ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ಹುಬ್ಬಳ್ಳಿಯ ಕೆಎಲ್ಇ ಮೈದಾನದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ರಣಕಹಳೆ ಊದಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಜ್ಯ ಸಮ್ಮಿಶ್ರ ಸರ್ಕಾರ ಮತ್ತು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಭಾಷಣದ ಆರಂಭದಲ್ಲಿ ಕನ್ನಡದಲ್ಲಿಯೇ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, "ಈ ಭೂಮಿ, ತ್ಯಾಗ, ಸಾಹಸ, ಶೌರ್ಯ, ಇತಿಹಾಸ, ಸಂಸ್ಕೃತಿಗೆ ಹೆಸರು. ನನಗೆ ಈ ಪುಣ್ಯ, ಪವಿತ್ರ ಭೂಮಿಗೆ ಬಂದಿದ್ದಕ್ಕೆ ರೋಮಾಂಚನವಾಗಿದೆ" ಎಂದು ನುಡಿದರು. ಅಲ್ಲದೆ, ಕಿತ್ತೂರು ರಾಣಿ ಚೆನ್ನಮ್ಮ, ಭಕ್ತ ಕವಿ ಕನಕದಾಸ, ಸಂಗೊಳ್ಳಿ ರಾಯಣ್ಣ, ದ.ರಾ. ಬೇಂದ್ರ, ಗಂಗೂಭಾಯಿ ಹಾನಗಲ್, ಪಂಡಿತ್ ಭೀಮಸೇನ ಜೋಷಿ ಅವರಂಥ ಮಹಾನ್ ವ್ಯಕ್ತಿಗಳನ್ನು ನೀಡಿದ ಹುಬ್ಬಳ್ಳಿ-ಧಾರವಾಡ ನಿಜಕ್ಕೂ ಪುಣ್ಯ ಭೂಮಿಯಾದಾಗಿದೆ ಎಂದರು.