ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗೆ ವಿಶೇಷ ಮುತುವರ್ಜಿ- ಸಿಎಂ ಭರವಸೆ

ಹೈದರಾಬಾದ್ ಕರ್ನಾಟಕ ವಲಯದಲ್ಲಿ ಶಿಕ್ಷಣ, ಉದ್ಯೋಗ ಸೃಷ್ಟಿ, ಮತ್ತಿತರ ಅಭಿವೃದ್ಧಿ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಸರ್ಕಾರ ಸಮಗ್ರವಾಗಿ ತೀರ್ಮಾನ ಕೈಗೊಳ್ಳಲಿದೆ. 

Last Updated : Sep 7, 2018, 09:10 AM IST
ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗೆ ವಿಶೇಷ ಮುತುವರ್ಜಿ- ಸಿಎಂ ಭರವಸೆ  title=

ಬೆಂಗಳೂರು: ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗೆ ವಿಶೇಷ ಮುತುವರ್ಜಿ ವಹಿಸಿ, ಕ್ರಮ ಕೈಗೊಳ್ಳಲಾಗುವುದು. ಆ ಭಾಗದ ಸಮಸ್ಯೆಗಳ ಕುರಿತು ಚರ್ಚಿಸಲು ಕಲಬುರಗಿಯಲ್ಲಿ ವಿಶೇಷ ಸಭೆ ಕರೆದು ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತಿಳಿಸಿದರು.

ಮಾಜಿ ಶಾಸಕ ವೈಜನಾಥ ಪಾಟೀಲ ಅವರ ನೇತೃತ್ವದಲ್ಲಿ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ನಿಯೋಗವು ಗುರುವಾರ ಸಿಎಂ  ಭೇಟಿ ಮಾಡಿ, ಹೈದರಾಬಾದ್ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಮಾತನಾಡಿ, ಹೈದರಾಬಾದ್ ಕರ್ನಾಟಕ ವಲಯದಲ್ಲಿ ಶಿಕ್ಷಣ, ಉದ್ಯೋಗ ಸೃಷ್ಟಿ, ಮತ್ತಿತರ ಅಭಿವೃದ್ಧಿ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಸರ್ಕಾರ ಸಮಗ್ರವಾಗಿ ತೀರ್ಮಾನ ಕೈಗೊಳ್ಳಲಿದೆ. ಇದಕ್ಕೂ ಮುನ್ನ ಇನ್ನು ಕೆಲವೇ ದಿನಗಳಲ್ಲಿ ಆ ಭಾಗದ ಸಮಸ್ಯೆಗಳ ಕುರಿತು ಎಲ್ಲಾ ಜಿಲ್ಲೆಗಳಿಂದ ಪ್ರತಿನಿಧಿಗಳನ್ನು ಕರೆದು ಚರ್ಚೆ ನಡೆಸುವುದಾಗಿ ತಿಳಿಸಿದರು.

ಸರ್ಕಾರ ಈ ಭಾಗದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ನೀಡುತ್ತಿದೆ. ಕಲಬುರಗಿಯಲ್ಲಿ ಸೋಲಾರ್ ಉಪಕರಣ ತಯಾರಿಕೆ, ಬೀದರ್‍ನಲ್ಲಿ ಕೃಷಿ ಉಪಕರಣ ತಯಾರಿಕೆ, ಕೊಪ್ಪಳದಲ್ಲಿ ಎಲೆಕ್ಟ್ರಾನಿಕ್ ಆಟಿಕೆಗಳ ತಯಾರಿಕೆ, ಬಳ್ಳಾರಿಯಲ್ಲಿ ವಸ್ತ್ರೋದ್ಯಮದ ಕ್ಲಸ್ಟರ್ ಸ್ಥಾಪಿಸಲು ಉದ್ದೇಶಿಸಿದೆ ಎಂದರು. 

ಈ ಭಾಗಕ್ಕೆ ಸಾಕಷ್ಟು ಅನುದಾನ ನೀಡಿದರೂ, ಅದನ್ನು ಸಮರ್ಪಕವಾಗಿ ವೆಚ್ಚ ಮಾಡಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅಧಿಕಾರಿಗಳು ಹಾಗೂ ಸಿಬ್ಬಂದಿ ಕೊರತೆ ಇರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಸಿಬ್ಬಂದಿ ಕೊರತೆ ನೀಗಿಸಲು ಕ್ರಮ ವಹಿಸುವುದಾಗಿ ಸಿಎಂ ತಿಳಿಸಿದರು. 

ಇದಲ್ಲದೆ ಸಂವಿಧಾನದ 371 (ಜೆ) ತಿದ್ದುಪಡಿ ಅನ್ವಯ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಿರುವ ಹಿನ್ನೆಲೆಯಲ್ಲಿ ಜಾರಿಗೊಳಿಸಿರುವ ಕಾಯ್ದೆಗೆ ಹಲವಾರು ತಿದ್ದುಪಡಿ ಮಾಡಲಾಗಿದೆ. ಇದರಲ್ಲಿ ಹಲವು ಲೋಪದೋಷಗಳಿವೆ ಎಂದು ನಿಯೋಗದ ಸದಸ್ಯರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಈ ಕುರಿತು ವಿಶೇಷ ಮುತುವರ್ಜಿ ವಹಿಸಿ, ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಸಿಎಂ, ಕಲಬುರಗಿಯಲ್ಲಿ ಹೈದರಾಬಾದ್ ಕರ್ನಾಟಕ ವಿಶೇಷ ಕೋಶ ಸ್ಥಾಪಿಸುವ ಕುರಿತು ಸಹ ಪರಿಶೀಲಿಸುವುದಾಗಿ ತಿಳಿಸಿದರು.
 

Trending News