ನವದೆಹಲಿ: ಟೀಂ ಇಂಡಿಯಾದ ಆರಂಭಿಕ ಆಟಗಾರ, ಹಿಟ್ ಮ್ಯಾನ್ ರೋಹಿತ್ ಶರ್ಮಾ(Rohit Sharma) ಶನಿವಾರ (ಸೆ.5) ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಅವರ ಹೆಸರಿನಲ್ಲಿದ್ದ ವಿಶಿಷ್ಟ ದಾಖಲೆಯೊಂದನ್ನು ಮುರಿದ ಸಾಧನೆ ಮಾಡಿದ್ದಾರೆ. ಹೌದು, ಇಂಗ್ಲೆಂಡ್ ನಲ್ಲಿ ಅತಿಹೆಚ್ಚು ಅಂತಾರಾಷ್ಟ್ರೀಯ ಶತಕಗಳನ್ನು ಬಾರಿಸಿದ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನು ರೋಹಿತ್ ಶರ್ಮಾ ಹಿಂದಿಕ್ಕಿದ್ದಾರೆ.
ಕೆನ್ನಿಂಗ್ಟನ್ ಓವಲ್(Oval Test)ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯ(4th Test Match)ದಲ್ಲಿ ರೋಹಿತ್ ಈ ಸಾಧನೆ ಮಾಡಿದರು. ಇಂಗ್ಲೆಂಡ್ ಪ್ರವಾಸದಲ್ಲಿ ತಮ್ಮ ಮೊದಲ ಟೆಸ್ಟ್ ಶತಕ ಭಾರಿಸುವ ಮೂಲಕ ಹಿಟ್ ಮ್ಯಾನ್ ಸಂಭ್ರಮಿಸಿದರು. ಆಂಗ್ಲರ ವಿರುದ್ಧ ಮೊದಲ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಭಾರತ 61.3 ಓವರ್ ಗಳಲ್ಲಿ ಕೇವಲ 191 ರನ್ ಗಳಿಗೆ ಸರ್ವಪತನ ಕಂಡಿತ್ತು. ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 84 ಓವರ್ ಆಡಿ 290 ರನ್ ಗಳಿಸಿ, 99 ರನ್ ಗಳ ಮುನ್ನಡೆ ಕಾಯ್ದುಕೊಂಡಿತ್ತು.
💯 for HITMAN
First away Test ton for @ImRo45 👏👏
He also breaches the 3K Test-run mark.#TeamIndia #ENGvIND pic.twitter.com/KOxvtHQFGB
— BCCI (@BCCI) September 4, 2021
ಇದನ್ನೂ ಓದಿ: IPL 15th Season Update: IPL ಹೊಸ ತಂಡಗಳಿಗಾಗಿ Tender ಜಾರಿ, BCCI ಷರತ್ತುಗಳೇನು? ಇಲ್ಲಿದೆ ವರದಿ
ಇದಕ್ಕುತ್ತರವಾಗಿ 2ನೇ ಇನ್ನಿಂಗ್ಸ್ ಆರಂಭಿಸಿದ ಭಾರತ ಸದ್ಯ 92 ಓವರ್ ಆಡಿದ್ದು, 3 ವಿಕೆಟ್ ಕಳೆದುಕೊಂಡು 270 ರನ್ ಗಳಿಸಿದೆ. 3ನೇ ದಿನದಾಟದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ರೋಹಿತ್ ಶರ್ಮಾ(Rohit Sharma) ಆಂಗ್ಲ ಬೌಲರ್ ಗಳ ಬೆವರಿಳಿಸಿದರು. 256 ಎಸೆತಗಳನ್ನು ಎದುರಿಸಿದ ಹಿಟ್ ಮ್ಯಾನ್ 1 ಸಿಕ್ಸರ್, 14 ಬೌಂಡರಿ ಇದ್ದ 127 ರನ್ ಗಳಿಸುವ ಮೂಲಕ ಭರ್ಜರಿ ಶತಕ ಭಾರಿಸಿದರು. ಈ ಸಾಧನೆಯೊಂದಿಗೆ ರೋಹಿತ್ ಇಂಗ್ಲೆಂಡಿನಲ್ಲಿ ಒಟ್ಟು 9 ಶತಕ ಭಾರಿಸಿದ ಸಾಧನೆ ಮಾಡಿದರು. ಈ ಹಿಂದೆ ರಾಹುಲ್ ದ್ರಾವಿಡ್(Rahul Dravid) ಆಂಗ್ಲರ ನೆಲದಲ್ಲಿ 8 ಶತಕ ಗಳಿಸಿದ ಸಾಧನೆ ಮಾಡಿದ್ದರು. ಇದೀಗ ಗೋಡೆ ಹೆಸರಿನಲ್ಲಿದ್ದ ದಾಖಲೆಯನ್ನು ರೋಹಿತ್ ಅಳಸಿ ಹಾಕಿದ್ದಾರೆ. ವಿಶೇಷವೆಂದರೆ ಇಂಗ್ಲೆಂಡ್ ನಲ್ಲಿ ರೋಹಿತ್ ಗಳಿಸಿರುವ ಕೊನೆಯ 9 ಶತಕಗಳ ಪೈಕಿ 8 ಶತಕಗಳು 2018ರ ಆರಂಭದಿಂದ ಬಂದಿವೆ.
ಪ್ರವಾಸಿ ಕ್ರಿಕೆಟಿಗರ ಪೈಕಿ ಕ್ರಿಕೆಟ್ ದಂತಕಥೆ ಡೊನಾಲ್ಡ್ ಬ್ರಾಡ್‌ಮನ್(Don Bradman)ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು (11) ಶತಕ ಭಾರಿಸಿದ ದಾಖಲೆ ಹೊಂದಿದ್ದಾರೆ. ಈ ಮಧ್ಯೆ ರೋಹಿತ್ ಇಂಗ್ಲೆಂಡ್‌ನಲ್ಲಿ ಕ್ರಿಕೆಟ್ ನ ಎಲ್ಲಾ 3 ಫಾರ್ಮ್ಯಾಟ್‌ಗಳಲ್ಲಿ ಶತಕಗಳನ್ನು ಬಾರಿಸಿದ ಮೊದಲ ಪ್ರವಾಸಿ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಚೇತೇಶ್ವರ್ ಪೂಜಾರ ಜೊತೆಗೆ ರೋಹಿತ್ 2ನೇ ವಿಕೆಟ್ ಗೆ 153 ರನ್ ಗಳ ಜೊತೆಯಾಟವಾಡಿ ತಂಡಕ್ಕೆ ನೆರವಾದರು. ಸದ್ಯ ವಿರಾಟ್ ಕೊಹ್ಲಿ(22) ಮತ್ತು ರವೀಂದ್ರ ಜಡೇಜಾ(9) ಕ್ರಿಸ್ ನಲ್ಲಿದ್ದು, 4ನೇ ಟೆಸ್ಟ್ ನಲ್ಲಿ ಭಾರತ 171 ರನ್ ಗಳ ಮುನ್ನಡೆ ಸಾಧಿಸಿದೆ.
ಇದನ್ನೂ ಓದಿ: ತಾಲಿಬಾನ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಪಾಕ್ ಕ್ರಿಕೆಟಿಗ ಶಾಹಿದ್ ಅಫ್ರೀದಿ..!
ಪ್ರವಾಸಿ ಇಂಗ್ಲೆಂಡ್(England) ವಿರುದ್ಧದ ಸರಣಿ ಸದ್ಯ 1-1ರಲ್ಲಿ ಸಮಬಲಗೊಂಡಿದೆ. ಮೊದಲ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದ್ದರೆ, ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಭಾರತ ಗೆಲುವು ಸಾಧಿಸಿತ್ತು. ಲೀಡ್ಸ್ ಮೈದಾನದಲ್ಲಿ ಇಂಗ್ಲೆಂಡ್ ಭರ್ಜರಿ ಗೆಲುವು ಸಾಧಿಸುವ ಮೂಲಕ ಸರಣಿ ಸಮಬಲ ಮಾಡಿಕೊಂಡಿತ್ತು. 4ನೇ ಟೆಸ್ಟ್ ಪಂದ್ಯ ಗೆದ್ದು ಆಂಗ್ಲರ ಮೇಲೆ ಸವಾರಿ ಮಾಡಲು ವಿರಾಟ್ ಕೊಹ್ಲಿ ಪಡೆ ಹವಣಿಸುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.