ಬೆಂಗಳೂರು: ಕುಮಾರಸ್ವಾಮಿ ಮುಖ್ಯಮಂತ್ರಿ ಆದರೆಂದು ನಾನು ವಿಶ್ರಾಂತಿ ಪಡೆಯುವುದಿಲ್ಲ. ಮೈತ್ರಿ ಸರ್ಕಾರಕ್ಕೆ ಕುಂದು ಬರದಂತೆ ನೋಡಿಕೊಳ್ಳಲು ನಾನು ಹೋರಾಟಕ್ಕೆ ಸಿದ್ಧವಾಗಿದ್ದೇನೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಹೇಳಿದ್ದಾರೆ.
ಜೆಡಿಎಸ್ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಅಭಿನದನಾ ಕಾರ್ಯಕ್ರಮದಲ್ಲಿ ಮಾತನಾಡಿದ ದೇವೇಗೌಡರು, ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸೇರುತ್ತಿದ್ದ ಜನಸಾಗರವನ್ನು ಕಂಡು ಬಹುಶಃ 100ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸುವ ವಿಶ್ವಾಸ ಹೊಂದಿದ್ದೆವು. ಆದರೆ ಕುಮಾರಸ್ವಾಮಿಯವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಕೊಟ್ಟ ಯೋಜನೆಗಳು ಕಾರ್ಯಕ್ರಮಗಳನ್ನು ಜನರ ಮುಂದಿಡುವಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ವಿಫಲವಾಗಿದ್ದು ಮತ್ತು ಮಾಧ್ಯಮದವರ ಅಸಹಕಾರವೇ ಜೆಡಿಎಸ್ ಸೋಲಿಗೆ ಕಾರಣ ಎಂದು ಎಂದು ಬೇಸರ ವ್ಯಕ್ತಪಡಿಸಿದರಲ್ಲದೆ, ಮೈತ್ರಿ ಸರಕಾರವನ್ನು ಮತ್ತಷ್ಟು ಭದ್ರವಾಗಿಸಲು ಹೋರಾಡುವುದಾಗಿ ದೇವೇಗೌಡರು ನುಡಿದರು.
ಮುಂದುವರೆದು ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಸಮ್ಮಿಶ್ರ ಸರ್ಕಾರದಲ್ಲಿ ಬಹಳ ಎಚ್ಚರಿಕೆಯಿಂದ ಹೆಜ್ಜೆಗಳನ್ನಿಡಬೇಕು. ರಾಜ್ಯದ ಜನತೆಯ ಏಳಿಗೆಗಾಗಿ ಕುಮಾರಸ್ವಾಮಿ ಬೆಳಗ್ಗೆಯಿಂದ ರಾತ್ರಿಯವರೆಗೂ ಕೆಲಸ ಮಾಡುತ್ತಿದ್ದಾರೆ. ಆರೋಗ್ಯ ಲೆಕ್ಕಿಸದೇ 18 ಗಂಟೆ ಕೆಲಸ ಮಾಡುತ್ತಿದ್ದಾರೆ. ಸದ್ಯ ಗ್ರಾಮ ವಾಸ್ತವ್ಯ ಮಾಡಲು ಕುಮಾರಸ್ವಾಮಿಗೆ ಸಮಯವಿಲ್ಲ. ಅವರ ಆರೋಗ್ಯದ ಬಗ್ಗೆ ನನಗೆ ಚಿಂತೆಯಾಗಿದೆ ಎಂದರು.
ರಾಜ್ಯ ಬಜೆಟ್ ಬಗ್ಗೆ ವಿರೋಧ ಪಕ್ಷಗಳ ಟೀಕೆ ಕುರಿತು ಪ್ರತಿಕ್ರಿಯಿಸಿದ ದೇವೇಗೌಡರು, ಒಂದೆಡೆ ಜೆಡಿಎಸ್ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕು, ಮತ್ತೊಂದೆಡೆ ಕಾಂಗ್ರೆಸ್ ಬಜೆಟ್ ಮುಂದುವರೆಸಬೇಕು. ಈ ಎಲ್ಲದರ ನಡುವೆ ಸಾಕಷ್ಟು ಆಲೋಚಿಸಿ ಕುಮಾರಸ್ವಾಮಿ ಬಜೆಟ್ ಮಂಡನೆ ಮಾಡಿದ್ದಾರೆ. ಒಂದೇ ಬಾರಿಗೆ ರೈತರ 47,000 ಕೋಟಿ ರೂ. ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ. ಅದು ಅಷ್ಟು ಸುಲಭದ ಮಾತಲ್ಲ. ಹಾಗಾಗಿ ನಾಲ್ಕು ಕಂತುಗಳಲ್ಲಿ ಅದನ್ನು ತೀರಿಸುವ ಜವಾಬ್ದಾರಿಯನ್ನು ಕುಮಾರಸ್ವಾಮಿ ಹೊತ್ತಿದ್ದಾರೆ. ವಿಪಕ್ಷಗಳ ಎಲ್ಲಾ ಟೀಕೆಗಳಿಗೆ, ಪ್ರಶ್ನೆಗಳಿಗೆ ಕುಮಾರಸ್ವಾಮಿ ಸಮರ್ಥವಾಗಿ ಉತ್ತರಿಸಲಿದ್ದಾರೆ. ಸಮ್ಮಿಶ್ರ ಸರ್ಕಾರವನ್ನು ಯಶಸ್ವಿಯಾಗಿ ಮುನ್ನಡೆಸುವುದೇ ನಮ್ಮ ಉದ್ದೇಶ ಎಂದು ದೇವೇಗೌಡರು ಹೇಳಿದರು.