ಚಾಮರಾಜನಗರ: ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಜೊತೆಗೆ ಅರಣ್ಯ ಇಲಾಖೆಯ ಜವಾಬ್ದಾರಿಯನ್ನು ಹೊತ್ತಿದ್ದ ಉಮೇಶ್ ಕತ್ತಿಯವರು ಗಡಿಜಿಲ್ಲೆ ಚಾಮರಾಜನಗರದ ಕಾಡಿನ ಅಂದ-ಚಂದ, ರಮ್ಯತೆಗೆ ಮನಸೋತಿದ್ದರು.
ಚಾಮರಾಜನಗರ ಜಿಲ್ಲೆಯಲ್ಲಿ 2 ಹುಲಿ ಸಂರಕ್ಷಿತ ಮತ್ತು 2 ವನ್ಯಜೀವಿಧಾಮಗಳಿದ್ದು, ಇಲ್ಲಿಗೆ ಭೇಟಿ ನೀಡಿದ್ದ ಉಮೇಶ್ ಕತ್ತಿಯವರು ಸಫಾರಿ ನಡೆಸಿ ಪ್ರಾಣಿಗಳ ಬಗ್ಗೆ ತಿಳಿದುಕೊಳ್ಳಲು, ಹಸಿರಿನ ಚೆಲುವನ್ನು ಕಣ್ತುಂಬಿಕೊಳ್ಳಲು ಉತ್ಸುಕರಾಗುತ್ತಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳೊಟ್ಟಿಗೆ ಸಭೆ ನಡೆಸಿದ ಬಳಿಕ ಕಾಡಿನ ಚೆಲುವು ಕಾಣಲು ಜೀಪ್ ಏರುತ್ತಿದ್ದ ಅವರು ಕಾಡು ಬಹಳ ಚೆಂದ ಇದೆ, ಪ್ರಾಣಿ ಮತ್ತು ಮಾನವ ಸಂಘರ್ಷ ತಡೆಗೆ ಆದಷ್ಟು ಪರಿಣಾಮಕಾರಿ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಸುದ್ದಿಗೋಷ್ಠಿಗಳಲ್ಲಿ ಹೇಳಿದ್ದರು. ಕಾಡು ಸುತ್ತಿದ ಬಳಿಕ ಕಂಡ ಪ್ರಾಣಿಗಳ ಬಗ್ಗೆ ಮಾತನಾಡಿ ಸಂತೋಷ ಪಡುತ್ತಿದ್ದರು.
ಇದನ್ನೂ ಓದಿ: Umesh Katti: ಉಮೇಶ್ ಕತ್ತಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ
ಆನೆಗಳಿಗೆ ಕಾಯಿ-ಬೆಲ್ಲ ತಿನ್ನಿಸಿದ್ದ ಸಚಿವ
ಕೆಲವು ತಿಂಗಳ ಹಿಂದಷ್ಟೇ ಬಂಡೀಪುರ ಸಮೀಪದ ಗಿರಿಜನ ಪೋಡುಗಳಿಗೆ ಭೇಟಿಕೊಟ್ಟು ರಾಂಪುರ ಆನೆ ಶಿಬಿರಕ್ಕೆ ತೆರಳಿದ್ದ ಉಮೇಶ್ ಕತ್ತಿ ಅಲ್ಲಿನ ಎಲ್ಲಾ ಆನೆಗಳಿಗೆ ಕಾಯಿ-ಬೆಲ್ಲ ತಿನ್ನಿಸಿ ಖುಷಿ ಪಟ್ಟಿದ್ದರು. ಆನೆಗಳು ಮಾಡುವ ಕಸರತ್ತುಗಳು, ಸಲಾಂ ಮಾಡುತ್ತಿರುವುದನ್ನು ಕಂಡು ಸಂತಸ ವ್ಯಕ್ತಪಡಿಸಿದ್ದರು. ಜೊತೆಗೆ ಮತ್ತೊಂದು ಆನೆ ಶಿಬಿರ ಮಾಡುವ ಅರಣ್ಯ ಇಲಾಖೆ ಪ್ರಸ್ತಾಪಕ್ಕೂ ಧನಾತ್ಮಕವಾಗಿ ಸ್ಪಂದಿಸಿದ್ದರು.
ಬಿಳಿಗಿರಿರಂಗನ ಬೆಟ್ಟ, ಮೇಕೆದಾಟು, ಗೋಪಿನಾಥಂ, ಹೊಗೆನಕಲ್ ಹೀಗೆ ಚಾಮರಾಜನಗರದ ಎಲ್ಲಾ ಅರಣ್ಯ ಪ್ರದೇಶಗಳಿಗೆ ಭೇಟಿಕೊಟ್ಟು ಈ ಹಿಂದೆ ಅರಣ್ಯ ಸಚಿವರಾಗಿ ಜಿಲ್ಲೆಗೆ ಕಾಲಿಡದ ಸಚಿವರುಗಳ ವರ್ತನೆಗೆ ಅಪವಾದವಾಗಿ ಕಾಡಿನ ಪ್ರೇಮ ಮೆರೆದಿದ್ದರು.
ಇದನ್ನೂ ಓದಿ: ಸಕಲ ಸರ್ಕಾರಿ ಗೌರವಗಳೊಂದಿಗೆ ಉಮೇಶ್ ಕತ್ತಿ ಅಂತ್ಯಕ್ರಿಯೆ; ಒಡನಾಟ ಹಂಚಿಕೊಂಡು ಸಿಎಂ ಬೊಮ್ಮಾಯಿ ಭಾವುಕ
ಚಾಮರಾಜನಗರ ಅಭಿವೃದ್ಧಿಗೆ ತುಂಬಲಾರದ ನಷ್ಟ
ಕಳೆದ ತಿಂಗಳು ಮೇಕೆದಾಟು, ಮಲೆಮಹದೇಶ್ವರ ಬೆಟ್ಟಕ್ಕೆ ಉಮೇಶ್ ಕತ್ತಿ ಭೇಟಿ ನೀಡಿದ್ದಾಗ ‘ಇಷ್ಟು ಅದ್ಭುತವಾದ ಪ್ರದೇಶಕ್ಕೆ ತನ್ನನ್ನು ತಡವಾಗಿ ಕರೆತಂದಿರಿ, ಎಷ್ಟೋ ವರ್ಷಗಳ ಮುಂಚಿತವಾಗಿ ನಾನು ಇಲ್ಲಿಗೆ ಭೇಟಿ ಕೊಡಬೇಕಿತ್ತು ಎಂದು ಹೇಳಿದ್ದರು. ಅವರ ನಿಧನ ಕಾಡಿನ ರಕ್ಷಣೆಗೆ, ಪ್ರವಾಸೋದ್ಯಮದ ಅಭಿವೃದ್ಧಿ ಸೇರಿದಂತೆ ಚಾಮರಾಜನಗರ ಅಭಿವೃದ್ಧಿಗೆ ತುಂಬಲಾರದ ನಷ್ಟ ಎಂದು ವನ್ಯಜೀವಿ ಮಂಡಲಿ ಸದಸ್ಯ ಮಲ್ಲೇಶಪ್ಪನವರು ಸಚಿವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.