IPL 2022: ಐಪಿಎಲ್ ಪ್ಲೇಆಫ್/ನಾಕೌಟ್ ಪಂದ್ಯಗಳಲ್ಲಿ ಶತಕ ಬಾರಿಸಿದ 5 ಆಟಗಾರರು

ಕೆಲವು ಆಟಗಾರರು ಲೀಗ್‌ನ ಪ್ಲೇಆಫ್/ನಾಕೌಟ್ ಹಂತದಲ್ಲಿ ಶತಕ ಬಾರಿಸುವ ಮೂಲಕ ದಾಖಲೆ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌(IPL)ನ ಪ್ಲೇಆಫ್/ನಾಕೌಟ್ ಹಂತಗಳು ಲೀಗ್‌ನ ಅತ್ಯಂತ ರೋಚಕ ಭಾಗವಾಗಿದೆ. ಈ ಹಂತವು ಶ್ರೀಮಂತ ಲೀಗ್‌ನ ಇತಿಹಾಸದಲ್ಲಿ ಕೆಲವು ಅತ್ಯುತ್ತಮ ಕ್ಷಣಗಳನ್ನು ನಿರ್ಮಿಸಿದೆ. ಕೆಲವು ಆಟಗಾರರು ಲೀಗ್‌ನ ಈ ಹಂತದಲ್ಲಿ ಶತಕ ಬಾರಿಸುವ ಮೂಲಕ ದಾಖಲೆ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಪ್ಲೇಆಫ್‌ಗಳಲ್ಲಿ ಮೂರಂಕಿಗಳ ಗಡಿ ದಾಟಿದ ಐವರು ಆಟಗಾರರ ಮಾಹಿತಿ ಇಲ್ಲದೆ ನೋಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಚೆನ್ನೈ ಸೂಪರ್ ಕಿಂಗ್ಸ್‌ನ ಆರಂಭಿಕ ಆಟಗಾರ ಮುರಳಿ ವಿಜಯ್ ಚೆಪಾಕ್‌ನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೇವಲ 58 ಎಸೆತಗಳಲ್ಲಿ 113 ರನ್ ಗಳಿಸುವ ಮೂಲಕ ಭರ್ಜರಿ ಶತಕ ಸಿಡಿಸಿದರು. 2012ರ ಐಪಿಎಲ್ ಕ್ವಾಲಿಫೈಯರ್ 2 ಪಂದ್ಯದಲ್ಲಿ ಮುರಳಿ ವಿಜಯ್ ಶತಕದ ನೆರವಿನಿಂದ ಸಿಎಸ್‌ಕೆ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 222 ರನ್ ಗಳ ಬೃಹತ್ ಮೊತ್ತ ಪೇರಿಸಿತ್ತು. ದೊಡ್ಡ ಮೊತ್ತದ ಗುರಿಯನ್ನು ಚೇಸ್ ಮಾಡಿದ ಡೆಲ್ಲಿ 86 ರನ್ ಗಳಿಂದ ಸೋಲು ಕಾಣಬೇಕಾಯಿತು. ಈ ಪಂದ್ಯವನ್ನು ಗೆದ್ದ ಸಿಎಸ್‍ಕೆ ಫೈನಲ್ ಪ್ರವೇಶಿಸಿತು.

2 /5

2014ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ನಡೆದ ಕ್ವಾಲಿಫೈಯರ್ 2ರ ಪಂದ್ಯದಲ್ಲಿ ವೀರೇಂದ್ರ ಸೆಹ್ವಾಗ್ ಕೇವಲ 58 ಎಸೆತಗಳಲ್ಲಿ 12 ಬೌಂಡರಿ ಮತ್ತು 8 ಸಿಕ್ಸರ್‌ ಇದ್ದ ಭರ್ಜರಿ ಶತಕ(122 ರನ್) ಭಾರಿಸಿದ್ದರು. ಸೆಹ್ವಾಗ್ ಅವರ ಸ್ಫೋಟಕ ಆಟದ ನೆರವಿನಿಂದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 226 ರನ್ ಗಳ ಬೃಹತ್ ಮೊತ್ತ ಪೇರಿಸಿತ್ತು. ಈ ಪಂದ್ಯದಲ್ಲಿ ಚೆನ್ನೈ 24 ರನ್ ಗಳಿಂದ ಸೋತರೆ, ಪಂಜಾಬ್ ಫೈನಲ್‍ಗೆ ಎಂಟ್ರಿ ಕೊಟ್ಟಿತು.      

