ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರ ಪೊಳ್ಳು ಭರವಸೆಗಳಿಂದಾಗಿ ಆಂಧ್ರಕ್ಕೆ ಅನ್ಯಾಯವಾಗಿದೆ ಎಂದು ಟಿಡಿಪಿ ವಾಗ್ದಾಳಿ ನಡೆಸಿದೆ.
ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಸಂಬಂಧ ನಡೆದ ಚರ್ಚೆಯಲ್ಲಿ ಮಾತನಾಡಿದ ಟಿಡಿಪಿ ಸಂಸದ ಜಯದೇವ್ ಗಲ್ಲಾ, ನರೇಂದ್ರ ಮೋದಿ ಅವರು ಆಂಧ್ರಪ್ರದೇಶದಲ್ಲಿ ಪ್ರಚಾರ ಮಾಡುವ ಸಂದರ್ಭದಲ್ಲಿ "ಕಾಂಗ್ರೆಸ್ ತಾಯಿಯನ್ನು ಉಳಿಸಿ, ಮಗುವನ್ನು ಕೊಂದಿದೆ. ನಾನೇನಾದರೂ ಆ ಸ್ಥಾನದಲ್ಲಿದ್ದರೆ ತಾಯಿ ಮತ್ತು ಮಗು ಇಬ್ಬರನ್ನೂ ರಕ್ಷಿಸುತ್ತಿದ್ದೆ" ಎಂದು ಹೇಳಿದ್ದರು. ಆದರೆ ತಾಯಿಯನ್ನು ಮೋದಿ ರಕ್ಷಿಸುವರೇ ಎಂದು ಆಂಧ್ರದ ಜನತೆ 4 ವರ್ಷಗಳಿಂದ ಕಾಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಕೇಂದ್ರ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ. ಆಂಧ್ರ ಪ್ರದೇಶ ಹಳೆಯ ಹೆಸರಾದರೂ ಅದು ಹೊಸ ರಾಜ್ಯ, ತೆಲಂಗಾಣ ಹೊಸ ಹೆಸರಾದರೂ ಅದು ಹಳೆಯ ರಾಜ್ಯ. ಇದು ಕೇಂದ್ರ ಸರ್ಕಾರಕ್ಕೆ ತಿಳಿದಿದ್ದರೂ ಆರ್ಥಿಕವಾಗಿ ತೆಲಂಗಾಣಕ್ಕೆ ಬೆಂಬಲ ನೀಡಿದೆ. ಆಸ್ತಿಯನ್ನೆಲ್ಲಾ ತೆಲಂಗಾಣಕ್ಕೆ ನೀಡಿ ಸಾಲವನ್ನೆಲ್ಲಾ ಆಂಧ್ರದ ಮೇಲೆ ಹೊರಿಸಿದೆ. ಮೋದಿ ಸರ್ಕಾರ 2014ರ ಚುನಾವಣೆ ವೇಳೆ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಭರವಸೆ ನೀಡಿದ್ದರು. ಆದರೆ ಇದುವರೆಗೂ ಅದು ಭರವಸೆಯಾಗಿಯೇ ಉಳಿದಿದೆ ಎಂದರು.
ಮುಂದುವರೆದು ಮಾತನಾಡಿದ ಗಲ್ಲಾ, ಜನ ನಿಮ್ಮನ್ನು(ಮೋದಿ) ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ. ಆಂಧ್ರಪ್ರದೇಶದ ಜನತೆಗೆ ಮೋಸ ಮಾಡಿದರೆ ರಾಜ್ಯದಲ್ಲಿ ಬಿಜೆಪಿ ನಿರ್ನಾಮವಾಗಲಿದೆ. ಪ್ರಧಾನಿ ಮೋದಿ ಅವರೇ, ಇದು ಬೆದರಿಕೆಯಲ್ಲ, ಶಾಪ ಎಂದು ಆಕ್ರೋಶ ವ್ಯಕ್ತಪಡಿಸಿದರು.