ಭಾರತದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ದ್ರೌಪದಿ ಮುರ್ಮು ಅವರು ಇಂದು ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸಿದರು. ಇದರೊಂದಿಗೆ, ದ್ರೌಪದಿ ಮುರ್ಮು ಇತಿಹಾಸ ನಿರ್ಮಿಸಿದ್ದು, ದೇಶದ ಮೊದಲ ಬುಡಕಟ್ಟು ಅಧ್ಯಕ್ಷರಾಗಿದ್ದಾರೆ. ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರು 15ನೇ ರಾಷ್ಟ್ರಪತಿಯಾಗಿ ನೂತನ ಅಧ್ಯಕ್ಷೆ ದ್ರೌಪದಿ ಮುರ್ಮು ಅವರಿಗೆ ಪ್ರಮಾಣ ವಚನ ಬೋಧಿಸಿದರು. ದ್ರೌಪದಿ ಮುರ್ಮು ಈ ಅತ್ಯುನ್ನತ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿದ ದೇಶದ ಎರಡನೇ ಮಹಿಳೆ ಮತ್ತು ಸ್ವತಂತ್ರ ಭಾರತದಲ್ಲಿ ಜನಿಸಿದ ಮೊದಲ ರಾಷ್ಟ್ರಪತಿ.
ದ್ರೌಪದಿ ಮುರ್ಮು ಅವರು ಪ್ರಮಾಣ ವಚನ ಸ್ವೀಕರಿಸಿದ ನಂತರ ತಮ್ಮ ಮೊದಲ ಭಾಷಣದಲ್ಲಿ, 'ಜೋಹರ್! ನಮಸ್ತೆ ! ಭಾರತದ ಎಲ್ಲಾ ನಾಗರಿಕರ ಭರವಸೆಗಳು, ಆಕಾಂಕ್ಷೆಗಳು ಮತ್ತು ಹಕ್ಕುಗಳ ಸಂಕೇತವಾಗಿರುವ ಈ ಪವಿತ್ರ ಸಂಸತ್ತಿನಿಂದ ನಾನು ಎಲ್ಲಾ ದೇಶವಾಸಿಗಳನ್ನು ನಮ್ರತೆಯಿಂದ ಅಭಿನಂದಿಸುತ್ತೇನೆ. ನಿಮ್ಮ ಬಾಂಧವ್ಯ, ನಿಮ್ಮ ನಂಬಿಕೆ ಮತ್ತು ನಿಮ್ಮ ಬೆಂಬಲ ನನಗೆ ಈ ಹೊಸ ಜವಾಬ್ದಾರಿ ನಿರ್ವಹಿಸಲು ದೊಡ್ಡ ಶಕ್ತಿಯಾಗಲಿ" ಎಂದು ಹೇಳಿದರು.
'ಭಾರತದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಆಯ್ಕೆಯಾದ ಎಲ್ಲಾ ಸಂಸದರು ಮತ್ತು ಎಲ್ಲಾ ವಿಧಾನಸಭೆಯ ಸದಸ್ಯರಿಗೆ ನಾನು ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ನಿಮ್ಮ ಮತ ದೇಶದ ಕೋಟ್ಯಂತರ ನಾಗರಿಕರ ನಂಬಿಕೆಯ ಅಭಿವ್ಯಕ್ತಿಯಾಗಿದೆ" ಎಂದರು.
ಪ್ರಮಾಣ ವಚನಕ್ಕೆ ಮುಂಚಿತವಾಗಿ, ಹೊಸದಾಗಿ ಚುನಾಯಿತರಾದ ಅಧ್ಯಕ್ಷೆ ದ್ರೌಪದಿ ಮುರ್ಮು ಸೋಮವಾರ ಬೆಳಿಗ್ಗೆ ರಾಷ್ಟ್ರಪತಿ ಭವನವನ್ನು ತಲುಪಿದ್ದು, ಇದು ಮುಂದಿನ ಐದು ವರ್ಷಗಳ ಕಾಲ ಅವರ ಮನೆ ಮತ್ತು ಕಚೇರಿಯಾಗಲಿದೆ. ರಾಷ್ಟ್ರಪತಿ ಭವನಕ್ಕೆ ಆಗಮಿಸಿದ ನಿರ್ಗಮಿತ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಮತ್ತು ಅವರ ಪತ್ನಿ ಸವಿತಾ ಕೋವಿಂದ್ ಅವರು ದ್ರೌಪದಿ ಮುರ್ಮು ಅವರನ್ನು ಬರಮಾಡಿಕೊಂಡರು. ಇದಕ್ಕೂ ಮೊದಲು, ದ್ರೌಪದಿ ಮುರ್ಮು ಅವರು ಬೆಳಿಗ್ಗೆ ರಾಜ್ ಘಾಟ್‌ಗೆ ಭೇಡಿ ನೀಡಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಸ್ಮಾರಕಕ್ಕೆ ಗೌರವ ಸಲ್ಲಿಸಿದರು
ಆಡಳಿತಾರೂಢ ಎನ್‌ಡಿಎ ರಾಷ್ಟ್ರಪತಿ ಚುನಾವಣೆಗೆ ದ್ರೌಪದಿ ಮುರ್ಮು ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದರೆ, ಪ್ರತಿಪಕ್ಷಗಳು ಯಶವಂತ್ ಸಿನ್ಹಾ ಅವರನ್ನು ಕಣಕ್ಕಿಳಿಸಿದ್ದವು. ಜುಲೈ 18 ರಂದು ದೇಶಾದ್ಯಂತದ ಸಂಸದರು ಮತ್ತು ಶಾಸಕರು ರಾಷ್ಟ್ರಪತಿ ಚುನಾವಣೆಗೆ ಮತ ಚಲಾಯಿಸಿದರು.
ಜುಲೈ 21 ರಂದು ಮತ ಎಣಿಕೆ ಮಾಡಲಾಯಿತು. ಇದರಲ್ಲಿ ದ್ರೌಪದಿ ಮುರ್ಮು ಯಶವಂತ್ ಸಿನ್ಹಾ ಅವರನ್ನು ಸೋಲಿಸಿ ಇತಿಹಾಸ ನಿರ್ಮಿಸಿದರು. ದ್ರೌಪದಿ ಮುರ್ಮು ಶೇಕಡಾ 64 ಕ್ಕಿಂತ ಹೆಚ್ಚು ಮಾನ್ಯ ಮತಗಳನ್ನು ಪಡೆದು, ಭಾರಿ ಮತಗಳ ಅಂತರದಿಂದ ಗೆದ್ದರು. ಚುನಾವಣೆಯಲ್ಲಿ ಯಶವಂತ್ ಸಿನ್ಹಾ 3,80,177 ಮತಗಳನ್ನು ಪಡೆದರೆ, ದ್ರೌಪದಿ ಮುರ್ಮು 6,76,803 ಮತಗಳನ್ನು ಪಡೆದಿದ್ದರು.