ಬೆಂಗಳೂರು: ಮೈಸೂರು, ಶಿವಮೊಗ್ಗ ಹಾಗೂ ತುಮಕೂರು ಮಹಾನಗರ ಪಾಲಿಕೆಗಳ ಮೀಸಲಾತಿ, ಕ್ಷೇತ್ರ ಪುನರ್ ವಿಂಗಡಣೆ ಪ್ರಶ್ನಿಸಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ ಬೆನ್ನಲ್ಲೇ ರಾಜ್ಯ ಚುನಾವಣಾ ಆಯೋಗ ಸ್ಥಳೀಯ ಸಂಸ್ಥೆಗಳ ಎರಡನೇ ಹಂತದ ಚುನಾವಣಾ ದಿನಾಂಕವನ್ನು ಘೋಷಿಸಿದೆ.
ಮೈಸೂರು, ಶಿವಮೊಗ್ಗ, ತುಮಕೂರು ಪಾಲಿಕೆ ಚುನಾವಣೆಗೆ ರಾಜ್ಯ ಹೈಕೋರ್ಟ್ ಅಸ್ತು
ಕೆಲ ದಿನಗಳ ಹಿಂದಷ್ಟೇ ಆಗಸ್ಟ್ 29 ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ ಎಂದು ಸುದ್ದಿಗೋಷ್ಟಿ ನಡೆಸುವ ಮೂಲಕ ಘೋಷಿಸಿದ್ದ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಪಿ.ಎನ್. ಶ್ರೀನಿವಾಸಾಚಾರಿ, ಶಿವಮೊಗ್ಗ, ಮೈಸೂರು, ತುಮಕೂರು ಜಿಲ್ಲೆಗಳ ಚುನಾವಣೆ ವಿಚಾರ ನ್ಯಾಯಾಲಯದಲ್ಲಿ ಇದ್ದುದರಿಂದ ಈ ಭಾಗದ ವಾರ್ಡ್ಗಳಿಗೆ ಹಾಗೂ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಧಾರವಾಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ಎರಡನೇ ಹಂತದಲ್ಲಿ ಚುನಾವಣೆ ನಡೆಸುವುದಾಗಿ ತಿಳಿಸಿದ್ದರು.
ಇದೀಗ ಕೋರ್ಟ್ ಆದೇಶ ಹೊರಬಿದ್ದಿರುವ ಹಿನ್ನೆಲೆಯಲ್ಲಿ ತುಮಕೂರು, ಶಿವಮೊಗ್ಗ, ಮೈಸೂರು ಮಹಾನಗರ ಪಾಲಿಕೆಗಳ ಚುನಾವಣೆಯು ಆಗಸ್ಟ್ 31ರಂದು ನಡೆಸುವುದಾಗಿ ಚುನಾವಣಾ ಆಯೋಗ ಘೋಷಿಸಿದೆ.
ಎರಡನೇ ಹಂತದ ಸ್ಥಳೀಯ ಸಂಸ್ಥೆ ಚುನಾವಣೆ ವಿವರ
ಆಗಸ್ಟ್ 13 ಕ್ಕೆ ಅಧಿಸೂಚನೆ ಪ್ರಕಟ.
ಆಗಸ್ಟ್ 20 ಕ್ಕೆ ನಾಮಪತ್ರ ಸಲ್ಲಿಕೆ ಕೊನೆದಿನ.
ಆಗಸ್ಟ್ 21 ರಂದು ನಾಮಪತ್ರ ಪರಿಶೀಲನೆ.
ಆಗಸ್ಟ್ 23 ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ.
ಆಗಸ್ಟ್ 31 ಕ್ಕೆ ಮತದಾನ.
ಸೆಪ್ಟೆಂಬರ್ 3 ಕ್ಕೆ ಮತ ಎಣಿಕೆ.
ಸ್ಥಳೀಯ ಸಂಸ್ಥೆಗಳ ಚುನಾವಣಾ ದಿನಾಂಕ ಪ್ರಕಟ
ಮೊದಲ ಹಂತದಲ್ಲಿ 29 ನಗರಸಭೆಯ 927 ವಾರ್ಡ್ಗಳು, 53 ಪುರಸಭೆಯ 1,247 ವಾರ್ಡ್ಗಳು ಹಾಗೂ 23 ಪಟ್ಟಣ ಪಂಚಾಯಿತಿಗಳ 400 ವಾರ್ಡ್ಗಳು ಸೇರಿ ಒಟ್ಟು 2,574 ವಾರ್ಡ್ಗಳಿಗೆ ಇದೇ ತಿಂಗಳ 29ರಂದು ಮೊದಲ ಹಂತದ ಮತದಾನ ನಡೆಯಲಿದೆ. ಫಲಿತಾಂಶ ಸೆಪ್ಟೆಂಬರ್ 1ಕ್ಕೆ ಪ್ರಕಟವಾಗಲಿದೆ.