್ಯಾಸ ನಡೆಸುತ್ತಿದ್ದ ಜೋಶಿ ಬೌಲಿಂಗ್ ಶೈಲಿಯನ್ನು ಗಮನಿಸಿದ ಸಯ್ಯದ್ ಕಿರ್ಮಾನಿ ಈ ಹುಡುಗನ ಮೇಲೆ ಕಣ್ಣಿಟ್ಟಿರಿ' ಇತನಿಗೆ ಒಳ್ಳೆಯ ಭವಿಷ್ಯವಿದೆ' ಎಂದು ಹೇಳಿದ್ದರು. ಅವರು ಹೇಳಿದಂತೆ ಮುಂದೆ ಆ ಭವಿಷ್ಯ ಸುಳ್ಳಾಗಲಿಲ್ಲ.1992 ರಲ್ಲಿ ಹುಬ್ಬಳ್ಳಿಯ ನೆಹರು ಸ್ಟೇಡಿಯಂನಲ್ಲಿ ಹೈದರಾಬಾದ್ ವಿರುದ್ಧ ನಡೆದ ರಣಜಿ ಪಂದ್ಯದ ಮೂಲಕ ದೇಶಿ ಕ್ರಿಕೆಟ್ ಗೆ ಸುನಿಲ್ ಜೋಷಿ ಪಾದಾರ್ಪಣೆ ಮಾಡಿದರು. ಆ ಪಂದ್ಯದಲ್ಲಿ ಸುನಿಲ್ ಜೋಷಿ 5 ಭರ್ಜರಿ ಸಿಕ್ಸರ್  86 ರನ್ ಗಳಿಸುವ ಮೂಲಕ ಅಜೇಯರಾಗಿ ಉಳಿದಿದ್ದರು.

ಇದಾದ ನಂತರ 1994 ರಲ್ಲಿ ಬೆಂಗಳೂರಿನಲ್ಲಿ ಮುಂಬೈ ವಿರುದ್ಧ ನಡೆದ ಪಂದ್ಯದಲ್ಲಿ ಕರ್ನಾಟಕ 160 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು ಈ ಸಂದರ್ಭದಲ್ಲಿ ಬ್ಯಾಟಿಂಗ್ ಆರಂಭಿಸಿದ ಸುನಿಲ್ ಜೋಷಿ 119 ರನ್ ಗಳಿಸುವ ಮೂಲಕ ತಮ್ಮ ಮೊದಲ ರಣಜಿ ಶತಕವನ್ನು ಗಳಿಸಿದರು ಅಷ್ಟೇ ಅಲ್ಲದೆ 228 ರನ್ ಗಳ ದಾಖಲೆ ಜೊತೆಯಾಟಕ್ಕೆ ಸಾಕ್ಷಿಯಾದರು.ಇನ್ನೊಂದು ವಿಶೇಷವೆಂದರೆ ಇದೇ ಪಂದ್ಯದಲ್ಲಿ ಸುನಿಲ್ ಜೋಷಿ 9 ವಿಕೆಟ್ ಗಳನ್ನು ಗಳಿಸಿದರು. ಈ ಸಂದರ್ಭದಲ್ಲಿ ವಿಶ್ರಾಂತಿ ಕೊಠಡಿಯಲ್ಲಿ ಅವರು ವಿರಾಮಿಸುತ್ತಿದ್ದಾಗ ರವಿಶಾಸ್ತ್ರಿ ಬಂದು ಜೋಷಿಗೆ ' ಒಂದು ವೇಳೆ ನೀನು ರಾಷ್ಟ್ರೀಯ ತಂಡದಲ್ಲಿ ಆಡದೇ ಹೋದಲ್ಲಿ ಹೆಚ್ಚು ನಿರಾಸೆಗೊಳ್ಳುವ ವ್ಯಕ್ತಿ ನಾನಾಗಿರುತ್ತೇನೆ' ಎಂದು ಹೇಳಿದರು.

ಅದು 1996 ಗದುಗಿನ ಕೆ.ಎಲ್.ಇ ಸಂಸ್ಥೆ ಜೆಟಿ ಕಾಲೇಜಿನಲ್ಲಿ ಎರಡನೇ ವರ್ಷದ ಬಿಎ ಪರೀಕ್ಷೆಗೆ ಕುಳಿತಿದ್ದರು, ಈ ಸಂದರ್ಭದಲ್ಲಿ ಅವರು ಇಂಗ್ಲೆಂಡ್ ಪ್ರವಾಸದ ಭಾರತ ತಂಡಕ್ಕೆ ಆಯ್ಕೆಯಾದರು. ನಂತರ ಅವರು 69 ಏಕದಿನ ಪಂದ್ಯ ಹಾಗೂ 15 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದರು.ಇದಲ್ಲದೆ ಅವರು 160 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ.

ತಮ್ಮ ಕ್ರಿಕೆಟ್ ವೃತ್ತಿ ಜೀವನದ ನಂತರವೂ ಕೂಡ ಸುನಿಲ್ ಜೋಷಿ ಪ್ರಮುಖ ತಂಡಗಳ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಹೈದರಾಬಾದ್ ರಣಜಿ ತಂಡ, ಜಮ್ಮು ಕಾಶ್ಮೀರ ರಣಜಿ ತಂಡ, ಅಷ್ಟೇ ಅಲ್ಲದೆ  ಒಮನ್ ಕ್ರಿಕೆಟ್ ತಂಡಕ್ಕೆ ಸ್ಪಿನ್ ಬೌಲಿಂಗ್ ಕೋಚ್, ಅಸ್ಸಾಂ ತಂಡಕ್ಕೆ ಕೋಚ್, ಬಾಂಗ್ಲಾದೇಶದ ತಂಡಕ್ಕೂ ಅವರು ಬೌಲಿಂಗ್ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಇದೆಲ್ಲದರ ನಡುವೆ ಈಗ ಬಿಸಿಸಿಐ ಭಾರತೀಯ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥರಾಗಿದ್ದಾರೆ.

 

 

 

 

 

 

 

 

 

Trending News