ಮೈಸೂರು: ನ.24ರಿಂದ 26ರವರೆಗೆ ಮೈಸೂರಿನಲ್ಲಿ ನಡೆಯಲಿರುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಧತೆ ನಡೆದಿದೆ. ಈ ಬಾರಿ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಗಣ್ಯರಿಗೆ ಮೈಸೂರು ಅರಮನೆಯ ಪ್ರತಿಕೃತಿಯನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಲಾಗಿದೆ.
ಮೈಸೂರಿನಲ್ಲಿ ನಡೆಯುವ ಸಮ್ಮೇಳನ ಸದಾ ಕಾಲ ನೆನಪಿನಲ್ಲಿ ಉಳಿಯಬೇಕು ಎಂಬ ಉದ್ದೇಶದಿಂದ ಸಮ್ಮೇಳನದ ಉದ್ಘಾಟನೆ, ಸಮಾರೋಪ ಸಮಾರಂಭಗಳಲ್ಲಿ ಭಾಗವಹಿಸುವ ಮುಖ್ಯ ಅತಿಥಿಗಳು, ಗಣ್ಯರು, ಸಾಹಿತಿಗಳು ಹಾಗೂ ಸನ್ಮಾನಿತರಿಗೆ ಒಂದೂವರೆ ಅಡಿ ಎತ್ತರದ ಅರಮನೆ ಪ್ರತಿಕೃತಿಯ ಪಕ್ಕದಲ್ಲಿ ಮಹಿಷಾಸುರ ವಿಗ್ರಹ ಹಾಗೂ ಜ್ಞಾನಪೀಠ ಪುರಸ್ಕೃತರ ಭಾವಚಿತ್ರಗಳನ್ನು ಒಳಗೊಂಡ ವಿಶೇಷ ಸ್ಮರಣಿಕೆಯನ್ನು ನೀಡಲು ವೇದಿಕೆ ನಿರ್ವಹಣಾ ಸಮಿತಿ ನಿರ್ಧರಿಸಿದೆ.
ಸ್ಥಳೀಯ ಆಹಾರಕ್ಕೆ ಆದ್ಯತೆ : ಸಮ್ಮೆಳನ ಸಂದರ್ಭದಲ್ಲಿ ಮೈಸೂರು ಭಾಗದ ಖಾದ್ಯಗಳಿಗೆ ಆದ್ಯತೆ ನೀಡಲಾಗಿದ್ದು, ಮೇಲುಕೋಟೆ ಪುಳಿಯೊಗರೆ, ಕಳ್ಳೆಹುಳಿ, ಸಿಹಿ, ಖಾರಾ ಪೊಂಗಲ್, ಹುಚ್ಚೆಳ್ಳು ಚಟ್ನಿ, ಕಜ್ಜಾಯ, ಮೈಸೂರು ಪಾಕ್, ನಂಜನಗೂಡಿನ ರಸಬಾಳೆ ಹಣ್ಣಿಗೆ ಮಹತ್ವ ನೀಡಲಾಗುತ್ತಿದೆ. ನಗರದ ವಿ.ವಿ ಸ್ಪೋರ್ಟ್ಸ್ ಪೆವಿಲಿಯನ್, ಅರಸು ವಸತಿ ಶಾಲೆ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ ಆಹಾರ ವ್ಯವಸ್ಥೆ ಮಾಡಲಾಗುತ್ತಿದೆ.
ಗುಲಾಬಿಯಲ್ಲ, ಮಲ್ಲಿಗೆ ! : ಮಲ್ಲಿಗೆ ನಾಡಿನಲ್ಲಿ ನಡೆಯುವ ಸಮ್ಮೆಳನದಲ್ಲಿ ಭಾಗವಹಿಸುವ ಮಹಿಳೆಯರಿಗೆ ಗುಲಾಬಿ ಹೂವಿಗೆ ಬದಲಾಗಿ ಮಲ್ಲಿಗೆ ನೀಡಿ ಸ್ವಾಗತಿಸಲು ನಿರ್ಧರಿಸಲಾಗಿದೆ. ಬುಧವಾರ ನಡೆದ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಗುಲಾಬಿ ಬದಲಿಗೆ ಮಲ್ಲಿಗೆ ಹೂವಿನ್ನು ನೀಡುವ ಮಹಿಳಾ ಸಮಿತಿಯ ಪ್ರಸ್ತಾವಕ್ಕೆ ಜಿಲ್ಲಾಧಿಕಾರಿ ಡಿ.ರಂದೀಪ್ ಒಪ್ಪಿಗೆ ಸೂಚಿಸಿದ್ದಾರೆ.
ಅಷ್ಟೇ ಅಲ್ಲದೆ, ಸಮ್ಮೇಳನದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಆಸನ ಮೀಸಲು, ವಿಶ್ರಾಂತಿ ಕೊಠಡಿ, ಊಟದ ಕೌಂಟರ್ ಹಾಗೂ ವಾಹನ ನಿಲುಗಡೆ ಸೌಲಭ್ಯವನ್ನೂ ಒದಗಿಸಲು ನಿರ್ಧರಿಸಲಾಗಿದೆ.