ಏರ್ಸೆಲ್ ಮ್ಯಾಕ್ಸಿಸ್ ಪ್ರಕರಣ: ಪಿ.ಚಿದಂಬರಂ, ಕಾರ್ತಿ ವಿರುದ್ಧ ಸಿಬಿಐ ಪೂರಕ ಚಾರ್ಜ್ ಶೀಟ್ ಸಲ್ಲಿಕೆ

ಏರ್ಸೆಲ್ ಮ್ಯಾಕ್ಸಿಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಮಾಜಿ ಸಚಿವ ಪಿ.ಚಿದಂಬರಂ ಮತ್ತು ಅವರ ಪುತ್ರ ಕಾರ್ತಿ ಚಿದಂಬರಂ ವಿರುದ್ಧ ಸಿಬಿಐ ಪೂರಕ ಚಾರ್ಜ್ ಶೀಟ್ ಸಲ್ಲಿದೆ.   

Last Updated : Jul 19, 2018, 07:10 PM IST
ಏರ್ಸೆಲ್ ಮ್ಯಾಕ್ಸಿಸ್ ಪ್ರಕರಣ: ಪಿ.ಚಿದಂಬರಂ, ಕಾರ್ತಿ ವಿರುದ್ಧ ಸಿಬಿಐ ಪೂರಕ ಚಾರ್ಜ್ ಶೀಟ್ ಸಲ್ಲಿಕೆ title=

ನವದೆಹಲಿ: ಏರ್ಸೆಲ್ ಮ್ಯಾಕ್ಸಿಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಮಾಜಿ ಸಚಿವ ಪಿ.ಚಿದಂಬರಂ ಮತ್ತು ಅವರ ಪುತ್ರ ಕಾರ್ತಿ ಚಿದಂಬರಂ ವಿರುದ್ಧ ಸಿಬಿಐ ಪೂರಕ ಚಾರ್ಜ್ ಶೀಟ್ ಸಲ್ಲಿದೆ. 

ಸಿಬಿಐ ವಿಶೇಷ ನ್ಯಾಯಾಧೀಶ ಒ.ಪಿ.ಸೈನಿ ಅವರ ಮುಂದೆ ಸಿಬಿಐ ಚಾರ್ಜ್ ಶೀಟ್ ಸಲ್ಲಿಸಿದ್ದು, ಜುಲೈ 31ರಂದು ವಿಚಾರಣೆ ನಡೆಸಲು ನ್ಯಾಯಾಲಯ ತೀರ್ಮಾನಿಸಿದೆ. 

ಸಿಬಿಐ ತನ್ನ ಪೂರಕ ಚಾರ್ಜ್ ಶೀಟ್'ನಲ್ಲಿ ಪಿ.ಚಿದಂಬರಂ ಅವರು ಕೇಂದ್ರ ಆರ್ಥಿಕ ಸಚಿವರಾಗಿದ್ದಾಗ ಎರಡು ರೀತಿಯಲ್ಲಿ ವಿದೇಶಿ ಹೂಡಿಕೆ ಪ್ರೋತ್ಸಾಹ ಮಂಡಳಿ (ಎಫ್ಐಪಿಬಿ) ಅನುಮೋದನೆ ಮೂಲಕ ಹೇಗೆ ಅವ್ಯವಹಾರ ನಡೆಸಲಾಗಿದೆ ಎಂಬುದರ ಬಗ್ಗೆ ವಿವರಿಸಿದೆಯಲ್ಲದೆ, ಈ ಪ್ರಕರಣದಲ್ಲಿ ಪಾಲ್ಗೊಂಡಿದ್ದ ಕೆಲವು ಅಧಿಕಾರಿಗಳು ಇನ್ನೂ ಸೇವೆಯಲ್ಲಿದ್ದು, ಹಲವರು ನಿವೃತ್ತಿಯಾಗಿದ್ದಾರೆ ಎಂದು ಹೇಳಿದೆ. 

ಕಳೆದ ವಾರವಷ್ಟೇ, ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯ ಚಿದಂಬರಂ ಮತ್ತು ಕಾರ್ತಿ ಅವರ ರಕ್ಷಣೆಯನ್ನು ಆಗಸ್ಟ್ 7 ರವರೆಗೆ ವಿಸ್ತರಿಸಿದೆ. 

ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ಪಿ. ಚಿದಂಬರಂ, "ಸಿಬಿಐ ತನ್ನ ಮೇಲಿನ ಒತ್ತಡದಿಂದಾಗಿ ಹೊಸ ಚಾರ್ಜ್‌ ಶೀಟ್‌ ಹಾಕಿದೆ. ಪ್ರಕರಣವು ಈಗ ಕೋರ್ಟ್‌ನಲ್ಲಿದೆ; ನಾವು ಬಲವಾದ ಕಾನೂನು ಹೋರಾಟ ಮಾಡುವೆವು.  ಸದ್ಯಕ್ಕೆ ಈ ಕುರಿತಂತೆ ಯಾವುದೇ ಬಹಿರಂಗ ಹೇಳಿಕೆ ನೀಡುವುದಿಲ್ಲ' ಎಂದು ಟ್ವೀಟ್ ಮಾಡಿದ್ದಾರೆ.

ಏರ್'ಸೆಲ್ ಮ್ಯಾಕ್ಸಿಸ್ ಪ್ರಕರಣವು 2ಜಿ ಸ್ಪೆಕ್ಟ್ರಂ ಪ್ರಕರಣದಿಂದ ಬಹಿರಂಗವಾದ ಹಗರಣವಾಗಿದೆ. ಏರ್'ಸೆಲ್'ಗೆ ಹೂಡಿಕೆ ಮಾಡಲು ಎಂ/ಎಸ್ ಗ್ಲೋಬರ್ ಕಮ್ಯುನಿಕೇಷನ್ ಹೋಲ್ಡಿಂಗ್ ಸರ್ವೀಸಸ್ ಲಿಮಿಟೆಡ್'ಗೆ ಫಾರಿನ್ ಇನ್ವೆಸ್ಟ್ ಮೆಂಟ್ ಬೋರ್ಡ್ ಸಮ್ಮತಿ ನೀಡಿದ್ದ ಆರೋಪ ಪ್ರಕರಣ ಇದಾಗಿದ್ದು, 2006ರಲ್ಲಿ ನಡೆದ ರೂ.600 ಕೋಟಿಯ ಈ ವ್ಯವಹಾರದ ಹಿಂದೆ ಪಿ.ಚಿದಂಬರಂ ಅವರ ಕೈವಾಡವಿದೆ ಎಂದು ಜಾರಿ ನಿರ್ದೇಶನಾಲಯ ಆರೋಪ ಮಾಡಿತ್ತು. 
 

Trending News