ವಿಶ್ವಕಪ್ ಕ್ರಿಕೆಟ್‌ನ ಹಾಲಿ ಚಾಂಪಿಯನ್ನರು ಭಾರತದ ಮುಂದೆ ಚೆಲ್ಲಾಪಿಲ್ಲಿ!

ಪಾಯಿಂಟ್ ಪಟ್ಟಿಯಲ್ಲಿ ಸತತ ಎರಡು ಗೆಲುವು ದಾಖಲಿಸಿರುವ ಭಾರತ ಒಟ್ಟು ನಾಲ್ಕು ಅಂಕಗಳನ್ನು ಸಂಪಾದಿಸಿದೆ. 

Last Updated : Jun 10, 2019, 09:39 AM IST
ವಿಶ್ವಕಪ್ ಕ್ರಿಕೆಟ್‌ನ ಹಾಲಿ ಚಾಂಪಿಯನ್ನರು ಭಾರತದ ಮುಂದೆ ಚೆಲ್ಲಾಪಿಲ್ಲಿ! title=
Image Credits: Twitter/@BCCI

ಲಂಡನ್:  ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಭಾನುವಾರ ಭಾರತ ತಂಡವು ಬಲಾಢ್ಯ ಆಸ್ಟ್ರೇಲಿಯಾ ವಿರುದ್ಧ 36ರನ್ ಗಳ ಅಂತರದ ಗೆಲುವು ದಾಖಲಿಸಿತು. ಈ ಮೂಲಕ ಭಾರತ ತಂಡವು ಸತತ ಎರಡನೇ ಗೆಲುವು ದಾಖಲಿಸಿತು. ಇದಕ್ಕೂ ಮೊದಲು ದಕ್ಷಿಣ ಆಫ್ರಿಕಾ ವಿರುದ್ದ ನಡೆದ ಮೊದಲ ಪಂದ್ಯದಲ್ಲೂ  ಭಾರತವು ವಿಜಯ ಸಾಧಿಸಿತ್ತು.

ಪಾಯಿಂಟ್ ಪಟ್ಟಿಯಲ್ಲಿ ಸತತ ಎರಡು ಗೆಲುವು ದಾಖಲಿಸಿರುವ ಭಾರತ ಒಟ್ಟು ನಾಲ್ಕು ಅಂಕಗಳನ್ನು ಸಂಪಾದಿಸಿದೆ. ಸತತ ಎರಡು ಗೆಲುವಿನಿಂದ ಬೀಗುತ್ತಿದ್ದ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಮೊದಲ ಸೋಲಿನಿಂದ ಆಘಾತಕ್ಕೊಳಗಾಗಿದೆ. ಜೊತೆಗೆ ಆಸೀಸ್ ತಂಡವು ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ   352 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಶಿಖರ್ ಧವನ್  ಅವರು ಈ ವಿಶ್ವಕಪ್ ನಲ್ಲಿ ಮತ್ತೊಂದು ಭರ್ಜರಿ ಶತಕ (117) ಬಾರಿಸಿದರು. ರೋಹಿತ್ ಶರ್ಮಾ (57) ಉತ್ತಮ ನೆರವು ನೀಡಿದರು. ನಾಯಕ ವಿರಾಟ್ ಕೊಹ್ಲಿ (82) ಹಾಗೂ ಹಾರ್ದಿಕ್ ಪಾಂಡ್ಯ (48) ಭಾರತದ ಮೊತ್ತ ಮೂನ್ನೂರೈವತ್ತರ ಗಡಿ ದಾಟಲು ಸಹಕಾರಿಯಾದರು.

ತುಸು ಕಷ್ಟವಾಗಿದ್ದ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ, ಡೇವಿಡ್ ವಾರ್ನರ್ (56), ಸ್ಟೀವ್ ಸ್ಮಿತ್ (69) ಹಾಗೂ ಅಲೆಕ್ಸ್ ಕ್ಯಾರಿ (55*) ಫೈಟ್ ಬ್ಯಾಕ್ ಅರ್ಧಶತಕದ ಹೊರತಾಗಿಯೂ 316 ರನ್‌ಗಳಿಸುವಷ್ಟರಲ್ಲಿ ಸಾಕುಸಾಕಾಗಿ ಹೋಯಿತು. ಆಸ್ಟ್ರೇಲಿಯಾದ ಆರಂಭ ತೀರಾ ನಿರಾಶಾದಾಯಕ ಆಗಿರಲಿಲ್ಲ.‌ ಹಾರ್ದಿಕ್ ಪಾಂಡ್ಯ ಎಸೆದ ಇನ್ನಿಂಗ್ಸ್‌ನ 10ನೇ ಓವರ್‌ನಲ್ಲಿ19 ರನ್ ಚಚ್ಚುವ ಮೂಲಕ ತಂಡದ ಮೊತ್ತ 48 ರನ್ ತಲುಪಿತು. ಆದರೆ ಈ ಜೋಡಿ ಗಡಿಬಿಡಿ ಮಾಡಿಕೊಂಡ ಕಾರಣಕ್ಕೆ ಹೆಚ್ಚು ಹೊತ್ತು  ಸ್ಕ್ರೀಜ್ ನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ. ವಾರ್ನರ್ ಜತೆಗಿನ ಹೊಂದಾಣಿಕೆ ಕೊರತೆಯಿಂದಾಗಿ ಫಿಂಚ್ ರನೌಟ್ ‌ಆದರು. 35 ಎಸೆತಗಳನ್ನು ಎದುರಿಸಿದ ಫಿಂಚ್ ಮೂರು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 36 ರನ್ ಗಳಿಸಿದರು.  ಮೊದಲ ವಿಕೆಟ್‌ಗೆ 61 ರನ್‌ಗಳ ಜತೆಯಾಟ ಆಸ್ಟ್ರೇಲಿಯಾಕ್ಕೆ ಸಿಕ್ಕಿತ್ತು. ಇದಾದ ಮೇಲೆ ವಾರ್ನರ್ ರಕ್ಷಣಾತ್ಮಕ ಆಟಕ್ಕೆ ಮೊರೆಹೋದರು. ಇದರಿಂದಾಗಿ ತದನಂತರದಲ್ಲಿ ಆಸೀಸ್ ಹಿನ್ನಡೆ ಅನುಭವಿಸಬೇಕಾಯಿತು. ವಾರ್ನರ್ ಅರ್ಧಶತಕ ಗಳಿಸಲು 76 ಎಸೆತ ಎದುರಿಸಿದರು. ಈ ಮಧ್ಯೆ ರನ್ ಏರಿಸುವ ಭರದಲ್ಲಿ ವಿಕೆಟ್ ಕಳೆದುಕೊಳ್ಳಬೇಕಾಯಿತು. ಒಟ್ಟು 84 ಎಸೆತಗಳನ್ನು ಎದುರಿಸಿದ ವಾರ್ನರ್ ಐದು ಬೌಂಡರಿಗಳಿಂದ 56 ರನ್ ಗಳಿಸಿದರು.

