ವಿಎಲ್ಸಿಸಿ ಫೆಮಿನಾ ಮಿಸ್ ಇಂಡಿಯಾದ ಗ್ರ್ಯಾಂಡ್ ಫಿನಾಲೆಯಲ್ಲಿ ಕರ್ನಾಟಕದ ಸಿನಿ ಶೆಟ್ಟಿ ಅವರು ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2022 ಪ್ರಶಸ್ತಿ ವಿಜೇತರಾಗಿದ್ದಾರೆ. ಈಕೆಗೆ ಬಾಲಿವುಡ್ನ ಸೂಪರ್ಸ್ಟಾರ್ ನಟಿ ಪ್ರಿಯಾಂಕ ಚೋಪ್ರಾ ಪ್ರೇರಣೆಯಾಗಿದ್ದಾರೆ. ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ನಲ್ಲಿ ನಡೆದ ಸಮಾರಂಭದಲ್ಲಿ ರಾಜಸ್ಥಾನದ ರೂಬಲ್ ಶೇಖಾವತ್ ಫೆಮಿನಾ ಮಿಸ್ ಇಂಡಿಯಾ 2022 ರ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದು, ಉತ್ತರ ಪ್ರದೇಶದ ಶಿನಾತಾ ಚೌಹಾನ್ ಅವರು ಫೆಮಿನಾ ಮಿಸ್ ಇಂಡಿಯಾ 2022 ಎರಡನೇ ರನ್ನರ್ ಅಪ್ ಆಗಿದ್ದಾರೆ
ಸಿನಿ ಶೆಟ್ಟಿ ಮುಂಬೈನಲ್ಲಿ ಜನಿಸಿದ್ದು, ಪ್ರಸ್ತುತ ಸಿಎಫ್ಎ ವೃತ್ತಿಪರ ಕೋರ್ಸ್ ಮಾಡುತ್ತಿದ್ದಾರೆ. ನೃತ್ಯಗಾರ್ತಿಯಾದ ಸಿನಿ ತಮ್ಮ ಮೋಹಕತೆಯಿಂದಲೇ ಜನಮನ ಗೆದ್ದಿದ್ದಾರೆ.
ಸಾಂಪ್ರದಾಯಿಕ ಕುಟುಂಬದಿಂದ ಬಂದ ಸಿನಿ ಶೆಟ್ಟಿ, ಈ ಸ್ಥಾನಕ್ಕೆ ಬರಲು ಕಷ್ಟಪಟ್ಟಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. "ಪ್ರಪಂಚವು ಮಹಿಳೆಯ ಮೌಲ್ಯವನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ವ್ಯಾಖ್ಯಾನಿಸಲು ಪ್ರಯತ್ನಿಸುತ್ತದೆ. ಅದಕ್ಕೆ ನನ್ನದೇ ಆದ ಅರ್ಥವನ್ನು ಕಂಡುಕೊಳ್ಳಲು ನಾನು ಮುಂದಾಗಿದ್ದೇನೆ. ಆ ಮೌಲ್ಯಗಳಿಂದ ಹೊರಗುಳಿಯುವುದು ಮತ್ತು ನನ್ನ ಸ್ಥಾನವನ್ನು ಕಂಡುಕೊಳ್ಳುವುದು ಒಂದು ಸವಾಲಾಗಿತ್ತು. ವೃತ್ತಿಪರ ಮೌಲ್ಯಕ್ಕೆ ಸಂಬಂಧಿಸಿದಂತೆ ನನ್ನನ್ನು ಒಂದು ಚೌಕಟ್ಟಿನೊಳಗೆ ಹಾಕಿದಂತೆ ಭಾಸವಾಗುತ್ತಿತ್ತು. ಇದೀಗ ಅವೆಲ್ಲದರಿಂದ ಹೊರಬಂದು ಈ ಮಟ್ಟ ತಲುಪಲು ಸಾಧ್ಯವಾಗಿದೆ" ಎಂದರು.
21 ವರ್ಷದ ಸಿನಿಶೆಟ್ಟಿ, ಭರತನಾಟ್ಯ ಕಲಾವಿದೆಯೂ ಹೌದು. ತಮ್ಮ 4ನೇ ವಯಸ್ಸಿನಲ್ಲಿ ನೃತ್ಯದ ಕಡೆ ಒಲವು ತೋರಿಸಿದ ಅವರು 14ನೇ ವಯಸ್ಸಿನಲ್ಲಿ ರಂಗಪ್ರವೇಶ ಮಾಡಿದರು.
ಮಿಸ್ ಇಂಡಿಯಾ 2022 ಉಪ ಸ್ಪರ್ಧೆಗಳಲ್ಲಿ ಮಿಸ್ ಟ್ಯಾಲೆಂಟ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ನಟರಾದ ನೇಹಾ ಧೂಪಿಯಾ, ಡಿನೋ ಮೋರಿಯಾ, ಮಲೈಕಾ ಅರೋರಾ, ವಿನ್ಯಾಸಕರಾದ ರೋಹಿತ್ ಗಾಂಧಿ ಮತ್ತು ರಾಹುಲ್ ಖನ್ನಾ, ನೃತ್ಯ ನಿರ್ದೇಶಕ ಶಿಯಾಮಕ್ ದಾವರ್ ಮತ್ತು ಮಾಜಿ ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್ ತೀರ್ಪುಗಾರರ ಸಮಿತಿಯಲ್ಲಿದ್ದರು.
ಭಾನುವಾರ ನಡೆದ ವಿಎಲ್ಸಿಸಿ ಫೆಮಿನಾ ಮಿಸ್ ಇಂಡಿಯಾದ ಗ್ರ್ಯಾಂಡ್ ಫಿನಾಲೆಯಲ್ಲಿ ಕರ್ನಾಟಕದ ಸಿನಿ ಶೆಟ್ಟಿ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2022 ಪ್ರಶಸ್ತಿ ಗೆದ್ದಿದ್ದಾರೆ. ಇವರು ಮುಂಬೈನಲ್ಲಿ ಜನಿಸಿದರೂ ಸಹ ಕರ್ನಾಟಕ ಮೂಲದವರು.