ಈ ಯೋಜನೆಯಡಿ ನಿರ್ಮಿಸುವ ಮನೆಗಳಿಗೆ ಮಹಿಳೆಯರೇ ಮಾಲೀಕರು!

ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ನಿರ್ಮಾಣವಾಗುವ ಮನೆಗಳ ನೋಂದಣಿಯನ್ನು ಕುಟುಂಬದ ಯಜಮಾನನ ಹೆಸರಿಗೆ ಬದಲಾಗಿ ಮಹಿಳೆಯ ಹೆಸರಿಗೆ ಮಾಡುವ ಹೊಸ ನಿಯಮವನ್ನು ಮಧ್ಯಪ್ರದೇಶ ಸರ್ಕಾರ ಜಾರಿಗೆ ತಂದಿದೆ. 
 

  • Jun 26, 2019, 19:46 PM IST

ನವದೆಹಲಿ: ಮಧ್ಯಪ್ರದೇಶದ ರಾಜ್ಯದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ  ನಿರ್ಮಾಣವಾದ ಮನೆಗಳ ನೋಂದಣಿಯನ್ನು ಇದುವರೆಗೂ ಪುರುಷರ ಹೆಸರಿಗೆ ಮಾಡಲಾಗುತ್ತಿತ್ತು. ಆದರೀಗ ಅದು ಸಾಧ್ಯವಿಲ್ಲ. ಪ್ರಸ್ತುತ ರಾಜ್ಯ ಸರ್ಕಾರವು ಈ ಯೋಜನೆಯಡಿ ಸುಮಾರು 5.5 ಲಕ್ಷ ಮನೆಗಳನ್ನು ನಿರ್ಮಿಸಿ ವಿತರಿಸುವ ಯೋಜನೆ ಹೊಂದಿದೆ. 2018ರಲ್ಲಿ 3.5 ಮನೆಗಳಿಗೆ ಪ್ರಮಾಣಪತ್ರವನ್ನೂ ವಿತರಿಸಲಾಗಿತ್ತು. ಈ ಬಾರಿ ನೂತನ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮನೆ ವಿತರಣೆ ಮತ್ತು ನೋಂದಣಿ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆಗಳನ್ನು ಜಾರಿಗೊಳಿಸಿದೆ.

 

1 /4

ಮಧ್ಯಪ್ರದೇಶ ಸರ್ಕಾರದ ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಕಮಲೇಶ್ವರ ಪಟೇಲ್ ಈ ಬಗ್ಗೆ ಮಾಹಿತಿ ನೀಡಿದ್ದು, "ರಾಜ್ಯ ಸರ್ಕಾರವು ಮಹಿಳೆಯರ ಸಬಲೀಕರಣಕ್ಕಾಗಿ ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಪ್ರಧಾನಮಂತ್ರಿ ಆವಾಸ ಯೋಜನೆ ಮನೆಗಳ ಪ್ರಮಾಣಪತ್ರ ಮತ್ತು ನೋಂದಣಿಯನ್ನು ಆ ಕುಟುಂಬದ ಮಹಿಳೆಯರ ಹೆಸರಿನಲ್ಲಿ ಮಾಡಲಾಗುವುದು" ಎಂದು ತಿಳಿಸಿದ್ದಾರೆ.

2 /4

"ಕುಟುಂಬವನ್ನು ನಡೆಸುವಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಾರೆ. ಎಲ್ಲವನ್ನೂ  ನೆನಪಿನಲ್ಲಿಟ್ಟುಕೊಳ್ಳುವ, ನಿಭಾಯಿಸುವ ಪರಿಣತಿ ಅವರಲ್ಲಿದೆ. ಆದ್ದರಿಂದ ಸರ್ಕಾರವು ಈಗ ಮನೆಗಳನ್ನು ಮಹಿಳೆಯರ ಹೆಸರಿನಲ್ಲಿ ನೋಂದಾಯಿಸಲು ನಿರ್ಧರಿಸಿದೆ. ಈ ಬಗ್ಗೆ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ" ಎಂದು ಪಟೇಲ್ ಹೇಳಿದ್ದಾರೆ.

3 /4

ಕೇಂದ್ರ ಸರ್ಕಾರ ನಿಗದಿಪಡಿಸಿರುವ ಮಾರ್ಗಸೂಚಿಗಳ ಪ್ರಕಾರ ಈ ಯೋಜನೆಯಡಿ ಮಹಿಳೆಯರ ಹೆಸರನ್ನು ದಾಖಲಿಸಲು ಮತ್ತು ನೋಂದಾಯಿಸಲು ಅವಕಾಶವಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ಹಿಂದೆ ಅಧಿಕಾರದಲ್ಲಿದ್ದ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಸರ್ಕಾರ ಇದನ್ನು ಜಾರಿಗೆ ತಂದಿರಲಿಲ್ಲ. ಈಗ ಕಾಂಗ್ರೆಸ್ ಸರ್ಕಾರ ಅದನ್ನು ಕಾರ್ಯಗತಗೊಳಿಸಲು ಮುಂದಾಗಿದೆ ಎನ್ನಲಾಗಿದೆ.

4 /4

ಪಿಎಂ ವಸತಿ ಯೋಜನೆಯ ಮನೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿಯವರ ಛಾಯಾಚಿತ್ರಗಳನ್ನು ಹಾಕಲು ಹಿಂದಿನ ರಾಜ್ಯ ಸರ್ಕಾರ ನಿರ್ಧರಿಸಿತ್ತು. ಆದರೀಗ ಆ ನಿಯಮವನ್ನೂ ಪ್ರಸ್ತುತ ಸರ್ಕಾರ ಬದಲಾಯಿಸಿದೆ. ಇನ್ಮುಂದೆ ಯಾವುದೇ ವಸತಿ ಯೋಜನೆ ಮನೆಗಳ ಮೇಲೆ ಯಾರ ಛಾಯಾಚಿತ್ರದ ಟೈಲ್ಸ್ ಅಳವಡಿಸಲಾಗುವುದಿಲ್ಲ ಎಂದು ಸರ್ಕಾರ ಹೇಳಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮೇ 2015 ರಲ್ಲಿ ಪ್ರಧಾನಿ ವಸತಿ ಯೋಜನೆಯನ್ನು ಜಾರಿಗೆ ತಂದರು. ಈ ಯೋಜನೆಯಡಿ, ದೇಶದ ಪ್ರತಿ ಬಡ ಕುಟುಂಬಕ್ಕೂ 2022ರೊಳಗೆ ಸೂರು ಒದಗಿಸುವ ಗುರಿಯನ್ನು ಹೊಂದಿದೆ.