ಬೆಂಗಳೂರು: ಇನ್ನು ಮುಂದೆ ವನ್ಯಜೀವಿಗಳಿಂದ ಮೃತರಾದ ಕುಟುಂಬದವರಿಗೆ ಪ್ರತಿ ತಿಂಗಳು ರೂ. 2000 ಮಾಸಾಶನವನ್ನು ನೀಡಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಸಚಿವ ಕೃಷ್ಣ ಬೈರೇಗೌಡ ಈ ವಿಚಾರವನ್ನು ತಿಳಿಸಿದ್ದಾರೆ. ಇದುವರೆಗೂ ವನ್ಯಜೀವಿಗಳಿಂದ ಮೃತರಾದ ಕುಟುಂಬಕ್ಕೆ ರೂ. 5 ಲಕ್ಷ ಪರಿಹಾರ ಧನ ನೀಡಲಾಗುತ್ತಿತ್ತು. ಅದರ ಜೊತೆಗೆ ಈಗ 5 ವರ್ಷದವರೆಗೆ ಮಾಸಾಶನವನ್ನು ಸಹ ನೀಡಲಾಗುವುದು ಎಂದರು.
ತೋಟಗಾರಿಕೆ ಬೆಳೆಗಳಲ್ಲಿ ಒಂದಾದ ತೆಂಗು ಬೆಳೆಗಾರರು ಹಾನಿಗಿಡಾಗಿ ನಷ್ಟ ಅನುಭವಿಸಿರುವ ಹಿನ್ನೆಲೆಯಲ್ಲಿ 44,547 ಹೆಕ್ಟರ್ ತೆಂಗು ಬೆಳೆಗಾರರಿಗೆ 178 ಕೋಟಿ ರೂಪಾಯಿಗಳನ್ನು ಬೆಳೆ ಪರಿಹಾರ ರೂಪದಲ್ಲಿ ನೀಡಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಅವರು ಹೇಳಿದರು.