ಬಾಲ್ ಟ್ಯಾಂಪರಿಂಗ್ ಪ್ರಕರಣದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿರುವ ಸ್ಮಿತ್  60 ಎಸೆತಗಳಲ್ಲೇ ಅರ್ಧಶತಕ ಸಾಧನೆ ಮಾಡಿರು. ಈ ನಡುವೆ ಉತ್ತಮವಾಗಿ ಆಡುತ್ತಿದ್ದ ಖವಾಜ ವಿಕೆಟ್ ನಷ್ಟವಾಯಿತು. 39 ಎಸೆತಗಳನ್ನು ಎದುರಿಸಿದ ಖವಾಜ 4 ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 42 ರನ್ ಗಳಿಸಿದರು. ಆಮೇಲೆ ಕ್ರೀಸಿಗೆ ಬಂದ ಗ್ಲೆನ್ ಮ್ಯಾಕ್ಸ್‌ವೆಲ್ ಬಿರುಸಿನಿಂದ ರನ್  ಮಾಡಲಾರಂಭಿಸಿದರು. ಆಗ ಭಾರತದ ಪಾಳೇಯದಲ್ಲಿ ಆತಂಕ ಮೂಡಿದ್ದು ಸುಳ್ಳಲ್ಲ. ಆದರೆ ಇನ್ನಿಂಗ್ಸ್‌ನ 40ನೇ ಓವರ್‌ನಲ್ಲಿ ಸೆಟ್ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಹಾಗೂ ಮಾರ್ಕಸ್ ಸ್ಟೋಯ್ನಿಸ್ (0) ಹೊರದಬ್ಬಿದ ಭುವನೇಶ್ವರ್ ಕುಮಾರ್ ಡಬಲ್ ಆಘಾತ ನೀಡಿದರು. ಇದರಿಂದ 40 ಓವರ್‌ಗಳಲ್ಲಿ ಆಸೀಸ್ 238 ರನ್‌ಗಳಿಗೆ ಐದು ವಿಕೆಟುಗಳನ್ನು ಕಳೆದುಕೊಂಡಿತು. 70 ಎಸೆತಗಳನ್ನು ಎದುರಿಸಿದ ಸ್ಮಿತ್ 5ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 69 ರನ್ ಗಳಿಸಿದರು.

ಬೆನ್ನಲ್ಲೇ ಗ್ಲೆನ್ ಮ್ಯಾಕ್ಸ್‌ವೆಲ್‌ ಅವರನ್ನು ಚಹಲ್ ಹೊರದಬ್ಬಿದರು. 14 ಎಸೆತಗಳಲ್ಲಿ  ಮ್ಯಾಕ್ಸ್‌ವೆಲ್ 5 ಬೌಂಡರಿಗಳಿಂದ 28 ರನ್ ಗಳಿಸಿದರು. ಆಗ ಭಾರತದ‌ ಮೊಗ ಮತ್ತೆ ಅರಳಿತು. ಗೆದ್ದೇ ಬಿಟ್ಟೆವು ಎನ್ನುವಷ್ಟರಲ್ಲಿ  ಆಸೀಸ್ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಪಂದ್ಯಕ್ಕೆ ಹೆಚ್ಚಿನ ರೋಚಕತೆ ತಂದುಕೊಟ್ಟರು. ಅವರಿಗೆ  ನೈಲ್‌ (4) ಹಾಗೂ ಪ್ಯಾಟ್ ಕಮಿನ್ಸ್‌ರಿಂದ (8) ಹೆಚ್ಚಿನ ಬೆಂಬಲ ಸಿಗಲಿಲ್ಲ. ಕ್ಯಾರಿ 25 ಎಸೆತಗಳಲ್ಲೇ ಅರ್ಧಶತಕ ಸಾಧನೆ ಮಾಡಿದರು. ಆದರೂ ಗೆಲುವಿನ ದಡ ಸೇರಿಸಲಾಗಲಿಲ್ಲ. 35 ಎಸೆತಗಳನ್ನು ಎದುರಿಸಿದ ಕ್ಯಾರಿ ಐದು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 55 ರನ್ ಗಳಿಸಿ ಅಜೇಯರಾಗುಳಿದರು. 50 ಓವರ್‌ಗಳಲ್ಲಿ ಆಸ್ಟ್ರೇಲಿಯಾ 316 ರನ್‌ಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿತು.

Trending News