ಜೂನ್ 21ರಂದು ನಡೆಯಿರುವ ಅಂತಾರಾಷ್ಟ್ರೀಯ ಯೋಗ ದಿನಕ್ಕೂ ಮುನ್ನ ರಾಂಚಿಯಲ್ಲಿ ಸಕಲ ಸಿದ್ಧತೆಗಳೂ ಭರದಿಂದ ಸಾಗಿವೆ.
ರಾಂಚಿ: ಜೂನ್ 21ರಂದು ನಡೆಯಿರುವ ಅಂತಾರಾಷ್ಟ್ರೀಯ ಯೋಗ ದಿನಕ್ಕೂ ಮುನ್ನ ರಾಂಚಿಯಲ್ಲಿ ಸಕಲ ಸಿದ್ಧತೆಗಳೂ ಭರದಿಂದ ಸಾಗಿವೆ. ಇಂದಿನಿಂದ ಜಿಲ್ಲೆಯ ಪ್ರತಿ ವಿಭಾಗದಲ್ಲೂ ತರಬೇತಿ ಶಿಬಿರಗಳನ್ನು ಆರಂಭಿಸಲಾಗಿದೆ.
ಯೋಗ ದಿನಾಚರಣೆಗೂ ಮುನ್ನ ರಾಜಭವನದಲ್ಲಿ ಆಯೋಜಿಸಲಾಗಿದ್ದ ಪೂರ್ವಭಾವಿ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ದ್ರೌಪದಿ ಮುರುಮು, ಮುಖ್ಯಮಂತ್ರಿ ರಘುವರ್ ದಾಸ್, ಉನ್ನತ ಅಧಿಕಾರಿಗಳೂ ಸೇರಿದಂತೆ ಒಂದು ಸಾವಿರ ಮಂದಿ ಯೋಗಾಭ್ಯಾಸ ಮಾಡಿದರು. ಯೋಗಾಭ್ಯಾಸದಲ್ಲಿ ಪ್ರಾಣಾಯಾಮ, ವಜ್ರಾಸನ ಸೇರಿದಂತೆ ಒಟ್ಟು 13 ಆಸನಗಳನ್ನು ಅಭ್ಯಾಸ ಮಾಡಲಾಯಿತು.
ಜೂನ್ 21ರಂದು ನಡೆಯುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಮುಖ್ಯ ಕಾರ್ಯಕ್ರಮ ಜಾರ್ಖಂಡ್ ರಾಜ್ಯದ ರಾಜಧಾನಿ ರಾಂಚಿಯಲ್ಲಿ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಈ ಕಾರ್ಯಕರ್ಮದಲ್ಲಿ ಭಾಗಿಯಾಗಿ ಜನತೆಯೊಂದಿಗೆ ಯೋಗಾಭ್ಯಾಸ ಮಾಡಲಿದ್ದಾರೆ. ಈಗಾಗಲೇ ಕಾರ್ಯಕ್ರಮಕ್ಕೆ ಪೂರ್ವ ಸಿದ್ಧತೆ ಆರಂಭವಾಗಿದ್ದು, ಪ್ರಧಾನಿಯೊಂದಿಗೆ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜನಸಾಮಾನ್ಯರ ನೋಂದಣಿ ಪ್ರಕ್ರಿಯೆ ಕೂಡ ಚಾಲನೆಯಲ್ಲಿದೆ.
ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮವನ್ನು ರಾಂಚಿಯಲ್ಲಿ ಆಯೋಜಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಮುಖ್ಯಮಂತ್ರಿ ಮತ್ತು ರಾಜ್ಯಪಾಲರು ಯೋಗದ ಮಹತ್ವ ವಿವರಿಸಿದರು. ಉತ್ತಮ ಆರೋಗ್ಯಕ್ಕೆ ಯೋಗ ಅಗತ್ಯವಾಗಿದ್ದು ಪ್ರತಿಯೊಬ್ಬರೂ ಯೋಗಾಭ್ಯಾಸ ಮಾಡುವಂತೆ ಕರೆ ನೀಡಿದರು.
ಇಂದು ರಾಂಚಿಯಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನದ ಪೂರ್ವಭಾವಿ ಕಾರ್ಯಕ್ರಮದಲ್ಲಿ ಯಾವುದೇ ಧರ್ಮ, ಜಾತಿಯ ಅಡೆತಡೆಯಿಲ್ಲದೆ ಸರ್ವಧರ್ಮೀಯರೂ ಪಾಲ್ಗೊಂಡಿದ್ದರು.