ಚೆನ್ನೈ: ತಮಿಳುನಾಡಿನ ಮುಲ್ಲಪೆರಿಯಾರ್ ಡ್ಯಾಂನಿಂದ ನೀರು ಬಿಡುಗಡೆ ಮಾಡಿದ್ದೇ ಪ್ರವಾಹಕ್ಕೆ ಕಾರಣ ಎಂಬ ಕೇರಳದ ಆರೋಪವನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ತಮಿಳುನಾಡು ಸಿಎಂ ಇ.ಪಳನಿಸ್ವಾಮಿ ಅವರು, ಇದೊಂದು 'ಆಧಾರರಹಿತ ಮತ್ತು ಸುಳ್ಳು ಆರೋಪ' ಎಂದಿದ್ದಾರೆ.
ತಮಿಳುನಾಡಿನ ಮುಲ್ಲಪೆರಿಯಾರ್ ಡ್ಯಾಂನಿಂದ ದಿಢೀರ್ ನೀರು ಬಿಡುಗಡೆ ಮಾಡಿದ್ದೇ ಕೇರಳ ಪ್ರವಾಹಕ್ಕೆ ಮುಖ್ಯ ಕಾರಣ ಎಂದು ಕೇರಳ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಹೇಳಿಕೆ ನೀಡಿತ್ತು. ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ತಮಿಳುನಾಡು ಮುಖ್ಯಮಂತ್ರಿ ಇ.ಪಳನಿಸ್ವಾಮಿ, "ನೀವು ಹೇಳಿದಂತೆ ಮುಲ್ಲಪೆರಿಯಾರ್ ಒಂದು ಡ್ಯಾಂನಿಂದ ನೀರು ಬಿಡುಗಡೆ ಮಾಡಿದ್ದು ಪ್ರವಾಹಕ್ಕೆ ಕಾರಣ ಎನ್ನುವುದಾದರೆ, ಕೇರಳದ ಇತರ ಭಾಗಗಳಿಗೆ ನೀರು ತಲುಪಲು ಹೇಗೆ ಸಾಧ್ಯವಾಯಿತು? ಸುಮಾರು 80 ಅಣೆಕಟ್ಟೆಗಳಿಂದ ಅನಿಯಮಿತ ನೀರು ಬಿಡುಗಡೆ ಮಾಡಿದ ಪರಿಣಾಮ ಪ್ರವಾಹ ಉಂಟಾಯಿತೇ ಹೊರತು, ಮುಲ್ಲಪೆರಿಯಾರ್ ಡ್ಯಾಂ ನೀರಿನಿಂದಲ್ಲ" ಎಂದಿದ್ದಾರೆ.
"ಕೇರಳದಲ್ಲಿ ಪ್ರವಾಹ ಸಂಭವಿಸಿದ ಒಂದು ವಾರದ ನಂತರ ಮುಲ್ಲಪೆರಿಯರ್ ಅಣೆಕಟ್ಟಿನಿಂದ ನೀರು ಬಿಡುಗಡೆಯಾಗಿದ್ದು, ಪ್ರವಾಹ ಉಂಟಾದ ತಕ್ಷಣವೇ ಅಲ್ಲ. 139 ಅಡಿಗಳಿಗೆ, 141 ಅಡಿ ಮತ್ತು 142 ಅಡಿಗಳನ್ನು ತಲುಪುವವರೆಗೆ ಮೂರು ಬಾರಿ ಎಚ್ಚರಿಕೆ ನೀಡಿ, ಹಂತ ಹಂತವಾಗಿ ನೀರು ಬಿಡುಗಡೆ ಮಾಡಲಾಗಿದೆ" ಎಂದು ಪಳನಿಸ್ವಾಮಿ ಹೇಳಿದ್ದಾರೆ.
ಕೇರಳದ ಇಡುಕ್ಕಿ ಜಿಲ್ಲೆಯ ತಕ್ಕಡಿ ಬಳಿ ಪೆರಿಯಾರ್ ನದಿಗೆ ಮುಲ್ಲಪೆರಿಯಾರ್ ಆಣೆಕಟ್ಟು ನಿರ್ಮಿಸಲಾಗಿದೆ. ಆದರೆ ಈ ಅಣೆಕಟ್ಟಿನ ಮೇಲ್ವಿಚಾರಣೆ ಮತ್ತು ನಿರ್ವಹಣೆಯನ್ನು ತಮಿಳುನಾಡು ಸರಕಾರ ನಿರ್ವಹಿಸುತ್ತಿದೆ.