ಬೆಂಗಳೂರು: ರಾಜ್ಯ ಸಮ್ಮಿಶ್ರ ಸರಕಾರ ನೂರು ದಿನಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ಯಾವುದೇ ಗೊಂದಲವಿಲ್ಲದೇ ಐದು ವರ್ಷವನ್ನೂ ಪೂರ್ಣಗೊಳಿಸಲಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಯವನಿಕಾದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಸಮ್ಮಿಶ್ರ ಸರಕಾರ ಇಂಥ ಸಂವತ್ಸರದಲ್ಲೇ ಬೀಳಲಿದೆ ಎಂದು ವಿರೋಧ ಪಕ್ಷದವರು ಭವಿಷ್ಯ ನುಡಿದಿದ್ದರು. ಆದರೆ, ನಾವು 100 ದಿನಗಳನ್ನೇ ಪೂರೈಸಿದ್ದೀವಿ. ಈ ಸರಕಾರ ಸುಭದ್ರವಾಗಿದ್ದು ಐದು ವರ್ಷವನ್ನೂ ಪೂರ್ಣಗೊಳಿಸಲಿದೆ ಎಂದರು.
ನೂರು ದಿನದಲ್ಲಿ ಸಾಕಷ್ಟು ಜನಪರ ಕಾರ್ಯಕ್ರಮ:
ಈ ನೂರು ದಿನಗಳಲ್ಲಿ ಸಾಕಷ್ಟು ಜನಪರ ಕಾರ್ಯಕ್ರಮ ಅನುಷ್ಠಾನ ಮಾಡಿದ್ದೇವೆ. ಕಳೆದ ಸಿದ್ದರಾಮಯ್ಯ ಅವರ ಸರಕಾರದಲ್ಲಿ ಘೋಷಿಸಿದ್ದ ಆಯವ್ಯಯವನ್ನು ಮುಂದುವರೆಸಿದ್ದೇವೆ. ಜೊತೆಗೆ ಹೊಸ ಕಾರ್ಯಕ್ರಮಗಳನ್ನು ಬಜೆಟ್ನಲ್ಲಿ ಅಳವಡಿಸಿದ್ದೇವೆ. ಈ ಸರಕಾರದ ಪ್ರಮುಖ ಕಾರ್ಯಕ್ರಮವಾದ ರೈತರ 31 ಸಾವಿರ ಕೋಟಿ ರೂ. ಸಾಲಮನ್ನಾ ಅನುಷ್ಠಾನಕ್ಕೆ ಸಿದ್ಧಗೊಂಡಿದೆ. ಇದರ ಜೊತೆಗೆ ಖಾಸಗಿ ಸಾಲ, ಕೈ ಸಾಲವನ್ನೂ ಸಹ ಮನ್ನಾ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದೇವೆ. ಬಹಳಷ್ಟು ರೈತರು ಕೈಸಾಲ ತೀರಿಸಲು ಹೈರಾಣಾಗಿದ್ದಾರೆ. ಅದಕ್ಕಾಗಿಯೇ ಕೈಸಾಲ ಮನ್ನಾ ಮಾಡಲು ಹೊರಟಿದ್ದೇವೆ. ಈ ಸಂಬಂಧ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಹೇಳಿದರು.
ಕೇಂದ್ರ ಸರಕಾರದಿಂದ ಸಣ್ಣ ಹಣಕಾಸಿನ ನೆರವೂ ನಮಗೆ ಸಿಕ್ಕಿಲ್ಲ:
13 ಜಿಲ್ಲೆಗಳಲ್ಲಿ ಬರವಿದ್ದರೆ, ಕೊಡಗು, ಮಡಿಕೇರಿ, ಚಿಕ್ಕಮಗಳೂರು, ಮಂಗಳೂರಿನಲ್ಲಿ ಅತಿವೃಷ್ಠಿ ಎದುರಾಗಿ, ಸಾಕಷ್ಟು ಜನ ನಿರಾಶ್ರಿತರಾದರು. ಇವರ ನೆರವಿಗೆ ರಾಜ್ಯ ಸರಕಾರ ಕೂಡಲೇ ಧಾವಿಸಿ, ಎಲ್ಲ ವ್ಯವಸ್ಥೆ ಮಾಡಿದೆ. ಆದರೆ ಕೇಂದ್ರ ಸರಕಾರದಿಂದ ಸಣ್ಣ ಹಣಕಾಸಿನ ನೆರವೂ ನಮಗೆ ಸಿಕ್ಕಿಲ್ಲ. ಕೇರಳ ನೆರೆ ಹಾವಳಿಗೆ ಪ್ರಧಾನಿ ಖುದ್ದು ವೈಮಾನಿಕ ಸಮೀಕ್ಷೆ ನಡೆಸಿ ಪರಿಹಾರ ಘೋಷಿಸಿದರು. ಆದರೆ ಕೊಡಗನ್ನು ನಿರ್ಲಕ್ಷಿಸಿದರು ಎಂದರು.
ಜಿಲ್ಲೆಗಳಲ್ಲಿನ ಕೆಲಸಗಳಿಗೆ ಚುರುಕು ಮುಟ್ಟಿಸಲು ಡಿಸಿ ಹಾಗೂ ಸಿಇಒಗಳ ಸಭೆ ಮಾಡಲಾಯಿತು. ಒಟ್ಟಾರೆ ಈ 100 ದಿನದಲ್ಲಿ ರಾಜ್ಯ ಸಮ್ಮಿಶ್ರ ಸರಕಾರ ಸುಗಮವಾಗಿ ನಡೆದಿದೆ ಎಂದು ಡಿಸಿಎಂ ಪರಮೇಶ್ವರ್ ಹೇಳಿದರು.