ಬೆಂಗಳೂರು : ರಾಜ್ಯ ಸರ್ಕಾರ ಬಿಬಿಎಂಪಿ ವಾರ್ಡ್ ಗಳ ಮೀಸಲಾತಿ ಪಟ್ಟಿ ಪ್ರಕಟಿಸಿದ ಬೆನ್ನಲೇ ಅಪರಾಧ ಲೋಕದಲ್ಲಿ ಗುರುತಿಸಿಕೊಂಡಿರುವ ಕ್ರಿಮಿನಲ್ ಗಳು ಚುನಾವಣೆಗೆ ನಿಲ್ಲಲು ಸದ್ದಿಲ್ಲದೆ ತಯಾರಿ ನಡೆಸುತ್ತಿದ್ದಾರೆ. ಮತ್ತೊಂದೆಡೆ ಚುನಾವಣೆಗೆ ನಿಲ್ಲಲು ಗುಪ್ತ ಸಿದ್ಧತೆಯಲ್ಲಿ ತೊಡಗಿರುವ ರೌಡಿಗಳ ಪಟ್ಟಿ ಸಂಗ್ರಹಿಸಿ ವರದಿ ನೀಡಲು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ರಮನ್ ಗುಪ್ತಾ ಸೂಚಿಸಿದ್ದಾರೆ.
ಇದೇ ವರ್ಷ ಬಿಬಿಎಂಪಿ ಚುನಾವಣೆ ನಡೆಯುವ ಸಾಧ್ಯತೆಯಿದೆ. ಇದಕ್ಕೆ ಪೂರಕವಾಗಿ ಬಿಬಿಎಂಪಿಯು 198 ವಾರ್ಡ್ ಗಳಿಂದ 243 ವಾರ್ಡ್ ಗಳಿಗೆ ಏರಿಸಿ ಮೀಸಲಾತಿ ಪಟ್ಟಿ ಪ್ರಕಟಿಸಿದೆ. ರೌಡಿಗಳು ಸಹ ರಾಜಕೀಯ ಪಕ್ಷಗಳ ನಾಯಕರ ಮುಂದೆ ನಿಂತು ಗೆಲ್ಲುವ ಇರಾದೆಯಲ್ಲಿದ್ದಾರೆ. ಕೆಲ ರೌಡಿಗಳು ತಮ್ಮ ಕುಟುಂಬದ ಸದ್ಯಸರೊಬ್ಬರನ್ನ ಎಲೆಕ್ಷನ್ ಅಖಾಡಕ್ಕೆ ನಿಲ್ಲುವಂತೆ ಪರೋಕ್ಷವಾಗಿ ಸೂಚಿಸುತ್ತಿದ್ದಾರೆ. ಅಲ್ಲದೆ ತಮ್ಮ ಆಪ್ತರಿಗೂ ಚುನಾವಣಾ ಕಣದಲ್ಲಿ ನಿಂತರೆ ಬೆಂಬಲಿಸುವುದಾಗಿ ಹೇಳುತ್ತಿದ್ದಾರೆ ಎನ್ನಲಾಗಿದೆ. ಚುನಾವಣೆ ವೇಳೆ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಿರಲು ಹಾಗೂ ಶಾಂತಿಯುತ ವಾತಾವರಣ ನಿರ್ಮಿಸಲು ನಗರ ಪೊಲೀಸರು ಮುಂದಾಗಿದ್ದಾರೆ. ಹೀಗಾಗಿ ಚುನಾವಣೆಗೆ ಧುಮುಕುವ ರೌಡಿಗಳ ಬಗ್ಗೆ ನಿಗಾವಹಿಸಿ ಪಟ್ಟಿ ಸಂಗ್ರಹಿಸುವಂತೆ ಸಿಬ್ಬಂದಿಗೆ ರಮನ್ ಗುಪ್ತಾ ಸೂಚಿಸಿದ್ದಾರೆ.
ಇದನ್ನೂ ಓದಿ : ಹರ್ ಘರ್ ತಿರಂಗಾ ಅಭಿಯಾನಕ್ಕೆ ರಾಜ್ಯ ನಾಯಕರ ಬೆಂಬಲ
ಮುಂದಿನ ವಾರ ಕೈ ಸೇರಲಿದೆ ವರದಿ
ಬಿಬಿಎಂಪಿ ಚುನಾವಣೆಗೆ ನಿಲ್ಲಲು ಸಿದ್ದತೆ ನಡೆಸುತ್ತಿರುವ ರೌಡಿಗಳ ಬಗ್ಗೆ ಮಾಹಿತಿ ಕಲೆಹಾಕಲು ಸೂಚಿಸಲಾಗಿದ್ದು, ಸಂಬಂಧಪಟ್ಟ ಪೊಲೀಸರು ಮಾಹಿತಿ ಸಂಗ್ರಹದಲ್ಲಿ ತೊಡಗಿದ್ದಾರೆ. ಮೊದಲಿಗೆ ಯಾವ ಯಾವ ವಾರ್ಡ್ ರೌಡಿಗಳು ಚುನಾಣೆಗೆ ನಿಲ್ಲಲು ಸಿದ್ಧತೆ ನಡೆಸಿದ್ದಾರೆ.ಯಾವ ಪಕ್ಷದಿಂದ ಸ್ಪರ್ಧೆ ಅಥವಾ ಪಕ್ಷೇತರರಾಗಿ ನಿಲ್ಲುತ್ತಿದ್ದಾರ, ಯಾವ ಪಕ್ಷದಿಂದ ಟಿಕೆಟ್ ಕೇಳಿದ್ದಾರೆ.ಯಾವ ಪಕ್ಷದಲ್ಲಿ ಎಷ್ಟು ಮಂದಿ ಕ್ರಿಮಿನಲ್ ಹಿನ್ನೆಲೆಯ ಕ್ಯಾಂಡಿಡೇಟ್ ಗಳಿದ್ದಾರೆ. ಹಣಕಾಸು ಹಿನ್ನೆಲೆ ಏನೂ ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ತಮ್ಮ ಕುಟುಂಬದ ಸದ್ಯಸರೊಬರನ್ನ ನಿಲ್ಲಿಸಲು ಹಾಗೂ ತನ್ನ ಸ್ನೇಹಿತ ಬಳಗದ ಕ್ಯಾಂಡಿಡೇಟ್ ನ್ನ ಟಿಕೆಟ್ ದೊರಕುವಂತೆ ಮಾಡಿ ಚುನಾವಣೆ ಧುಮುಕಲು ಸನ್ನದ್ದರಾಗುತ್ತಿರುವವರ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಮುಂಬರುವ ಚುನಾವಣೆಯನ್ನು ಸುಗಮವಾಗಿ ನಡೆಸಲು ಹಾಗೂ ಹಿಂಸಾತ್ಮಕ ಘಟನೆಗಳಿಗೆ ಆಸ್ಪದ ನೀಡದಂತೆ ಎಚ್ಚರ ವಹಿಸಿರುವ ಸಿಸಿಬಿ ಪೊಲೀಸರು ರೌಡಿಶೀಟರ್ ಗಳು ಹಾಗೂ ಕುಖ್ಯಾತ ಆರೋಪಿಗಳನ್ನು ಕಚೇರಿಗೆ ಕರೆಸಿ ವಾರ್ನ್ ಮಾಡಿದ್ದಾರೆ. ಸಿಆರ್ ಪಿಸಿ ಸೆಕ್ಷನ್ 110ರ ಪ್ರಕಾರ ಬಾಂಡ್ ಬರೆಸಿಕೊಂಡಿದ್ದಾರೆ. ವಿಲ್ಸನ್ ಗಾರ್ಡನ್ ನಾಗ, ಡಬಲ್ ಮೀಟರ್ ಮೋಹನ್, ಕಾಡುಬೀಸನಹಳ್ಳಿ ಸೋಮ, ರೋಹಿತ್ ಸೇರಿದಂತೆ 50ಕ್ಕೂ ಹೆಚ್ಚು ರೌಡಿಗಳಿಂದ ಬಾಂಡ್ ಬರೆಸಿಕೊಂಡು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಬಾರದು ಎಂದು ಸಹಿ ಹಾಕಿಸಿಕೊಂಡಿದ್ದಾರೆ. ಒಂದು ವೇಳೆ ಇವರು ಕ್ರೈಂ ಚಟುವಟಿಕೆಯಲ್ಲಿ ಭಾಗಿಯಾದರೆ ನೇರವಾಗಿ ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳದೆ ಜಡ್ಜ್ ಮುಂದೆ ಹಾಜರುಪಡಿಸದೆ ಜೈಲಿಗಟ್ಟಬಹುದಾಗಿದೆ.
ಇದನ್ನೂ ಓದಿ : ಯಾದಗಿರಿಯಲ್ಲಿ ಗಾಂಜಾ ಘಾಟು; ಪಾನ್-ಬೀಡಾ ಅಂಗಡಿಗಳಲ್ಲಿ ಗಾಂಜಾ ಜಾಕಲೇಟ್ ಮಾರಾಟ..!
ವಿವಿಧ ಅಪರಾಧ ಕೃತ್ಯಗಳಲ್ಲಿ ಎಸಗಿ ನಗರದ ಪರಪ್ಪನ ಅಗ್ರಹಾರ ಜೈಲಿನಲ್ಲಿ 700ಕ್ಕಿಂತ ಹೆಚ್ಚು ರೌಡಿಗಳಿದ್ದಾರೆ. ಜಾಮೀನಿನ ಮೇರೆಗೆ ವಾರಕ್ಕೆ ಐದಾರು ರೌಡಿಗಳು ಬಿಡುಗಡೆಯಾಗಿ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಸಿಸಿಬಿ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.