3 /5

2014ರ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪಂಜಾಬ್‌ನ ವಿಕೆಟ್‌ಕೀಪರ್ ಬ್ಯಾಟ್ಸ್‍ಮನ್ ವೃದ್ಧಿಮಾನ್ ಸಹಾ ಭರ್ಜರಿ ಶತಕ ಸಿಡಿಸಿ ಮಿಂಚಿದ್ದರು. ಕೇವಲ 55 ಎಸೆತಗಳನ್ನು ಎದುರಿಸಿದ್ದ ಸಹಾ ಈ ಪಂದ್ಯದಲ್ಲಿ ಅಜೇಯ 115 ರನ್ ಗಳಿಸಿದ್ದರು. ಸಹಾ ಆಟದ ನೆರವಿನಿಂದ ಪಂಜಾಬ್ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 199 ರನ್ ಗಳ ಬೃಹತ್ ಮೊತ್ತ ಪೇರಿಸಿತ್ತು. ಆದರೆ, ಸವಾಲಿನ ಮೊತ್ತವನ್ನು ಬೆನ್ನತ್ತಿದ ಕೆಕೆಆರ್ ಇನ್ನೂ 3 ಎಸೆತಗಳು ಬಾಕಿ ಇರುವಂತೆಯೇ ಭರ್ಜರಿ ಗೆಲುವು ಸಾಧಿಸಿ 2ನೇ ಐಪಿಎಲ್ ಟ್ರೋಫಿಯನ್ನು ಎತ್ತಿಹಿಡಿದಿತ್ತು.  

4 /5

2018ರ ಐಪಿಎಲ್ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್‍ನ ಶೇನ್ ವ್ಯಾಟ್ಸನ್ ಭರ್ಜರಿ ಶತಕ(ಅಜೇಯ 117) ಸಿಡಿಸಿ ಮಿಂಚಿದ್ದರು. ಅಂದಿನ ಪಂದ್ಯದಲ್ಲಿ ನಾಯಕ ಕೇನ್ ವಿಲಿಯಮ್ಸನ್(47) ಮತ್ತು ಯೂಸುಫ್ ಪಠಾಣ್(ಅಜೇಯ 45) ಅವರ ಭರ್ಜರಿ ಬ್ಯಾಟಿಂಗ್ ನಿಂದ ಹೈದರಾಬಾದ್ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 178 ರನ್ ಗಳ ಬೃಹತ್ ಮೊತ್ತ ಪೇರಿಸಿತ್ತು. ಬೃಹತ್ ಮೊತ್ತದ ಟಾರ್ಗೆಟ್ ಬೆನ್ನತ್ತಿದ ಸಿಎಸ್‍ಕೆ ಪರ ಶೇನ್ ವ್ಯಾಟ್ಸನ್ ಸ್ಫೋಟಕ ಆಟವಾಡಿದರು. ಕೇವಲ 57 ಎಸೆತಗಳಲ್ಲಿ ಅಜೇಯ 117 ರನ್ ಗಳಿಸಿದ ಅವರು ಚೆನ್ನೈ ತಂಡ 3ನೇ ಬಾರಿಗೆ ಐಪಿಎಲ್ ಪ್ರಶಸ್ತಿ ಗೆಲ್ಲಲು ನೆರವಾದರು.

5 /5

ಕ್ರಿಕೆಟ್ ಜಗತ್ತಿನಲ್ಲಿ ಮತ್ತೊಬ್ಬ ಪ್ರತಿಭಾವಂತ ಆಟಗಾರನ ಉದಯವಾಗಿದೆ. ಬುಧವಾರ ನಡೆದ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಪ್ಲೇ ಆಫ್ ಹಂತದ ಮೊದಲ ಎಲಿಮೇಟರ್ ಪಂದ್ಯದಲ್ಲಿ ರಜತ್ ಪಾಟಿದಾರ್ ಭರ್ಜರಿ ಶತಕ ಸಿಡಿಸಿ ಹೀರೋ ಆದರು. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮನಬಂದಂತೆ ಬ್ಯಾಟ್ ಬಿಸಿದ ರಜತ್ ಕೇವಲ 54 ಎಸೆತಗಳಲ್ಲಿ 7 ಸಿಕ್ಸರ್ ಮತ್ತು 12 ಬೌಂಡರಿ ಇದ್ದ ಅಜೇಯ 112 ರನ್ ಗಳಿಸಿ ಸ್ಟಾರ್ ಎನಿಸಿಕೊಂಡರು. ರಜತ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆರ್‍ಸಿಬಿ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 207 ರನ್ ಗಳ ಬೃಹತ್ ಮೊತ್ತ ಪೇರಿಸಿತು. ದೊಡ್ಡ ಟಾರ್ಗೆಟ್ ಚೇಸಿಂಗ್ ಮಾಡಿದ ಕೆ.ಎಲ್.ರಾಹುಲ್ ನೇತೃತ್ವದ ಲಕ್ನೋ ತಂಡ 14 ರನ್ ಗಳಿಂದ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದಿತು.