ಬೆಂಗಳೂರು: ಮರಳಿ ಮುಖ್ಯಮಂತ್ರಿ ಖುರ್ಚಿ ಹಿಡಿಯಲು ಬೆಂಬಿಡದೆ ಪ್ರಯತ್ನಿಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ನಿಲುವಿಗ ಸಂಘ ಪರಿವಾರ ವಿರೋಧ ವ್ಯಕ್ತಪಡಿಸಿದೆ ಎಂದು ತಿಳಿದುಬಂದಿದೆ.
ಆಪರೇಷನ್ ಕಮಲ ನಡೆಸಲು ಆರ್ ಎಸ್ ಎಸ್ ತೀವ್ರ ವಿರೋಧ ಪಡಿಸಿದ್ದು, ಮುಂಬರುವ ಲೋಕಸಭೆ ಚುನಾವಣೆಗೆ ಆಪರೇಷನ್ ಕಮಲದಿಂದ ಕೆಟ್ಟ ಹೆಸರು ಬರಲಿದೆ. ಆದುದರಿಂದ ಆಪರೇಷನ್ ಕಮಲ ಮಾಡಿ ಅಧಿಕಾರ ಗಿಟ್ಟಿಸುವುದರ ಬದಲು ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವತ್ತ ಗಮನ ಕೊಡಿ ಎಂದು ಆರ್ ಎಸ್ ಎಸ್ ನಾಯಕರು ಯಡಿಯೂರಪ್ಪ ಅವರಿಗೆ ಸಂದೇಶ ಕಳುಹಿಸಿದ್ದಾರೆ ಎನ್ನಲಾಗಿದೆ.
ಬೆಳಗಾವಿ ಕಾಂಗ್ರೆಸ್ ನಾಯಕರಾದ ಸತೀಶ್ ಜಾರಕಿಹೊಳಿ ಮತ್ತು ರಮೇಶ್ ಜಾರಕಿಹೊಳಿ ಅಷ್ಟು ಸುಲಭಕ್ಕೆ ಬಿಜೆಪಿಗೆ ಬರುವವರಲ್ಲ. ಆಪರೇಷನ್ ಕಮಲ ಎಂಬ ನೆಪದಲ್ಲಿ ಜಾರಕಿಹೊಳಿ ಸಹೋದರರು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಜಾರಕಿಹೊಳಿ ಸಹೋದರರನ್ನು ನಂಬಿ ಯಡವಟ್ಟು ಮಾಡಿಕೊಳ್ಳಬೇಡಿ ಎಂದು ಯಡಿಯೂರಪ್ಪ ಅವರಿಗೆ ಸಂಘ ಪರಿವಾರದ ನಾಯಕರು ತಿಳಿಸಿದ್ದಾರೆ ಎನ್ನಲಾಗಿದೆ.
ಇದಲ್ಲದೆ ಸಂಘಕ್ಕೆ ನಿಷ್ಠರಾಗಿರುವವರಿಗೂ ಆಪರೇಷನ್ ಕಮಲ ಮಾಡುವ ಕಸರತ್ತಿನಿಂದ ಮತ್ತು ಯಡಿಯೂರಪ್ಪ ಅವರಿಂದ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿದ್ದಾರೆ. ಆರ್ ಎಸ್ ಎಸ್ ನಾಯಕರ ಅಣತಿಯಂತೆ ಕೇಂದ್ರ ಸಚಿವರಾದ ಡಿ.ವಿ. ಸದಾನಂದಗೌಡ, ಅನಂತಕುಮಾರ್, ಅನಂತಕುಮಾರ್ ಹೆಗಡೆ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿಗಳಾದ ಕೆ.ಎಸ್. ಈಶ್ವರಪ್ಪ, ಆರ್. ಅಶೋಕ್, ಸಂಸದರಾದ ಪ್ರಹ್ಲಾದ್ ಜೋಷಿ, ನಳೀನಕುಮಾರ್ ಕಟೀಲ್, ಸುರೇಶ್ ಅಂಗಡಿ ಮತ್ತು ಮಾಜಿ ಸಚಿವರಾದ ಸಿ.ಟಿ. ರವಿ ಹಾಗು ಸುರೇಶ್ ಕುಮಾರ್ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.